ದಾವಣಗೆರೆ: ಬಂಡಾಯಗಾರರು, ಟಿಕೆಟ್ ವಂಚಿತರಿಂದ ಪಕ್ಷಗಳಿಗೆ ಸವಾಲ್..!
ಕಾಂಗ್ರೆಸ್ಸಿನ ಡಾ.ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ-ಬಿಜೆಪಿಯ ಡಾ.ಜಿ.ಎಂ.ಸಿದ್ದೇಶ್ವರ, ಎಸ್.ಎ.ರವೀಂದ್ರನಾಥ್‌ರ ರಾಜಕೀಯ ಜಿದ್ದಾಜಿದ್ದಿ ಯಾವ ಫಲಿತಾಂಶ ತಂದು ಕೊಡುತ್ತದೆಂಬುದೇ ಕುತೂಹಲ ಹೆಚ್ಚಿಸಿದೆ.
ನಾಗರಾಜ ಎಸ್.ಬಡದಾಳ್
ದಾವಣಗೆರೆ(ಏ.30): ನಾಡಿನ ಮೆಕ್ಕೆಜೋಳದ ಕಣಜ ದಾವಣಗೆರೆ ಜಿಲ್ಲೆಯ 7 ಕ್ಷೇತ್ರಗಳ ಮತದಾರರು ತೇಜಿ ಮಂದಿಯಂತೆ ಕೈಯಲ್ಲಿ ತಕ್ಕಡಿ ಹಿಡಿದೇ ಮತ ಚಲಾಯಿಸಲು ಸಿದ್ಧರಾಗಿದ್ದಾರೆ. ಎಸ್.ಎ.ರವೀಂದ್ರನಾಥ ಚುನಾವಣಾ ರಾಜಕೀಯದಿಂದ ಹಿಂದೆ ಸರಿದರೆ, ಮಾಡಾಳು ವಿರೂಪಾಕ್ಷಪ್ಪ ಭ್ರಷ್ಟಾಚಾರದ ಆರೋಪ ಹೊತ್ತಿದ್ದಾರೆ. ಒಮ್ಮೆ ಕಾಂಗ್ರೆಸ್, ಮತ್ತೊಮ್ಮೆ ಬಿಜೆಪಿಗೆ ಶಕ್ತಿ ತುಂಬಿದವನು ಇಲ್ಲಿನ ಮತದಾರ. ಹಳೇ ಬೇರು ಹೊಸ ಚಿಗುರು ಎಂಬಂತೆ ಬದ್ಧವೈರಿಗಳಾದ ಕಾಂಗ್ರೆಸ್-ಬಿಜೆಪಿ ಹಳಬರ ಜೊತೆ ಹೊಸ ಮುಖಕ್ಕೂ ಮಣೆ ಹಾಕಿವೆ. ಕಾಂಗ್ರೆಸ್ಸಿನ ಡಾ.ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ-ಬಿಜೆಪಿಯ ಡಾ.ಜಿ.ಎಂ.ಸಿದ್ದೇಶ್ವರ, ಎಸ್.ಎ.ರವೀಂದ್ರನಾಥ್‌ರ ರಾಜಕೀಯ ಜಿದ್ದಾಜಿದ್ದಿ ಯಾವ ಫಲಿತಾಂಶ ತಂದು ಕೊಡುತ್ತದೆಂಬುದೇ ಕುತೂಹಲ ಹೆಚ್ಚಿಸಿದೆ.
