ನಾನು ದೊಡ್ಡ ದೊಡ್ಡ ಇನ್‌ಸ್ಟಿಟ್ಯೂಟ್‌ ಇಟ್ಟುಕೊಂಡಿಲ್ಲ, ಫ್ಯಾಕ್ಟರಿ ಇಟ್ಟುಕೊಂಡಿಲ್ಲ, ಮೈಸೂರಿನಲ್ಲಿ ಸಿನಿಮಾ ಹಂಚಿಕೆದಾರನಾಗಿ ಮಾಡ್ತಿದ್ದಂಥ ವ್ಯವಹಾರನೂ ನಿಂತೋಗಿದೆ| ಸಿಬಿಐ, ಐಟಿ, ಇಡಿಯಲ್ಲ ಅವರಪ್ಪಂದಿರೇ ಬಂದರೂ ನನ್ನನ್ನೇನೂ ಮಾಡೋಕಾಗಲ್ಲ| 

ಬೆಂಗಳೂರು[ಅ.19]: ‘ಸಿಬಿಐಯಲ್ಲ, ಐಟಿ, ಇಡಿಯಲ್ಲ, ಅವರ ಅಪ್ಪಂದಿರೇ ಬರಲಿ ನನ್ನನ್ನು ಯಾರೂ ಏನೂ ಮಾಡೋಕೆ ಆಗಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

"

ತಾಲೂಕಿನ ಬಸವನಹಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ನಾನು ದೊಡ್ಡ ದೊಡ್ಡ ಇನ್‌ಸ್ಟಿಟ್ಯೂಟ್‌ ಇಟ್ಟುಕೊಂಡಿಲ್ಲ, ಫ್ಯಾಕ್ಟರಿ ಇಟ್ಟುಕೊಂಡಿಲ್ಲ, ಮೈಸೂರಿನಲ್ಲಿ ಸಿನಿಮಾ ಹಂಚಿಕೆದಾರನಾಗಿ ಮಾಡ್ತಿದ್ದಂಥ ವ್ಯವಹಾರನೂ ನಿಂತೋಗಿದೆ. ಯಾವುದೇ ವ್ಯವಹಾರಗಳು ಇಲ್ಲದ್ದರಿಂದ ಧೈರ್ಯವಾಗಿದ್ದೇನೆ ಎಂದರು.

ದೇಶದಲ್ಲಿ ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ದಿನಕ್ಕೆ ಎರಡು ಹೊತ್ತು ಊಟಕ್ಕಿಲ್ಲದೆ ಜನ ಸಾಯುತ್ತಿದ್ದರೆ, ಶ್ರೀಲಂಕಾ ಹಾಗೂ ಪಾಕಿಸ್ತಾನ ದೇಶಗಳು ನಮಗಿಂತಲೂ ಉತ್ತಮವಾಗಿವೆ. ಮೋದಿ ಪ್ರಧಾನಿಯಾದರೆ ದೇಶದಲ್ಲಿ ಭಾರಿ ಬದಲಾವಣೆ ಆಗುತ್ತದೆ ಎಂದು ಕೂಗು ಹಾಕುತ್ತಾರೆ. ಆದರೆ, ಈಗ ದೇಶದ ಸ್ಥಿತಿ ದಯನೀಯವಾಗಿದೆ ಎಂದು ವ್ಯಂಗ್ಯವಾಡಿದರು.

ನನ್ನಲ್ಲಿ ಬಂದು ದೂರು ನೀಡಲಿ: ಸಾಲಮನ್ನಾ ವಿಚಾರದಲ್ಲಿ ಬ್ಯಾಂಕ್‌ ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ರೈತರು ನೇರವಾಗಿ ನನ್ನ ಮನೆಗೆ ಬಂದು ದೂರು ನೀಡಿದರೆ ಅಂಥವರನ್ನು ಅಧಿಕಾರ ಇಲ್ಲದಿದ್ದರೂ ಜೈಲಿಗೆ ಕಳುಹಿಸುತ್ತೇನೆ ಎಂದು ಇದೇ ವೇಳೆ ಕುಮಾರಸ್ವಾಮಿ ಎಚ್ಚರಿಸಿದರು.