ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು: ಎಚ್‌ಡಿಕೆ ಆಗ್ರಹ
ತಮಿಳುನಾಡಿಗೆ ಪ್ರತಿ ನಿತ್ಯ ಐದು ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸಬೇಕೆಂದು ರಾಜ್ಯಕ್ಕೆ ಕಾವೇರಿ ಜಲ ನಿಯಂತ್ರಣ ಸಮಿತಿ ನೀಡಿರುವ ನಿರ್ದೇಶನ ಆಘಾತಕಾರಿಯಾಗಿದ್ದು, ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ನೀರು ಹರಿಸಬಾರದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಬೆಂಗಳೂರು (ಸೆ.14): ತಮಿಳುನಾಡಿಗೆ ಪ್ರತಿ ನಿತ್ಯ ಐದು ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸಬೇಕೆಂದು ರಾಜ್ಯಕ್ಕೆ ಕಾವೇರಿ ಜಲ ನಿಯಂತ್ರಣ ಸಮಿತಿ ನೀಡಿರುವ ನಿರ್ದೇಶನ ಆಘಾತಕಾರಿಯಾಗಿದ್ದು, ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ನೀರು ಹರಿಸಬಾರದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಸಂಕಷ್ಟ ಸೂತ್ರವೇ ಇಲ್ಲ. ರಾಜ್ಯಕ್ಕಷ್ಟೇ ಸಂಕಷ್ಟವೇ? ತಮಿಳುನಾಡಿಗೆ ಯಾವ ಸಂಕಷ್ಟವೂ ಇಲ್ಲ. ಆದೇಶ ಪಾಲನೆಗಷ್ಟೇ ಕರ್ನಾಟಕ, ಅನುಭವಿಸಲಿಕ್ಕೆ ತಮಿಳುನಾಡು..! ಹೀಗಿದೆ ನಮ್ಮ ಸ್ಥಿತಿ. ಆ ರಾಜ್ಯವು ಎಷ್ಟು ವಿಸ್ತೀರ್ಣದಲ್ಲಿ ಬೆಳೆ ಬೆಳೆಯುತ್ತಿದೆ ಎಂಬ ಅಂಕಿ-ಅಂಶದ ಬಗ್ಗೆ ಸಮಿತಿಯಲ್ಲಿ ಚರ್ಚಿಸಿಲ್ಲ ಎನ್ನುವುದಕ್ಕೆ ಆ ಸಮಿತಿಯ ಆದೇಶವೇ ಸಾಕ್ಷಿ ಎಂದು ತಿಳಿಸಿದ್ದಾರೆ.
ಸಮಿತಿ ಮತ್ತು ಪ್ರಾಧಿಕಾರದ ಸಭೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಆ ಸಭೆಗಳಿಗೆ ಅಧಿಕಾರಿಗಳು ಆನ್‌ಲೈನ್‌ನಲ್ಲಿ ಹಾಜರಾದರೆ, ನೆರೆ ರಾಜ್ಯದವರು ಖುದ್ದು ಹಾಜರಿದ್ದು ಅಂಕಿ-ಅಂಶ ಸಮೇತ ವಾದ ಮಂಡಿಸುತ್ತಾರೆ. ಹೀಗಾದರೆ, ರಾಜ್ಯದ ಹಿತರಕ್ಷಣೆ ಹೇಗೆ ಸಾಧ್ಯ? ನೆಲ,ಜಲ,ಭಾಷೆ ಬಗ್ಗೆ ತಮಿಳುನಾಡಿನವರಿಗೆ ಇರುವ ಬದ್ಧತೆ ನಮ್ಮವರಿಗಿಲ್ಲ. ಇದು ದುರಂತ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನಮ್ಮವರಲ್ಲಿ ಉಪೇಕ್ಷೆ, ಉಡಾಫೆ ಹೆಚ್ಚು. ನ್ಯಾಯಾಧೀಕರಣ ಆದೇಶ ಉಲ್ಲಂಘಿಸಿರುವ ತಮಿಳುನಾಡು ವಿರುದ್ಧ ಸಮರ್ಥವಾದ ಮಂಡಿಸಲು ಯಾಕೆ ಸಾಧ್ಯವಾಗಿಲ್ಲ?
