Asianet Suvarna News Asianet Suvarna News

ಚನ್ನಪಟ್ಟಣ ಉಪಚುನಾವಣೆ: ಸಿ.ಪಿ.ಯೋಗೇಶ್ವರ್ ಪರ ಇಂದು ಅಂತಿಮ ಕಸರತ್ತು

ಮುಂಬರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಟಿಕೆಟ್‌ ಸಂಬಂಧ ಬುಧವಾರ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪರವಾಗಿ ಅಂತಿಮ ಹಂತದ ಕಸರತ್ತು ನಡೆಯಲಿದೆ.

channapatna by election Final meeting for CP Yogeshwar today gvd
Author
First Published Aug 28, 2024, 9:42 AM IST | Last Updated Aug 28, 2024, 9:42 AM IST

ಬೆಂಗಳೂರು (ಆ.28): ಮುಂಬರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಟಿಕೆಟ್‌ ಸಂಬಂಧ ಬುಧವಾರ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪರವಾಗಿ ಅಂತಿಮ ಹಂತದ ಕಸರತ್ತು ನಡೆಯಲಿದೆ. ಈ ಸಂಬಂಧ ಯೋಗೇಶ್ವರ್‌ ಮಂಗಳವಾರ ಸಂಜೆಯೇ ದೆಹಲಿ ತಲುಪಿದ್ದು, ಬುಧವಾರ ಆರ್.ಅಶೋಕ್, ಅರವಿಂದ್ ಬೆಲ್ಲದ, ಬಸವರಾಜ ಬೊಮ್ಮಾಯಿ, ಡಾ.ಸಿ. ಎನ್.ಅಶ್ವತ್ಥನಾರಾಯಣ, ಸಿ.ಟಿ.ರವಿ ಮತ್ತಿತರ ನಾಯಕರು ದೆಹಲಿಗೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.

ಬುಧವಾರ ಸಂಜೆ ಬಳಿಕ ವಿವಿಧ ಕೇಂದ್ರ ಸಚಿವರು ಸೇರಿದಂತೆ ಪಕ್ಷದ ವರಿಷ್ಠರನ್ನು ಕಂಡು ಚನ್ನಪಟ್ಟಣ ಕ್ಷೇತ್ರದ ರಾಜಕೀಯ ಲೆಕ್ಕಾಚಾರ ಏನಿದೆ, ಅಲ್ಲಿನ ವಾಸ್ತವಾಂಶ ಏನು, ಉಪಚುನಾವಣೆಯ ಟಿಕೆಟ್ ಅನ್ನು ಯೋಗೇಶ್ವರ್‌ ಅವರಿಗೆ ಯಾಕೆ ನೀಡಬೇಕು ಎಂಬುದನ್ನು ಮನವರಿಕೆ ಮಾಡಿಕೊಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ಯೋಗೇಶ್ವರ್‌ ಅವರು ನಡೆಸುವ ಕೊನೆಯ ಪ್ರಯತ್ನ ಆಗಲಿದೆ. ಈ ಪ್ರಯತ್ನದ ಬಳಿಕವೂ ತಮಗೆ ಟಿಕೆಟ್ ಸಿಗುವ ಬಗ್ಗೆ ಸ್ಪಷ್ಟ ಭರವಸೆ ಸಿಗದೇ ಇದ್ದಲ್ಲಿ ಯೋಗೇಶ್ವರ್‌ ಅವರು ಪಕ್ಷೇತರರಾಗಿ ಕಣಕ್ಕಿಳಿಯುವ ಅಥವಾ ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. 

ಕಳೆದ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯೋಗೇಶ್ವರ್ರ್‌ ಅವರು ಬಳಿಕ ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡರ ಅಳಿಯ ಡಾ.ಸಿ.ಎನ್.ಮಂಜುನಾಥ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಗೆಲ್ಲುವಲ್ಲಿಯೂ ತಂತ್ರ ರೂಪಿಸಿ ಯಶಸ್ವಿಯಾಗಿದ್ದರು. ಅಲ್ಲದೆ, ಪಕ್ಕದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ಗೆಲುವಿಗೂ ಸಹಕರಿಸಿದ್ದರು. ಇದೀಗ ಕುಮಾರಸ್ವಾಮಿ ಅವರ ತೆರವಿನಿಂದ ಎದುರಾಗಲಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ತಮಗೆ ನೀಡಬೇಕು ಎಂಬ ಬೇಡಿಕೆಯನ್ನು  ಯೋಗೇಶ್ವರ್‌ ಪ್ರತಿಪಾದಿಸುತ್ತಿದ್ದಾರೆ. 

ಸಿದ್ದರಾಮಯ್ಯ ಕೆಳಗಿಳಿಸಿದರೆ ಬಾಂಗ್ಲಾ ರೀತಿ ಜನರು ಮೋದಿ ಮನೆಗೆ ನುಗ್ಗುತ್ತಾರೆ: ಕಾಂಗ್ರೆಸ್ ಶಾಸಕ

ಆರಂಭದಲ್ಲಿ ತಮ್ಮ ಪರ ಮಾತನಾಡುತ್ತಿದ್ದ ಜೆಡಿಎಸ್ ನಾಯಕರು ಇತ್ತೀಚೆಗೆ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿರುವುದು ಯೋಗೇಶ್ವರ್ ಅವರಿಗೆ ಆತಂಕ ಉಂಟು ಮಾಡಿದೆ ಎನ್ನಲಾಗಿದೆ. ಹೀಗಾಗಿಯೇ ಉಪಚುನಾವಣೆಯ ಟಿಕೆಟ್ ಬಗ್ಗೆ ಸ್ಪಷ್ಟ ಭರವಸೆ ಪಡೆದುಕೊಳ್ಳಲು ಮುಂದಾಗಿರುವ ಯೋಗೇಶ್ವರ್‌ರ ಅವರು ಕೆಲವು ದಿನಗಳ ಹಿಂದೆ ಏಕಾಂಗಿಯಾಗಿ ದೆಹಲಿಗೆ ಭೇಟಿ ನೀಡಿ ಒಂದು ಸುತ್ತಿನ ಪ್ರಯತ್ನ ನಡೆಸಿದ್ದರು. ಇದೀಗ ಇತರ ನಾಯಕರೊಂದಿಗೆ ವರಿಷ್ಠರನ್ನು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Latest Videos
Follow Us:
Download App:
  • android
  • ios