1.ದಾವಣಗೆರೆ ದಕ್ಷಿಣ
ಶಾಮನೂರು ಶಿವಶಂಕರಪ್ಪ ಭದ್ರಕೋಟೆ
ಅಕ್ಕಪಕ್ಕದ ಕ್ಷೇತ್ರಗಳೆಲ್ಲಾ ಒಂದೊಂದು ಸಲ ಒಂದೊಂದು ಪಕ್ಷಕ್ಕೆ ಒಲಿಯುವ ಹೊಯ್ದಾಟದಲ್ಲಿದ್ದರೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ರಚನೆ ಆದಾಗಿನಿಂದಲೂ ಕಾಂಗ್ರೆಸ್ ಪಕ್ಷದ ಅಭೇದ್ಯ ಕೋಟೆಯಾಗಿದ್ದು, ಇದು ಶಾಮನೂರು ಶಿವಶಂಕರಪ್ಪ ಹಿಡಿತದಲ್ಲಿದೆ. ಲಿಂಗಾಯತ, ಕುರುಬರು, ಪರಿಶಿಷ್ಟರು ಹೆಚ್ಚಾಗಿರುವ, ಅಲ್ಪಸಂಖ್ಯಾತರು ನಿರ್ಣಾಯಕ ರಾಗಿರುವ ಕ್ಷೇತ್ರ ಇದಾಗಿದೆ. ಎಂತಹದ್ದೇ ಪ್ರತಿಕೂಲ ಪರಿಸ್ಥಿತಿ ಇದ್ದರೂ, 92 ವರ್ಷದ ಶಾಮನೂರು ತಮ್ಮ ಅನುಭವ, ರಾಜಕೀಯ ಜಾಣ್ಮೆ, ತಂತ್ರಗಾರಿಕೆಯಿಂದ ಹಿಡಿತದಲ್ಲಿಟ್ಟು ಕೊಂಡ ಕ್ಷೇತ್ರವಿದು. ಈಗ ಬಿಜೆಪಿ ಹೊಸ ಮುಖವಾಗಿ ಮಾಜಿ ಮೇಯರ್ ಬಿ.ಜಿ.ಅಜಯಕುಮಾರ ಅವರನ್ನು ಕಣಕ್ಕಿಳಿಸಿ ಅದೃಷ್ಟಪರೀಕ್ಷೆಗೆ ಮುಂದಾಗಿದೆ. ಆದರೆ, ಸತತವಾಗಿ ಶಾಮನೂರು ಮತ್ತು ಕಾಂಗ್ರೆಸ್ಸಿಗೆ ಪೈಪೋಟಿ ನೀಡುತ್ತಾ ಬಂದಿದ್ದ ಯಶವಂತರಾವ್ ಜಾಧವ್‌ಗೆ ಟಿಕೆಟ್ ತಪ್ಪಿದೆ. ಇನ್ನು, ಜೆಡಿಎಸ್‌ನ ಜೆ.ಅಮಾನುಲ್ಲಾ ಖಾನ್ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಕೆಲವು ಸಾವಿರ ಮತ ಗಿಟ್ಟಿಸಿಕೊಳ್ಳಬಹುದಾದರೂ, ಆಪ್, ಎಸ್‌ಡಿಪಿಐ, ಇತರೆ ಪಕ್ಷಗಳು, ಪಕ್ಷೇತರರು ಇಲ್ಲಿ ಆಟಕ್ಕುಂಟು, ಲೆಕ್ಕಕ್ಕಿಲ್ಲ.
