Asianet Suvarna News Asianet Suvarna News

ಚನ್ನಪಟ್ಟಣ ಬೈಎಲೆಕ್ಷನ್‌: ರಾಜಕೀಯ ಭವಿಷ್ಯ ನಿರ್ಧರಿಸುವ ಚುನಾವಣೆ

ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದು, ಜೆಡಿಎಸ್‌ನಿಂದ ಆ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ನಿಂದ ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಯಾರೇ ಅಭ್ಯರ್ಥಿಯಾದರೂ ಅವರು ಮುಂದಿನ ರಾಜಕೀಯ ಪಯಣ ನಿರ್ಧರಿಸಲಿರುವ ಚುನಾವಣೆ ಇದಾಗಿರುವುದರಿಂದ ಎಲ್ಲರೂ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ.

Channapatna Byelections that decide political future in Karnataka grg
Author
First Published Oct 18, 2024, 6:13 PM IST | Last Updated Oct 18, 2024, 6:13 PM IST

ವಿಜಯ್ ಕೇಸರಿ 

ಚನ್ನಪಟ್ಟಣ(ಅ.18):  ಪ್ರತಿಷ್ಠಿತ ಕಣ ಎನಿಸಿರುವ ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯ ಅಭ್ಯರ್ಥಿ ಆಯ್ಕೆ ರಾಜಕೀಯ ಪಕ್ಷಗಳಿಗೆ ಕಗ್ಗಂಟಾಗಿ ಪರಿಗಣಮಿಸಿದ್ದು, ಅಭ್ಯರ್ಥಿ ಆಯ್ಕೆ ಕುರಿತಂತೆ ಜಾಣ್ಮೆಯ ನಡೆ ಅನುಸರಿಸುತ್ತಿವೆ. ಎನ್‌ಡಿಎ ಟಿಕೆಟ್‌ಗಾಗಿ ಜೆಡಿಎಸ್ ಬಿಜೆಪಿ ನಡುವೆ ಹಗ್ಗಜಗ್ಗಾಟ ನಡೆದಿದ್ದರೆ, ಕಾಂಗ್ರೆಸ್ ಕಾದು ನೋಡುವ ತಂತ್ರಕ್ಕೆ ಮೊರೆಹೋಗಿದೆ.

ಇನ್ನು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದು, ಜೆಡಿಎಸ್‌ನಿಂದ ಆ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ನಿಂದ ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಯಾರೇ ಅಭ್ಯರ್ಥಿಯಾದರೂ ಅವರು ಮುಂದಿನ ರಾಜಕೀಯ ಪಯಣ ನಿರ್ಧರಿಸಲಿರುವ ಚುನಾವಣೆ ಇದಾಗಿರುವುದರಿಂದ ಎಲ್ಲರೂ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ.

ಚನ್ನಪಟ್ಟಣ ಉಪಚುನಾವಣೆ: ನಿಖಿಲ್ ಸ್ಪರ್ಧೆಗೆ ಹೆಚ್ಚಿದ ಒತ್ತಡ, ಅದನ್ನ ತೀರ್ಮಾನ ಮಾಡೋರು ಅವರೇ ಎಂದ ಸಾರಾ ಮಹೇಶ್!

ಬಿಜೆಪಿ-ಜೆಡಿಎಸ್ ಟಿಕೆಟ್ ತಿಕ್ಕಾಟ: 

ಎನ್‌ಡಿಎ ಟಿಕೆಟ್‌ಗಾಗಿ ಬಿಜೆಪಿ-ಜೆಡಿಎಸ್ ನಡುವೆ ಸಾಕಷ್ಟು ಪೈಪೋಟಿ ನಡೆಯುತ್ತಿದೆ. ಕ್ಷೇತ್ರವನ್ನು ತಮ್ಮ ಪಕ್ಷಕ್ಕೆ ಉಳಿಸಿಕೊಳ್ಳಬೇಕು ಎಂದು ಎರಡು ಪಕ್ಷಗಳು ತಿಕ್ಕಾಟ ನಡೆಸುತ್ತಿವೆ. ಸಿ.ಪಿ.ಯೋಗೇಶ್ವರ್ ಎನ್‌ಡಿಎ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದರೆ, ಜೆಡಿಎಸ್ ಶಾಸಕರು ಇದ್ದ ಕ್ಷೇತ್ರ ಇದಾಗಿರುವುದರಿಂದ ಕ್ಷೇತ್ರವನ್ನು ಜೆಡಿಎಸ್‌ಗೆ ಉಳಿಸಿಕೊಂಡು ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕೆ ಇಳಿಸಬೇಕು ಎಂಬುದು ಪಕ್ಷದ ಕಾರ್ಯಕರ್ತರ ಒತ್ತಾಯವಾಗಿದೆ.

