ಚಂದ್ರಯಾನ-3ರಿಂದಾಗಿ ನೈಸ್ ದಾಖಲೆ ಬಿಡುಗಡೆ ಮುಂದಕ್ಕೆ: ಎಚ್.ಡಿ.ಕುಮಾರಸ್ವಾಮಿ
ಚಂದ್ರಯಾನ-3 ರೋವರ್ ಚಂದ್ರನ ಮೇಲೆ ಬುಧವಾರ ಇಳಿಯಲಿದೆ. ಎಲ್ಲರಂತೆ ನನಗೂ ಕುತೂಹಲ ಇದೆ. ಪ್ರತಿಯೊಬ್ಬರ ಗಮನವೂ ಆ ಕಡೆಯೇ ಇರುತ್ತದೆ. ಹೀಗಾಗಿ ಬುಧವಾರದ ಬಳಿಕ ನೈಸ್ ಅಕ್ರಮ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು (ಆ.23): ಚಂದ್ರಯಾನ-3 ರೋವರ್ ಚಂದ್ರನ ಮೇಲೆ ಬುಧವಾರ ಇಳಿಯಲಿದೆ. ಎಲ್ಲರಂತೆ ನನಗೂ ಕುತೂಹಲ ಇದೆ. ಪ್ರತಿಯೊಬ್ಬರ ಗಮನವೂ ಆ ಕಡೆಯೇ ಇರುತ್ತದೆ. ಹೀಗಾಗಿ ಬುಧವಾರದ ಬಳಿಕ ನೈಸ್ ಅಕ್ರಮ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಯೋಜನೆ ಹೆಸರಲ್ಲಿ ಏನೇನು ಆಗಿದೆ? ಎಷ್ಟೆಲ್ಲಾ ಅಕ್ರಮ ನಡೆದಿದೆ? ಯಾರೆಲ್ಲಾ ಫಲಾನುಭವಿಗಳು ಇದ್ದಾರೆ? ಎಲ್ಲವನ್ನೂ ಜನರ ಮುಂದೆ ಇಡುತ್ತೇನೆ. ಕೆಲವರ ಹಣೆಬರಹ ಆಚೆಗೆ ಬರುತ್ತದೆ. ಹೀಗಾಗಿ ಕೆಲ ದಿನದಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದರು.
ಕೆಲವರು ನೈಸ್ ಯೋಜನೆ ದೇವೇಗೌಡರ ಪಾಪದ ಕೂಸು ಎಂದಿದ್ದಾರೆ. ಅವರಿಗೆ ಗೊತ್ತಿರಲಿ, ಯೋಜನೆಯ ಮೂಲ ಒಪ್ಪಂದ ಏನಿದೆ? ಅದನ್ನು ಅವರು ಓದಿಕೊಳ್ಳಬೇಕು. ಅದನ್ನು ಪೂರ್ಣವಾಗಿ ತಿಳಿದು ಮಾತನಾಡಿದರೆ ಚೆನ್ನಾಗಿರುತ್ತದೆ. ರಸ್ತೆ ಮಾಡಬೇಕು ಎಂಬ ಉದ್ದೇಶದಿಂದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಒಪ್ಪಂದ ಮಾಡಿಕೊಂಡಿದ್ದರು. ಬೆಂಗಳೂರು ಮತ್ತು ಮೈಸೂರು ನಡುವೆ ಓಡಾಡುವ ಜನರಿಗೆ ಒಳ್ಳೆಯದಾಗಲಿ ಎಂದು ರಸ್ತೆಗೆ ಅನುಮತಿ ನೀಡಲಾಯಿತು. ಆದರೆ, ಆ ಮಹಾನುಭಾವರು ಮಾಡಿದ್ದೇನು? ಮೂಲ ಒಪ್ಪಂದವನ್ನು ಹೇಗೆಲ್ಲ ತಿರುಚಿದರು. ಇವರ ಮಹಾನ್ ಸಾಧನೆಗಳನ್ನೆಲ್ಲಾ ಬಿಡುಗಡೆ ಮಾಡುತ್ತೇನೆ ಎಂದರು.