ಬುಲೆಟ್ ಪ್ರೂಫ್ ವಾಹನದಲ್ಲಿ ಪ್ರಧಾನಿ ಮೋದಿ ರೋಡ್ ಶೋ ಮ್ಯಾಜಿಕ್: ಡಿವಿಎಸ್, ಚಲವಾದಿ ಸಾಥ್
2. ದಾವಣಗೆರೆ ಉತ್ತರ
ಕಾಂಗ್ರೆಸ್, ಬಿಜೆಪಿ ಮಧ್ಯೆಯೇ ಪೈಪೋಟಿ
ವಯೋಮಿತಿ, ಅನಾರೋಗ್ಯದ ಕಾರಣಕ್ಕೆ ದಾವಣಗೆರೆ ಉತ್ತರ ಶಾಸಕ ಎಸ್.ಎ.ರವೀಂದ್ರನಾಥ್ ಬದಲಿಗೆ ಹೊಸ ಮುಖ ಲೋಕಿಕೆರೆ ನಾಗರಾಜ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಕಾಂಗ್ರೆಸ್ಸಿನ ಶಕ್ತಿ ಅಂತಲೇ ಗುರುತಿಸಲ್ಪಡುವ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಕೆಲವು ವಾರಗಳಿಂದ ಪ್ರಚಾರದಲ್ಲಿ ತೊಡಗಿದ್ದಾರೆ. ಎಸ್ಸೆಸ್ಸೆಂಗೆ ಇಲ್ಲಿ ಪತ್ನಿ ಡಾ.ಪ್ರಭಾ, ಪುತ್ರ ಸಮಥ್‌ರ್, ಪುತ್ರಿ ಶ್ರೇಷ್ಠ ಸ್ಟಾರ್ ಪ್ರಚಾರಕರಂತೆ ಮತಯಾಚಿಸುತ್ತಿದ್ದಾರೆ. ಮತ್ತೊಂದು ಕಡೆ ಮೋದಿ, ಅಮಿತ್ ಶಾ, ಯಡಿಯೂರಪ್ಪ, ಬೊಮ್ಮಾಯಿ ಹೆಸರಿನ ಜೊತೆ ಸಾಮಾನ್ಯ ಕಾರ್ಯಕರ್ತನಾಗಿ ಲೋಕಿಕೆರೆ ನಾಗರಾಜ ಕಣಕ್ಕಿಳಿದಿದ್ದಾರೆ. ಜೆಡಿಎಸ್ ಸಹ ಬಾತಿ ಶಂಕರ್‌ಗೆ ಕಣಕ್ಕಿಳಿಸಿದೆ. ಇಲ್ಲಿ ಲಿಂಗಾಯತರು ನಿರ್ಣಾಯಕ. ಬಿಜೆಪಿ, ಕಾಂಗ್ರೆಸ್ ಮಧ್ಯೆ ಪೈಪೋಟಿ ಇದೆ. ಆದರೆ, ರವೀಂದ್ರನಾಥ ಕಣದಲ್ಲಿಲ್ಲ. ಟಿಕೆಟ್ ವಂಚಿತರು ಪಕ್ಷದ ಗೆಲುವಿಗೆ ಹೇಗೆ ಶ್ರಮಿಸುತ್ತಾರೆ, ಚುನಾವಣಾ ರಾಜಕೀಯದಿಂದ ನಿವೃತ್ತರಾದ ಹಾಲಿ ಶಾಸಕ ಎಸ್.ಎ. ರವೀಂದ್ರನಾಥ, ಡಾ.ಎ.ಎಚ್.ಶಿವಯೋಗಿಸ್ವಾಮಿ ಇತರರು ಹೇಗೆ ಮತ ಗಳಿಕೆಗೆ ನಾಗರಾಜ ಲೋಕಿಕೆರೆಗೆ ಬೆನ್ನೆಲುಬಾಗಿ ನಿಲ್ಲುತ್ತಾರೆಂಬುದರ ಮೇಲೆ ಬಿಜೆಪಿ ಸ್ಪರ್ಧೆ ನಿರ್ಧರಿತವಾಗಲಿದೆ.
