ನಿಮ್ಮ ವಿಷಯ ಹೊರಹಾಕಿದರೆ ನಿದ್ದೆ ಮಾಡಲ್ಲ: ಸಚಿವ ಎಂಬಿಪಾಗೆ ಛಲವಾದಿ ತಿರುಗೇಟು
‘ನಾನೇನಾದರೂ ನಿಮ್ಮ ವಿಷಯ ಹೊರಗಡೆ ತಂದರೆ ನಿಮಗೆ ನಿದ್ದೆ ಬರುವುದಿಲ್ಲ’ ಎಂದು ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರಿಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರು (ಸೆ.02): ‘ನಾನೇನಾದರೂ ನಿಮ್ಮ ವಿಷಯ ಹೊರಗಡೆ ತಂದರೆ ನಿಮಗೆ ನಿದ್ದೆ ಬರುವುದಿಲ್ಲ’ ಎಂದು ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರಿಗೆ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕಾನೂನು ಬಿಟ್ಟು ಆಚೆ ಈಚೆ ಹೋಗುವವನಲ್ಲ. ನೀವಿನ್ನು ಒಂದು ವರ್ಷ ಹುಡುಕಿದರೂ ನನ್ನ ಒಂದೇ ಒಂದು ತಪ್ಪು ತೋರುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು.
ಎಲ್ಲರಂತೆ ನಾನು ವೇರ್‌ಹೌಸ್, ಇನ್ನೇನೋ ಉದ್ದೇಶದಿಂದ ನಿವೇಶನ ಪಡೆದಿದ್ದೇನೆ. ನಾವು ಬಡತನದಲ್ಲಿ ಬಂದವರು. ನಮ್ಮಲ್ಲಿ ಹಣ ಇರಲಿಲ್ಲ. ಅದಾದ ನಂತರ ಕಂತು ಕಟ್ಟಲು ಕಷ್ಟವಾದುದೂ ನಿಜ. ನಿಮ್ಮಲ್ಲಿ ನಾನು ಹಣ ಕೊಡಿ, ವಿನಾಯಿತಿ ಕೊಡಿ ಎಂದು ಕೇಳಿದ್ದೇನಾ? ಪರಿಶಿಷ್ಟ ಜಾತಿಯವ, ನನಗ್ಯಾರೂ ಕೇಳೋರು ಇಲ್ಲವೆಂದು ಲಜ್ಜೆಗೆಟ್ಟವ ಎಂದಿದ್ದೀರಲ್ಲವೇ? ನೀವು ಹರಿಶ್ಚಂದ್ರರೇ? ಈ ಪ್ರಪಂಚದಲ್ಲಿ ಯಾರೂ ಹರಿಶ್ಚಂದ್ರರಲ್ಲ ಎಂದು ಹರಿಹಾಯ್ದರು.
ದಸರಾ ಗಜಪಡೆಗೆ ಭಾರ ಹೊರಿಸುವ ತಾಲೀಮು ಆರಂಭ: ಮೊದಲ ದಿನ ಅಭಿಮನ್ಯು ಮೈಮೇಲೆ 520 ಕೆ.ಜಿ ಭಾರ
ವಿರೋಧ ಪಕ್ಷದ ನಾಯಕನಾಗಿ ನನ್ನ ಸ್ಥಾನದ ಗೌರವ ಉಳಿಸುವ ಕೆಲಸ ಮಾಡುತ್ತೇನೆ. ನೀವು ನಿಮ್ಮ ಸಚಿವ ಸ್ಥಾನಕ್ಕೆ ಅನುಗುಣವಾಗಿ ಮಾತನಾಡಬೇಕಿತ್ತು. ನೀವು ನನ್ನ ಬಡತನವನ್ನು ಇಷ್ಟು ಹೀಯಾಳಿಸಿ ಬಿಟ್ಟಿರಲ್ಲವೇ ಎಂದು ಕೇಳಿದರು. ಲಜ್ಜೆಗೆಟ್ಟ ವ್ಯಕ್ತಿ ಎಂದಿರಲ್ಲವೇ? ನಾನು ಯಾವುದರಲ್ಲಿ ಲಜ್ಜೆಗೆಟ್ಟವ ಎಂದು ಖಾರವಾಗಿ ಪ್ರಶ್ನಿಸಿದರು.