ಅಣ್ಣನಾಗಿ ಹೇಳ್ತೀನಿ, ಲೂಟಿ ನಿಲ್ಲಿಸಿ: ಡಿಕೆಶಿಗೆ ಎಚ್‌ಡಿಕೆ ಟಾಂಗ್
ನಮ್ಮಲ್ಲಿ ನೈಸ್ ಆಸ್ತಿ ಇದ್ದರೆ ಇಡೀ ಕುಟುಂಬ ನಿವೃತ್ತಿ: ನಮ್ಮ ಕುಟುಂಬದ ಯಾವೊಬ್ಬ ವ್ಯಕ್ತಿ ಹೆಸರಲ್ಲೂ ನೈಸ್ ಆಸ್ತಿ ಇಲ್ಲ. ಒಂದು ವೇಳೆ ಇದ್ದರೆ ನಮ್ಮ ಇಡೀ ಕುಟುಂಬ ರಾಜಕೀಯ ನಿವೃತ್ತಿ ಪಡೆಯುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರಿಗೆ ಸವಾಲು ಹಾಕಿದ್ದಾರೆ. ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನೈಸ್ ವಿಚಾರ ಇಟ್ಟುಕೊಂಡು ಕುಮಾರಸ್ವಾಮಿ ವ್ಯವಹಾರ ಮಾಡುತ್ತಾರೆ ಎಂಬ ಡಿ.ಕೆ.ಸುರೇಶ್ ಹೇಳಿಕೆಗೆ ಕೆಂಡಾಮಂಡಲರಾಗಿ, ನೈಸ್ ಯೋಜನೆಗಳ ಅಕ್ರಮಗಳಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ನೇರ ಕಾರಣ.
ಈ ವಿಷಯ ಇಡೀ ರಾಜ್ಯಕ್ಕೆ ಗೊತ್ತಿದೆ. ನೈಸ್ ಅಕ್ಕ-ಪಕ್ಕ ಜಮೀನುಗಳನ್ನು ಯಾರು ಕೊಳ್ಳೆ ಹೊಡೆದಿದ್ದಾರೆ ಎನ್ನುವುದೂ ಗೊತ್ತಿದೆ. ದೇವೇಗೌಡ ಅವರು ರಸ್ತೆ ಮಾಡಲು ಸಹಿ ಹಾಕಿದ್ದರು. ನೈಸ್ ಜತೆ ಶಾಮೀಲಾಗಿ ಜಮೀನು ಲೂಟಿ ಹೊಡಿಯಲಿ ಎಂದು ದೇವೇಗೌಡರು ಸಹಿ ಹಾಕಿದ್ದಾರಾ? ಒಂದು ಸಣ್ಣ ಸಾಕ್ಷಿ ಇದ್ದರೆ ತೋರಿಸಲಿ, ದೇವೇಗೌಡರ ಕುಟುಂಬವೇ ರಾಜಕೀಯ ನಿವೃತ್ತಿ ಹೊಂದುತ್ತೇವೆ ಎಂದು ಕಿಡಿಕಾರಿದರು.
ವೇತನ ಕೊಡದ ಹಿನ್ನೆಲೆ ಡಿಕೆಶಿ ಸ್ವ-ಕ್ಷೇತ್ರದಲ್ಲಿ ಚರಂಡಿ ನೀರು ಸುರಿದುಕೊಂಡು ಕಾರ್ಮಿಕರ ಪ್ರತಿಭಟನೆ
ಮೂಲ ಒಪ್ಪಂದ ತಿರುಚಿ ಚೌಕಟ್ಟಿನ ಒಪ್ಪಂದಕ್ಕೆ ಸಹಿ ಯಾರು ಹಾಕಿದ್ದು ಯಾರೆಂದು ಗೊತ್ತಿದೆಯಾ ಅವನಿಗೆ? ಆವತ್ತಿನ ನಗರಾಭಿವೃದ್ಧಿ ಸಚಿವರಾಗಿ ಇದ್ದಿದ್ದು ಯಾರು? ಇವರ ಅಣ್ಣನೇ ಅಲ್ವಾ? ಆತನೇ ತಾನೇ ಈ ಒಪ್ಪಂದಕ್ಕೆ ಸಹಿ ಹಾಕಿದ್ದು. ಲೂಟಿ ಹೊಡೆದ ಭೂಮಿಯನ್ನು ಯಾರ ಹೆಸರಿಗೆ ಮಾಡಲು ಹೊರಟಿದ್ದಾರೆ ಅವರು? ಎರಡು ಸಾವಿರ ಎಕರೆ ಭೂಮಿಯನ್ನು ಯಾರ ಹೆಸರಿಗೆ ಮಾಡಿಕೊಳ್ಳಲು ಹೊರಟಿದ್ದಾರೆ? ಅವರ ಕುಟುಂಬವೇ ನುಂಗಲು ಹೊರಟಿದೆ. ಇಂತಹವರು ನಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.