ಸ್ಪರ್ಧಿಸುವರೇ ನಿಖಿಲ್: 

೨೦೧೯ರಲ್ಲಿ ನಡೆದಿದ್ದ ಮಂಡ್ಯ ಲೋಕಸಭಾ ಚುನಾವಣೆ ಹಾಗೂ ೨೦೨೩ರ ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ ಸೋಲಿನ ಕಹಿಯುಂಡಿದ್ದಾರೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದರೂ ಸಹ ತಮ್ಮ ನಿಲುವನ್ನು ಬಹಿರಂಗಪಡಿಸುತ್ತಿಲ್ಲ. ಈಗಾಗಲೇ ನಿಖಿಲ್ ಕುಮಾರಸ್ವಾಮಿ ಹಾಗೂ ಖುದ್ದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಒಂದು ಸುತ್ತು ಪ್ರವಾಸ ನಡೆಸಿ ತಾಲೂಕಿನ ಜನರ ನಾಡಿಮಿಡಿತ ಅರಿಯುವ ಪ್ರಯತ್ನ ಮಾಡಿದ್ದರೂ ಸಹ ಸ್ಪರ್ಧೆಯ ಕುರಿತು ಗುಟ್ಟುಬಿಟ್ಟುಕೊಡುತ್ತಿಲ್ಲ.

ಕ್ಷೇತ್ರದಿಂದ ಎರಡು ಬಾರಿ ಗೆಲುವು ಸಾಧಿಸಿ ಒಮ್ಮೆ ಕ್ಷೇತ್ರದಿಂದ ಮುಖ್ಯಮಂತ್ರಿಯೂ ಆಗಿದ್ದ ಪ್ರಸ್ತುತ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕ್ಷೇತ್ರವನ್ನು ಪಕ್ಷದ ತೆಕ್ಕೆಯಲಿಯೇ ಉಳಿಸಿಕೊಳ್ಳುವ ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ಜಿಲ್ಲೆಯಲ್ಲಿ ಜೆಡಿಎಸ್ ಶಾಸಕರಿದ್ದ ಏಕೈಕ ಕ್ಷೇತ್ರ ಇದಾಗಿದ್ದ ಕಾರಣ ಕ್ಷೇತ್ರವನ್ನು ಮರಳಿ ತೆಕ್ಕೆಗೆ ತೆಗೆದುಕೊಂಡು ಜಿಲ್ಲೆಯಲ್ಲಿ ಜೆಡಿಎಸ್ ನೆಲೆ ಭದ್ರಪಡಿಸುವ ಅವಶ್ಯಕತೆ ಅವರಿಗಿದೆ.

ಸ್ಪರ್ಧೆಗೆ ಸಜ್ಜಾಗಿರುವ ಸೈನಿಕ: 

ಇನ್ನು ಕ್ಷೇತ್ರದ ಎನ್‌ಡಿಎ ಹುರಿಯಾಳಾಗಲು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಸಜ್ಜಾಗಿದ್ದಾರೆ. ಅವರು ಎನ್‌ಡಿಎ ಮೈತ್ರಿಕೂಟದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇತ್ತೀಚಿಗೆ ನಡೆದ ಕೆಲ ಬೆಳವಣಿಗೆಗಳಲ್ಲಿ ಕ್ಷೇತ್ರ ಜೆಡಿಎಸ್ ಪಾಲಾಗುವ ಸುಳಿವು ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಕೈತಪ್ಪಿದಲ್ಲಿ ಪಕ್ಷೇತರ ಅಥವಾ ಬೇರೆ ಪಕ್ಷದಿಂದ ಸ್ಪರ್ಧಿಸುವಂತೆ ಅವರ ಬೆಂಬಲಿಗರು ಒತ್ತಾಯಿಸುತ್ತಿದ್ದರೂ ಸಹ ಸಿಪಿವೈ ಜಾಣ್ಮೆಯ ನಡೆ ಅನುಸರಿಸುತ್ತಿದ್ದು, ಕಾದುನೋಡಲು ನಿರ್ಧರಿಸಿದಂತೆ ಇದೆ.
ಐದು ಬಾರಿ ಕ್ಷೇತ್ರದ ಶಾಸಕರಾಗಿರುವ ಯೋಗೇಶ್ವರ್ ಕಳೆದ ಎರಡು ಚುನಾವಣೆಯಲ್ಲಿ ಸತತ ಸೋಲು ಅನುಭವಿಸಿದ್ದಾರೆ. ಕ್ಷೇತ್ರದಲ್ಲಿ ತನ್ನ ನೆಲೆ ಗಟ್ಟಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಚುನಾವಣೆ ಅವರಿಗೆ ಅನಿವಾರ್ಯವಾಗಿದೆ. ತಮ್ಮದೇ ರಾಜಕೀಯ ತಂತ್ರಗಾರಿಕೆಯಲ್ಲಿ ತೊಡಗಿರುವ ಅವರು ಟಿಕೆಟ್ ವಿಚಾರದಲ್ಲಿ ಸದ್ಯಕ್ಕೆ ಆತುರದ ನಿರ್ಧಾರ ಕೈಗೊಳ್ಳಬಾರದು ಎಂದು ನಿರ್ಧರಿಸಿದ್ದು, ತಾಳ್ಮೆಯ ಹೆಜ್ಚೆ ಇಡುತ್ತಿದ್ದಾರೆ.

