ವೈಮನಸ್ಸು ಬದಗಿಟ್ಟು ಚುನಾವಣೆ ಎದುರಿಸಿ: ಸಿಎಂ ಸಿದ್ದು, ಡಿಸಿಎಂ ಡಿಕೆಶಿ
ರಾಜ್ಯದ 2ನೇ ಹಂತದ ಚುನಾವಣೆ ನಡೆಯುವ 14 ಕ್ಷೇತ್ರ ವ್ಯಾಪ್ತಿಯಲ್ಲಿನ ಸ್ಥಳೀಯ ಮುಖಂಡರು, ಟಿಕೆಟ್ ಆಕಾಂಕ್ಷಿಗಳಾಗಿದ್ದವರು ಯಾವುದೇ ರೀತಿಯ ಭಿನ್ನಮತವನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಬೇಕು.
ಬೆಂಗಳೂರು (ಏ.06): ರಾಜ್ಯದ 2ನೇ ಹಂತದ ಚುನಾವಣೆ ನಡೆಯುವ 14 ಕ್ಷೇತ್ರ ವ್ಯಾಪ್ತಿಯಲ್ಲಿನ ಸ್ಥಳೀಯ ಮುಖಂಡರು, ಟಿಕೆಟ್ ಆಕಾಂಕ್ಷಿಗಳಾಗಿದ್ದವರು ಯಾವುದೇ ರೀತಿಯ ಭಿನ್ನಮತವನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಅಭ್ಯರ್ಥಿಗಳು ಕೂಡ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಬೇಕು. ಯಾವುದೇ ಅಪಸ್ವರವನ್ನೂ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದರು. ಎರಡನೇ ಹಂತದಲ್ಲಿ ಚುನಾವಣೆ ನಡೆಯುವ 14 ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು, ಶಾಸಕರು, ಸ್ಥಳೀಯ ನಾಯಕರ ಸಭೆ ನಡೆಸಿ ಚುನಾವಣೆ ಕುರಿತಂತೆ ಹಲವು ಸಲಹೆ ಹಾಗೂ ಖಡಕ್ ಸೂಚನೆಯನ್ನು ನೀಡಿದರು.
ಸಚಿವರು ಹಾಗೂ ಅಭ್ಯರ್ಥಿಗಳು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿರುವ ವಿರೋಧವನ್ನು ಹತ್ತಿಕ್ಕುವ ಕೆಲಸ ಮೊದಲು ಮಾಡಬೇಕು. ಭಿನ್ನಮತೀಯರನ್ನು ಒಲಿಸಿಕೊಳ್ಳಲು ಮುಂದಾಗಬೇಕು. ಅದೇ ರೀತಿ ಟಿಕೆಟ್ ಕೈತಪ್ಪಿ ಅಸಮಾಧಾನಗೊಂಡಿರುವ ನಾಯಕರು ಎಲ್ಲವನ್ನೂ ಮರೆತು ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು. ಚುನಾವಣೆ ಸಂದರ್ಭದಲ್ಲಿ ಯಾವುದೇ ವಿರೋಧ ಇಟ್ಟುಕೊಳ್ಳದೆ ಕೆಲಸ ಮಾಡಬೇಕು. ಪಕ್ಷದ ಪರವಾಗಿ ನಡೆಯುವ ಸಮಾವೇಶಗಳಲ್ಲಿ ಹೆಚ್ಚಿನ ಜನರು ಸೇರುವಂತೆ ಮಾಡಬೇಕು. ಹಾಗೆಯೇ, ರಾಜ್ಯ ಸರ್ಕಾರ ಯೋಜನೆಗಳು ಹಾಗೂ ಗ್ಯಾರಂಟಿ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸಿ ಪಕ್ಷದತ್ತ ಸೆಳೆಯುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕರ್ನಾಟಕ ದ್ರೋಹಿ ಮೋದಿಗೆ ತಕ್ಕಪಾಠ ಕಲಿಸಿ: ಸಿಎಂ ಸಿದ್ದರಾಮಯ್ಯ ಕರೆ
ಬಿಜೆಪಿ ವೈಫಲ್ಯ-ಗ್ಯಾರಂಟಿ ಬಗ್ಗೆ ಪ್ರಚಾರ ಮಾಡಿ: ಸಭೆಯಲ್ಲಿ ಪ್ರಮುಖವಾಗಿ ಗ್ಯಾರಂಟಿ ಯೋಜನೆಗಳ ಬಗ್ಗೆ ಮತದಾರರಿಗೆ ತಿಳಿಸುವುದು ಹಾಗೂ ರಾಜ್ಯ ಸರ್ಕಾರದ ಕಾರ್ಯಕ್ರಮಗಳಿಂದ ಜನರಿಗಾಗುತ್ತಿರುವ ಅನುಕೂಲಗಳ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ಚರ್ಚಿಸಲಾಯಿತು. ಜತೆಗೆ ಕಳೆದ 10 ವರ್ಷಗಳಲ್ಲಿ ಬಿಜೆಪಿ ಸರ್ಕಾರದ ವೈಫಲ್ಯಗಳು, ಬೆಲೆ ಏರಿಕೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಹೆಚ್ಚಿನ ಪ್ರಚಾರ ಮಾಡುವ ಕುರಿತಂತೆ ಪ್ರಮುಖವಾಗಿ ಚರ್ಚಿಸಿ, ಸೂಚನೆಗಳನ್ನು ನೀಡಲಾಯಿತು.
