ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಲೆನಾಡು ಪ್ರದೇಶಗಳಲ್ಲಿ ದೊಡ್ಡ ಬದಲಾವಣೆ, ಡಿಕೆಶಿ ಸಮೀಕ್ಷೆ
* ಹಲವು ಮುಖಂಡರು ಕಾಂಗ್ರೆಸ್ ಸೇರ್ಪಡೆ
* ಉತ್ತರ ಕನ್ನಡ ಜಿಲ್ಲೆಯ ಜೆಡಿಎಸ್- ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ
* ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಲೆನಾಡು ಪ್ರದೇಶಗಳಲ್ಲಿ ದೊಡ್ಡ ಬದಲಾವಣೆಯಾಗಲಿದೆ ಎಂದ ಡಿಕೆಶಿ
ಬೆಂಗಳೂರು, (ಫೆ.04): ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಇನ್ನೂ ಒಂದು ವರ್ಷ ಬಾಕಿ ಇದೆ. ಆಗಲೇ ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ.
ಇದಕ್ಕೆ ಪೂರಕವೆಂಬಂತೆ ಇಂದು(ಶುಕ್ರವಾರ) ಉತ್ತರ ಕನ್ನಡ ಜಿಲ್ಲೆಯ ಹಲವು ಮುಖಂಡರುಗಳು ಬೇರೆ-ಬೇರೆ ಪಕ್ಷಗಳನ್ನ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
Karnataka Politics: ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನ
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಹಲವು ಮುಖಂಡರುಗಳು ಕಾಂಗ್ರೆಸ್ ಸೇರಿದರು.
ಈ ವೇಳೆ ಮಾತನಾಡಿದ ಡಿಕೆ ಶಿವಕುಮಾರ್, ಉತ್ತರ ಕನ್ನಡದ ನಮ್ಮ ಸ್ನೇಹಿತರು ಸಾಕಷ್ಟು ಬಾರಿ ಪಕ್ಷ ಸೇರಲು ಕಾಲಾವಕಾಶ ಕೇಳಿದರು. ಅವರ ಉತ್ಸಾಹ ನೋಡಿ ಇಂದು ಅವರನ್ನು ಪಕ್ಷ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ನಾನು ಅಲ್ಲೇ ಬಂದು ಪಕ್ಷಕ್ಕೆ ಸೇರಿಸಿಕೊಳ್ಳುತ್ತೇನೆ ಎಂದಿದ್ದೆ. ಆದರೆ ಅವರು ಕೆಪಿಸಿಸಿ ಕಚೇರಿಯಲ್ಲೇ ಸೇರಬೇಕು ಎಂದು ಇಂದು ಇಲ್ಲಿ ಪಕ್ಷ ಸೇರುತ್ತಿದ್ದಾರೆ. ಕಾಂಗ್ರೆಸ್ ಕಚೇರಿ ಎಂದರೆ ಕಾಂಗ್ರೆಸ್ ಕಾರ್ಯಕರ್ತರ ಪಾಲಿಗೆ ದೇವಾಲಯವಿದ್ದಂತೆ. ಹೀಗಾಗಿ ಇಲ್ಲಿ ಪಕ್ಷ ಸೇರುತ್ತಿರುವುದಕ್ಕೆ ಸಂತೋಷ ಎಂದು ಹೇಳಿದರು.
ಉತ್ತರ ಕನ್ನಡದಲ್ಲಿ ಸದ್ಯಕ್ಕೆ ಆರ್.ವಿ ದೇಶಪಾಂಡೆ ಅವರು ಮಾತ್ರ ಶಾಸಕರು. ಅವರು ಸಾಕಷ್ಟು ಪಕ್ಷ ಸಂಘಟನೆ ಮಾಡಿದ್ದಾರೆ. ಒಬ್ಬರು ಆಪರೇಷನ್ ಕಮಲದಿಂದ ಪಕ್ಷ ತೊರೆದಿದ್ದಾರೆ. ನಾನು ಸಮೀಕ್ಷೆ ಮಾಡಿಸಿದ್ದು, ಕರಾವಳಿಯ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಲೆನಾಡು ಪ್ರದೇಶಗಳಲ್ಲಿ ದೊಡ್ಡ ಬದಲಾವಣೆಯ ಸೂಚನೆಯನ್ನು ಮತದಾರರು ನೀಡಿದ್ದಾರೆ ಎಂದು ತಿಳಿಸಿದರು
ನೀವ್ಯಾರು ಶಾಸಕರಾಗಬೇಕು ಎಂಬ ಆಸೆಯಿಂದ ಇಲ್ಲಿಗೆ ಬಂದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಇರಬೇಕು ಎಂಬ ಆಸೆಯಿಂದ ಬಂದಿದ್ದೀರಿ. ನಾನು ಗೋವಾಗೆ ಹೋಗಿದ್ದಾಗ ಅಲ್ಲಿ ನೆಲೆಸಿರುವ ನಿಮ್ಮ ಭಾಗದ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಅಲ್ಲಿನ ಪ್ರಕೃತಿ ಹಾಗೂ ನಮ್ಮ ರಾಜ್ಯದ ಪ್ರಕೃತಿ ಒಂದೇ ರೀತಿ ಇದ್ದರೂ ನಮ್ಮವರು ಯಾಕೆ ಅಲ್ಲಿಗೆ ಹೋಗುತ್ತಿದ್ದಾರೆ. ಮಹಾರಾಷ್ಟ್ರ, ಅರಬ್ ದೇಶಗಳಿಗೆ ಹೋಗಿ ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿ ಏನು ಕಡಿಮೆಯಾಗಿದೆ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ ಎಂದರು.