ಡಿಕೆಶಿ ಕಾದು ನೋಡುವ ತಂತ್ರ: 

ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಬಾವುಟ ಹಾರಿಸುವ ಮೂಲಕ ಜಿಲ್ಲೆಯನ್ನು ಕ್ಲೀನ್ ಸ್ವೀಪ್ ಮಾಡಬೇಕು ಎಂಬ ಆಸೆಯಲ್ಲಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಈಗಾಗಲೇ ಕ್ಷೇತ್ರಾದ್ಯಂತ ಒಂದು ಸುತ್ತಿನ ಪ್ರವಾಸ ನಡೆಸಿದ್ದಾರೆ. ಕಾಂಗ್ರೆಸ್‌ನಿಂದ ಯಾರೇ ಸ್ಪರ್ಧಿಸಿದರೂ ಕ್ಷೇತ್ರದ ಅಭ್ಯರ್ಥಿ ನಾನೇ ಎಂದು ಘೋಷಿಸಿದ್ದಾರೆ. ಸಿಎಂ ಸ್ಥಾನದ ಆಕಾಂಕ್ಷಿಯಾಗಿರುವ ಅವರಿಗೆ ಈ ಚುನಾವಣೆ ಪ್ರತಿಷ್ಠೆಯದಾಗಿದೆ. ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಲ್ಲಿ ತಮ್ಮ ರಾಜಕೀಯ ಭವಿಷ್ಯಕ್ಕೆ ಒಂದು ಮೆಟ್ಟಿಲಾಗಲಿದೆ ಎಂಬ ಲೆಕ್ಕಾಚಾರದಲ್ಲಿ ಅವರು ಇದ್ದು, ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.

ಸ್ಪರ್ಧಿಸುವರೇ ಸುರೇಶ್?:

ಕಾಂಗ್ರೆಸ್‌ನಿಂದ ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರು ಪ್ರಬಲವಾಗಿ ಕೇಳಿಬರುತ್ತಿದ್ದು, ಕ್ಷೇತ್ರ ಮುಖಂಡರು ಹಾಗೂ ಕಾರ್ಯಕರ್ತರು ಸಹ ಸುರೇಶ್ ಚನ್ನಪಟ್ಟಣ ಉಪಚುನಾವಣೆಯ ಅಭ್ಯರ್ಥಿಯಾಗಬೇಕು ಎಂದು ಬಯಸಿದ್ದಾರೆ. ಹ್ಯಾಟ್ರಿಕ್ ಸಂಸದ ಎನ್ನಿಸಿದ್ದ ಸುರೇಶ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಇದೀಗ ಅವರ ಸ್ಪರ್ಧೆಗೆ ಕಾಂಗ್ರೆಸ್ ವಲಯದಲ್ಲಿ ಸಾಕಷ್ಟು ಒತ್ತಡ ಕೇಳಿಬರುತಿದ್ದರೂ ಅವರು ನಿರ್ಲಿಪ್ತರಾಗಿದ್ದಾರೆ.

ಚನ್ನಪಟ್ಟಣ ಟಿಕೆಟ್‌ ನನಗೇ ಎಂದ ಯೋಗೇಶ್ವರ್‌: ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದಿಷ್ಟು

ಸರ್ವೇ ಮಾಡಿಸಿ ಸುಮ್ಮನಿರುವ ಪಕ್ಷಗಳು!

ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ತಮ್ಮದೇ ಆದ ಸರ್ವೇ ಮಾಡಿಸಿವೆ. ಕ್ಷೇತ್ರದ ವಾತಾವರಣ, ತಮ್ಮ ಪಕ್ಷದ ಕಾರ್ಯಕರ್ತರ ಅಭಿಮತ, ಜನರ ಅಭಿಪ್ರಾಯಗಳ ಕುರಿತು ಸರ್ವೇ ನಡೆಸಿದ್ದು, ಕ್ಷೇತ್ರದ ಗ್ರೌಂಡ್ ರಿಪೋರ್ಟ್ ಅನ್ನು ತರಿಸಿಕೊಂಡಿವೆ. ಆದರೂ, ಮೂರು ಪಕ್ಷಗಳು ತಮ್ಮ ಅಭ್ಯರ್ಥಿ ಯಾರೆಂದು ಮೊದಲಿಗೆ ಘೋಷಣೆ ಮಾಡುವ ಸಾಹಸ ಮಾಡುತ್ತಿಲ್ಲ.

ಜೆಡಿಎಸ್-ಬಿಜೆಪಿ ನಡುವೆ ಟಿಕೆಟ್ ಕಗ್ಗಂಟು ಮುಂದುವರಿದಿದ್ದು, ಮೊದಲಿಗೆ ಟಿಕೆಟ್ ಗೊಂದಲ ಬಗೆಹರಿಯಬೇಕಿದೆ. ಇನ್ನು ಮೈತ್ರಿ ಅಭ್ಯರ್ಥಿ ಯಾರೆಂದು ನೋಡಿಕೊಂಡು ತನ್ನ ಪಕ್ಷದ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡುವ ಇರಾದೆಯಲ್ಲಿ ಕಾಂಗ್ರೆಸ್ ಇದ್ದಂತಿದೆ.

Latest Videos
Follow Us:
Download App:
  • android
  • ios