3. ಹರಿಹರ
ಹೊಸ ಮುಖ ವರ್ಸಸ್ ಹಳೇ ಹುಲಿಗಳು
ಜೀವನದಿ ತುಂಗಭದ್ರಾದಲ್ಲಿ ನೀರು ಹರಿಯುವಷ್ಟೇ ಬದಲಾವಣೆ ಸಹಜ ಎಂಬಂತೆ ಹರಿಹರ ವಿಧಾನಸಭಾ ಕ್ಷೇತ್ರದ ಇತಿಹಾಸವಿದೆ. ಕಳೆದ 4 ಚುನಾವಣೆಯಲ್ಲಿ ಸರದಿಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಂತರ ಕಾಂಗ್ರೆಸ್ಸಿಗೆ ಒಲಿದಿದ್ದ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಲಿ ಶಾಸಕ ಎಸ್.ರಾಮಪ್ಪ ಬದಲಿಗೆ ಹೊಸ ಮುಖ ಶ್ರೀನಿವಾಸ ನಂದಿಗಾವಿಗೆ ಕಣಕ್ಕಿಳಿಸಿ, ಸಾಹಸ ಮಾಡಿದೆ. ಇನ್ನು ತ್ರಿಕೋನ ಸ್ಪರ್ಧೆ ಇರುವ ಇಲ್ಲಿ ಮಾಜಿ ಶಾಸಕರಾದ ಬಿ.ಪಿ.ಹರೀಶ (ಬಿಜೆಪಿ), ಎಚ್.ಎಸ್.ಶಿವಶಂಕರ (ಜೆಡಿಎಸ್) ಅಖಾಡಕ್ಕಿಳಿದಿದ್ದಾರೆ. ಲಿಂಗಾಯತ, ಪರಿಶಿಷ್ಟರು, ಅಲ್ಪಸಂಖ್ಯಾತರು ಪ್ರಬಲರಾಗಿರುವ ಈ ಕ್ಷೇತ್ರದಲ್ಲಿ ಜಾತಿ ಜೊತೆಗೆ ಪಕ್ಷದ ಸಾಂಪ್ರದಾಯಿಕ ಮತಗಳೂ ನಿರ್ಣಾಯಕ. ಪರಿಶಿಷ್ಟರ ಮತ ಛಿದ್ರವಾದರೆ, ಅಲ್ಪಸಂಖ್ಯಾ ತರು, ಲಿಂಗಾಯತ, ಕುರುಬರ ಮತ ಯಾರಿಗೆಂಬುದರ ಮೇಲೆ ಫಲಿತಾಂಶ ಸಿಗಲಿದೆ. ಕಾಂಗ್ರೆಸ್ ಅಭ್ಯರ್ಥಿ ಪರ ರಾಮಪ್ಪ ಗಟ್ಟಿಯಾಗಿ ನಿಂತರೆ ಹರಿಹರದಲ್ಲಿ ತ್ರಿಕೋನ ಸ್ಪರ್ಧೆ. ಇಲ್ಲದಿದ್ದರೆ, ಇದು ಬಿಜೆಪಿ-ಜೆಡಿಎಸ್ ಮಧ್ಯೆ ನೇರ ಸ್ಪರ್ಧೆಗೆ ಆಗಲಿದೆ.
4. ಮಾಯಕೊಂಡ (ಎಸ್‌ಟಿ ಮೀಸಲು)
ಬಂಡಾಯಗಾರರಿಂದ ಪಕ್ಷಗಳಿಗೆ ತಲೆನೋವು
ಪರಿಶಿಷ್ಟಜಾತಿಗೆ ಮೀಸಲಾದ ಮಾಯಕೊಂಡ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್‌ಗೆ ಎದುರಾಳಿ ಜೊತೆಗೆ ಬಂಡಾಯ ಬಾವುಟ ಹಾರಿಸಿದವರೇ ಸವಾಲಾಗಿದ್ದಾರೆ. ಕಾಂಗ್ರೆಸ್ ಕೆ.ಎಸ್. ಬಸವಂತಪ್ಪ ಅವರನ್ನು ಕಣಕ್ಕಿಳಿಸಿದರೆ, ಬಿಜೆಪಿಯು ಮಾಜಿ ಶಾಸಕ ಎಂ.ಬಸವರಾಜ ನಾಯ್ಕರನ್ನು ಅಭ್ಯರ್ಥಿ ಮಾಡಿದೆ. ಕಾಂಗ್ರೆಸ್ ಟಿಕೆಟ್ ವಂಚಿತ ಎಚ್.