ನಮ್ಮ ಪಕ್ಷಕ್ಕೆ ಯಾರೇ ಸೇರ್ಪಡೆಯಾಗಬೇಕಾದರೂ ಪಕ್ಷದ ಮಾಜಿ ಅಧ್ಯಕ್ಷರಾದ ಅಲ್ಲಂ ವೀರಭದ್ರಪ್ಪ ಅವರ ನೇತೃತ್ವದ ಸಮಿತಿಗೆ ಅರ್ಜಿ ಹಾಕಬೇಕು, ಚುನಾವಣೆ ಅಥವಾ ತುರ್ತು ಸಂದರ್ಭಗಳಲ್ಲಿ ಪಕ್ಷ ಸೇರ್ಪಡೆ ಅನಿವಾರ್ಯವಾದಾಗ ಮಾತ್ರ ನಾವು ನಿರ್ಧಾರ ಕೈಗೊಳ್ಳುತ್ತೇವೆ. ಉಳಿದ ಸಂದರ್ಭಗಳಲ್ಲಿ ಸಮಿತಿ ಅನುಮತಿ ಕೊಟ್ಟ ನಂತರ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಗೋವಾದಲ್ಲಿ ಮತದಾರರನ್ನು ಭೇಟಿ ಮಾಡಿದಾಗ ಅಲ್ಲಿರುವ ನಮ್ಮವರನ್ನು ಕೇಳಿದೆ. ಯಾಕೆ ಇಲ್ಲಿಗೆ ವಲಸೆ ಬಂದಿದ್ದೀರಿ ಎಂದು. ಆಗ ಅವರು ನಮ್ಮ ಊರಿನಲ್ಲೇ ಉದ್ಯೋಗ ಸಿಕ್ಕಿದ್ದರೆ ನಾವ್ಯಾಕೆ ಇಲ್ಲಿಗೆ ಬಂದು ಕೆಲಸ ಮಾಡುತ್ತಿದ್ದೆವು. ನಮ್ಮ ಊರಿನಲ್ಲೇ ದುಡಿದು ನೆಮ್ಮದಿಯಾಗಿ ಇರುತ್ತಿದ್ದೆವು ಎಂದರು. ಹೀಗಾಗಿ ಕಾಂಗ್ರೆಸ್ ಪಕ್ಷ ಮಲೆನಾಡು ಹಾಗೂ ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರಣಾಳಿಕೆ ಹಾಗೂ ಕಾರ್ಯಕ್ರಮ ರೂಪಿಸುತ್ತೇವೆ. ಗೋವಾ ಹಾಗೂ ಇತರೆ ಕಡೆಗಳಲ್ಲಿ ಯಾವ ರೀತಿ ಉದ್ಯೋಗ ಕಲ್ಪಿಸಲಾಗಿದೆ ಎಂಬುದನ್ನು ಚರ್ಚೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಪಕ್ಷ ಕರಾವಳಿ, ಮಲೆನಾಡು ಪ್ರದೇಶದಲ್ಲಿ ಯಾವ ರೀತಿ ಉದ್ಯೋಗ ಸೃಷ್ಟಿ ಮಾಡಬೇಕು, ಜನರು ವಲಸೆ ಹೋಗುವುದನ್ನು ತಪ್ಪಿಸಲು ಯಾವ ಕಾರ್ಯಕ್ರಮ ರೂಪಿಸಬೇಕು ಎಂಬುದರ ಬಗ್ಗೆ ಕೆಲವರಿಗೆ ಜವಾಬ್ದಾರಿ ನೀಡಿದ್ದೇನೆ. ನಮ್ಮಲ್ಲಿರುವ ಪ್ರಾಕೃತಿಕ ಸಂಪತ್ತು, ಯುವ ಶಕ್ತಿಯನ್ನು ನಾವು ಬೇರೆಯವರಿಗೆ ದಾನ ಮಾಡುತ್ತಿದ್ದೇವೆ. ನಮ್ಮವರು ಬೇರೆ ರಾಜ್ಯಗಳಿಗೆ ವಲಸೆ ಹೋಗುವ ಅಗತ್ಯವಿಲ್ಲ ಎಂದರು.