ಲಂಬಾಣಿ ನಾಯಕರ ಮೇಲೆ ಸಿಎಂ ಗರಂ: ಸಭೆಯಲ್ಲಿ ಲಂಬಾಣಿ ಸಮುದಾಯದವರಿಗೆ ಲೋಕಸಭಾ ಟಿಕೆಟ್ ಸಿಗದ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಸಚಿವ ಪಿ.ಟಿ. ಪರಮೇಶ್ವರ್ ನಾಯಕ್ ಸೇರಿದಂತೆ ಇತರ ನಾಯಕರು ಹಾಗೂ ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಠೋಡ್, ಲಂಬಾಣಿ ಸಮುದಾಯವನ್ನು ಪಕ್ಷ ಕಡೆಗಣಿಸಿದೆ ಎಂದು ಹೇಳಿದರು. ಅದರಿಂದ ಸಿಟ್ಟಾದ ಸಿಎಂ ಸಿದ್ದರಾಮಯ್ಯ, ರುದ್ರಪ್ಪ ಲಮಾಣಿ ಅವರನ್ನು ವಿಧಾನಸಭೆ ಉಪಾಧ್ಯಕ್ಷರನ್ನಾಗಿ ಮಾಡಿದ್ದೇವೆ. ಭೀಮಾ ನಾಯ್ಕ ಅವರನ್ನು ಕೆಎಂಎಫ್ ಅಧ್ಯಕ್ಷರನ್ನಾಗಿಸಿದ್ದೇವೆ. ಹೀಗೆ ಹಲವು ಅವಕಾಶಗಳನ್ನು ನೀಡಿದ್ದೇವೆ. ಈಗ ಅವೆಲ್ಲ ವಿಚಾರ ಮಾಡುವುದು ಬೇಡ. ಚುನಾವಣೆ ಮುಗಿದ ನಂತರ ಚರ್ಚಿಸೋಣ ಎಂದು ಗದರಿ ಸುಮ್ಮನಾಗಿಸಿದರು.
ಗ್ಯಾರಂಟಿ ಭ್ರಮೆಯಲ್ಲಿ ಸಿದ್ದರಾಮಯ್ಯ ಸರ್ಕಾರ: ಬಿ.ವೈ.ವಿಜಯೇಂದ್ರ
ಆಪರೇಷನ್ ಕಾರ್ಯಕರ್ತ ಮಾಡಿ: ಬೂತ್ ಮಟ್ಟದಲ್ಲಿ ಪಕ್ಷದ ಪರವಾಗಿ ಮತದಾರರನ್ನು ಸೆಳೆಯುವ ಕೆಲಸವಾಗಬೇಕು. ಅದಕ್ಕಾಗಿ ನಮ್ಮ ಕಾರ್ಯಕರ್ತರ ಜತೆಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರನ್ನು ಪಕ್ಷಕ್ಕೆ ಸೆಳೆಯುವ ಕೆಲಸವಾಗಬೇಕು. ಅದಕ್ಕಾಗಿ ಆಪರೇಷನ್ ಕಾರ್ಯಕರ್ತ ಚುರುಕುಗೊಳಿಸಬೇಕು. ಬಿಜೆಪಿ-ಜೆಡಿಎಸ್ ಪಕ್ಷಗಳ ಸ್ಥಳೀಯ ಮುಖಂಡರು ಪಕ್ಷ ಸೇರ್ಪಡೆ ಇಂಗಿತ ವ್ಯಕ್ತಪಡಿಸಿದರೆ ಅವರನ್ನು ಸೇರಿಸಿಕೊಳ್ಳಿ. 20 ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲಲೇಬೇಕು ಎಂಬ ಗುರಿಯಿದೆ. ಅದಕ್ಕಾಗಿ ಪ್ರತಿಯೊಬ್ಬ ಮತದಾರರೂ ಮುಖ್ಯವಾಗಿದ್ದು, ಯಾರೆಲ್ಲ ಪಕ್ಷಕ್ಕೆ ಬರುತ್ತಾರೋ ಅವರನ್ನು ಸೇರ್ಪಡೆ ಮಾಡಿಕೊಳ್ಳಿ ಎಂದು ಸಿಎಂ ಮತ್ತು ಡಿಸಿಎಂ ಸೂಚಿಸಿದರು.