ಆನಂದಪ್ಪ ಜೆಡಿಎಸ್ ಅಭ್ಯರ್ಥಿಯಾಗಿದ್ದರೆ, ತಮ್ಮ ತೇಜೋವಧೆಯಾಗಿದೆಯೆಂದು ಸವಿತಾಬಾಯಿ ಮಲ್ಲೇಶ ನಾಯ್ಕ ಬಂಡಾಯದ ಹಾದಿ ತುಳಿದಿದ್ದಾರೆ. 11 ಜನ ಬಿಜೆಪಿ ಟಿಕೆಟ್ ವಂಚಿತರ ಬಂಡಾಯವನ್ನು ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಸಿಎಂ ಬಸವರಾಜ ಬೊಮ್ಮಾಯಿ ಶಮನ ಮಾಡಿದ್ದಾರೆ. ಮಾಜಿ ಸಚಿವ ಜನಾರ್ದನ ರೆಡ್ಡಿ ಪಕ್ಷದಿಂದ ಮಹಿಳೆ ಕಣಕ್ಕಿಳಿದಿದ್ದಾರೆ. ಇಲ್ಲಿ ಅಚ್ಚರಿಯ ಅಭ್ಯರ್ಥಿಯಾಗಿ ಬಿ.ಎಂ.ಪುಷ್ಪಾ ಎಂಬುವರ ಸ್ಪರ್ಧೆ ಸಹಜವಾಗಿಯೇ ಪ್ರಮುಖ ಪಕ್ಷಗಳು, ಅಭ್ಯರ್ಥಿಗಳ ನಿದ್ದೆಗೆಡಿಸಿದೆ. ಮಾದಿಗ, ಲಂಬಾಣಿ, ಭೋವಿ ಪ್ರಬಲವಾದ ಈ ಕ್ಷೇತ್ರದಲ್ಲಿ ಲಿಂಗಾಯತ, ಕುರುಬರು ಯಾರಿಗೆ ಮಣೆ ಹಾಕುತ್ತಾರೋ ಅವರಿಗೆ ಗೆಲುವು.
5. ಜಗಳೂರು (ಎಸ್‌ಟಿ ಮೀಸಲು)
ರಾಮಚಂದ್ರಗೆ ಬಂಡಾಯ ರಾಜೇಶ ಸಡ್ಡು
ಬರಪೀಡಿತ ಜಗಳೂರಿನಲ್ಲಿ ಬಿಜೆಪಿ ಶಾಸಕ ಎಸ್.ವಿ.ರಾಮಚಂದ್ರ 4ನೇ ಸಲ ಪುನರಾಯ್ಕೆ ಬಯಸಿದ್ದರೆ, ಎದುರಾಳಿಯಾಗಿ ಹೊಸಮುಖ ಬಿ.ದೇವೇಂದ್ರಪ್ಪರನ್ನು ಕಾಂಗ್ರೆಸ್ ಕಣ ಕ್ಕಿಳಿಸಿದೆ. ಕಾಂಗ್ರೆಸ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಎಚ್.ಪಿ.ರಾಜೇಶ್ ಈಗ ಇಲ್ಲಿ ಬಂಡಾಯ ಅಭ್ಯರ್ಥಿ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಇತರೆ ಮುಖಂಡರು ಐಟಿ ಅಧಿ ಕಾರಿಯ ಋುಣ ತೀರಿಸಲು, ಆ ಅಧಿಕಾರಿ ತಂದೆಗೆ ಟಿಕೆಟ್ ನೀಡಿದ್ದಾರೆಂಬ ಆರೋಪ ಎಚ್.ಪಿ.ರಾಜೇಶ ಮತ್ತು ಬೆಂಬಲಿಗರದ್ದು. ಪ್ರಬಲ ಪೈಪೋಟಿ ನಿರೀಕ್ಷೆ ಇದ್ದ ಎಸ್ಟಿಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತಗಳು, ನಾಯಕ ಸಮುದಾಯದ ಮತಗಳು ಛಿದ್ರವಾಗಲಿವೆ. ಇನ್ನು ಲಿಂಗಾಯತರು, ಮುಸ್ಲಿಂ, ಕುರುಬರು ಯಾರ ಪರ, ಹಿಂದುಳಿ ದವರು ಯಾರ ಬೆನ್ನಿಗೆ ನಿಲ್ಲುತ್ತಾರೆಂಬುದರ ಮೇಲೆ ಜಗಳೂರು ಫಲಿತಾಂಶ ಬರಲಿದೆ.
ನನ್ ಫ್ರೆಂಡ್ ಡಿಕೆಶಿ ಸಿಎಂ ಆಗೋದು ಬೇಡ್ವಾ?: ಕಾಂಗ್ರೆಸ್ ಗೆ ಕಾಮಿಡಿ ಮಾಡಿದ ಜಗ್ಗೇಶ್
6. ಹೊನ್ನಾಳಿ
ಹೊನ್ನಾಳಿ ಹೊಡೆತ ಈ ಸಲ ಯಾರಿಗಪ್ಪಾ?
ಹೊನ್ನಾಳಿ ಹೊಡೆತವೆಂಬ ಮಾತೇ ಹೇಳುವಂತೆ ಈ ಸಲದ ಚುನಾವಣೆ ಸಹ ಗಮನ ಸೆಳೆದಿದೆ. ಶಾಸಕ ಎಂ.ಪಿ.ರೇಣುಕಾಚಾರ್ಯ ಕ್ಷೇತ್ರದಿಂದ ಪುನರಾಯ್ಕೆ ಬಯಸಿ ಬಿಜೆಪಿ ಹುರಿ ಯಾಳಾಗಿ ಅಖಾಡದಲ್ಲಿದ್ದಾರೆ. ರೇಣುಕಾಚಾರ್ಯಗೆ ಪ್ರತಿಸ್ಪರ್ಧಿಯಾಗಿ ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಅಖಾಡಕ್ಕಿಳಿದಿದ್ದು, ಕುತೂಹಲ ಕೆರಳಿಸಿದೆ. ಕಾಂಗ್ರೆಸ್ಸಿನಲ್ಲಿ ಎಚ್.ಬಿ. ಮಂಜಪ್ಪ ಬದಲಿಗೆ ಮಾಜಿ ಶಾಸಕರಿಗೆ ಪಕ್ಷ ಮಣೆ ಹಾಕಿದೆ. ಲಿಂಗಾಯತ, ಕುರುಬರು ಪ್ರಬಲವಾಗಿರುವ ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕಿನ ಕ್ಷೇತ್ರ ಹೊನ್ನಾಳಿ. ಬಿಜೆಪಿಗೆ ಕಾಂಗ್ರೆಸ್ಸೇ ಇಲ್ಲಿ ಪ್ರತಿಸ್ಪರ್ಧಿ. ಜೆಡಿಎಸ್‌ನಿಂದ ಬಿ.ಜಿ.ಶಿವಮೂರ್ತಿ ಇಲ್ಲಿ ಹುರಿಯಾಳು. ಶಾಂತನ ಗೌಡ ಕಳೆದ ಚುನಾವಣೆ ವೇಳೆ ಮುಂದಿನ ಸಲ ಮಂಜಪ್ಪಗೆ ಟಿಕೆಟ್ ಬಿಟ್ಟು ಕೊಡುವುದಾಗಿ ಹೇಳಿ ಮಾತು ತಪ್ಪಿದ್ದಾರೆಂಬ ಅಸಮಾಧಾನ ಮಂಜಪ್ಪ ಮತ್ತು ಬೆಂಬಲಿಗರದ್ದು. ಇದೀಗ ಪಕ್ಷದ ನಾಯಕರ ಸಮ್ಮುಖದಲ್ಲಿ ಮಂಜಪ್ಪರನ್ನು ಸಮಾಧಾನಪಡಿಸುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡಿದ್ದಾರೆ. ಹೊನ್ನಾಳಿಯಲ್ಲೂ ಪಕ್ಷಾಂತರ ಪರ್ವ ಶುರುವಾಗಿದ್ದು, ಮೇ 10ರ ಚುನಾವಣೆಯಲ್ಲಿ ಮತದಾರ ಯಾರ ಜೊತೆ ನಿಲ್ಲುತ್ತಾನæಂಬುದು ಸದ್ಯದ ಕುತೂಹಲ.
7. ಚನ್ನಗಿರಿ
ಮಾಡಾಳು ಬಂಡಾಯ, ಚತುಷ್ಕೋನ ಸ್ಪರ್ಧೆ
ಅಡಿಕೆ ನಾಡು ಚನ್ನಗಿರಿ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಪುತ್ರ ಮಾಡಾಳು ಮಲ್ಲಿಕಾರ್ಜುನ ತಮ್ಮ ಮಾತೃ ಪಕ್ಷಕ್ಕೆ ಸಡ್ಡು ಹೊಡೆದು ಬಂಡಾಯ ಅಭ್ಯ ರ್ಥಿಯಾಗಿ ಸ್ಪರ್ಧಿಸಿರುವ ಇಲ್ಲಿ ಚತುಷ್ಕೋನ ಸ್ಪರ್ಧೆಯ ನಿರೀಕ್ಷೆ ಇದೆ. ಬಿಜೆಪಿ ಅಭ್ಯರ್ಥಿಯಾಗಿ ತುಮ್ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್.ಶಿವಕುಮಾರ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕಿಸಾನ್ ಮೋರ್ಚಾ ಜಿಲ್ಲಾಧ್ಯಕ್ಷ ಶಿವಗಂಗಾ ವಿ.ಬಸವರಾಜ, ಜೆಡಿಎಸ್ ಅಭ್ಯರ್ಥಿಯಾಗಿ ಜಿಪಂ ಮಾಜಿ ಸದಸ್ಯ ತೇಜಸ್ವಿ ವಿ.ಪಟೇಲ್ ಕಣಕ್ಕಿಳಿದಿದ್ದಾರೆ. ಸಂಘ ಪರಿವಾರ ಮೂಲದ ಎಚ್.ಎನ್.ಶಿವಕುಮಾರ ಎದುರಾಳಿ ಅಭ್ಯರ್ಥಿಗಳ ಜೊತೆಗೆ ಸ್ವಪಕ್ಷದ ಬಂಡಾಯ ಅಭ್ಯರ್ಥಿ ಮಾಡಾಳು ಮಲ್ಲಿಕಾರ್ಜುನ ಅವರನ್ನು ಎದುರಿಸಬೇಕಾದ ಅನಿವಾರ್ಯತೆ ಇದೆ. ಮಾಜಿ ಸಿಎಂ ದಿವಂಗತ ಜೆ.ಎಚ್.ಪಟೇಲರ ಸಹೋದರನ ಪುತ್ರ ತೇಜಸ್ವಿ ವಿ.ಪಟೇಲ್ ಇಲ್ಲಿ ಸ್ಪರ್ಧೆ ಮಾಡಿದ್ದು, ಇಡೀ ಚನ್ನಗಿರಿ ಕ್ಷೇತ್ರದ ಮತಗಳು ನಾಲ್ಕು ಭಾಗಗಳಾಗುವಂತೆ ಮಾಡಿದೆ. ತೇಜಸ್ವಿ ಪಟೇಲ್ ಸಹ ಕಾಂಗ್ರೆಸ್ಸಿನ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅವಕಾಶ ಸಿಗದಿದ್ದರಿಂದ ಕಡೇ ಘಳಿಗೆಯಲ್ಲಿ ಜೆಡಿಎಸ್ ದಳಪತಿಯಾಗಿ ಅಖಾಡಕ್ಕೆ ಧುಮುಕಿದ್ದಾರೆ.