ಗ್ಯಾರಂಟಿ ಯೋಜನೆಗಾಗಿ ರೈತರ ಬದುಕು ಬಲಿ ಕೊಡಬೇಡಿ: ಕಾಂಗ್ರೆಸ್ ವಿರುದ್ಧ ರೇವಣ್ಣ ವಾಗ್ದಾಳಿ
ನೀರಾವರಿ ಪ್ರದೇಶವನ್ನು ನೆರೆರಾಜ್ಯ ಅಕ್ರಮವಾಗಿ ವಿಸ್ತರಣೆ ಮಾಡಿಕೊಂಡಿರುವುದನ್ನು ಹೇಳಬೇಕಿತ್ತು. ಮೊದಲು ಸಂಕಷ್ಟಸೂತ್ರ ರೂಪಿಸಿ ಎಂದು ಪಟ್ಟು ಹಿಡಿಯಬೇಕಿತ್ತು ಎಂದು ಹೇಳಿದ್ದಾರೆ. ನಮ್ಮ ರೈತರಿಗೇ ನೀರಿಲ್ಲದಿದ್ದರೂ, ಅವರು ಬೆಳೆಯನ್ನೇ ಬೆಳೆಯದಿದ್ದರೂ ನೀರು ಬಿಡಲು ಸರ್ಕಾರ ಒಪ್ಪಿದೆ. ಈ ವಿಷಯದಲ್ಲಿ ರಾಜ್ಯ ಸರ್ಕಾರ ಪೂರ್ಣ ವಿಫಲವಾಗಿದೆ. ರೈತರ ತಾಳ್ಮೆಯನ್ನೂ ದುರುಪಯೋಗ ಮಾಡಿಕೊಂಡಿದೆ. ಸುಪ್ರೀಂ ಕೋರ್ಟ್ ಏನು ಹೇಳುತ್ತದೋ ಅಲ್ಲಿಯವರೆಗೆ ಕಾಯಬೇಕಿತ್ತು. ಪ್ರಾಧಿಕಾರ, ಸಮಿತಿ ಹೇಳಿದವೆಂದು ನೀರು ಬಿಟ್ಟಿದ್ದು ತಪ್ಪು ಎಂದು ಹೇಳಿದ್ದಾರೆ.
ತಮಿಳುನಾಡಿಗೆ ನೀರು ಹರಿಸಿದರೆ ರೈತರಿಗೆ ಅನ್ಯಾಯ ಮಾಡಿದಂತೆ: ಬೊಮ್ಮಾಯಿ ಕಿಡಿ
ಬೆಂಗಳೂರಿಗರು ಮೌನವೇಕೆ?: ರೈತರ ಬಗ್ಗೆ ಕಾಳಜಿ ಮತ್ತು ಬೆಂಗಳೂರು ಜನರ ಕುಡಿಯುವ ನೀರಿನ ಬಗ್ಗೆ ಆತಂಕ ಇದ್ದಿದ್ದರೆ ಸರ್ಕಾರ ನೀರು ಹರಿಸುತ್ತಿರಲಿಲ್ಲ. ಬೆಂಗಳೂರಿಗರ ಮೌನ ನನಗೆ ಅಚ್ಚರಿ ತಂದಿದೆ. ನೆರೆ ರಾಜ್ಯಗಳಿಂದ ವಲಸೆ ಬಂದು ನಮ್ಮ ನೆಲ, ಜಲ, ಆರ್ಥಿಕತೆಯ ಆಸರೆಯಲ್ಲಿ ನೆಮ್ಮದಿಯಾಗಿರುವವರು ಕೂಡ ಕಾವೇರಿ ಬಗ್ಗೆ ದನಿ ಎತ್ತಬೇಕು. ಇವರಾರಿಗೂ ಕಾವೇರಿ ನೀರಿನ ಚಿಂತೆಯೇ ಇಲ್ಲ ಎಂದ ಅವರು, ಸರ್ಕಾರ ಹೆಜ್ಜೆಹೆಜ್ಜೆಗೂ ಎಡವಿದೆ. ತಮಿಳುನಾಡು ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕಿದಾಕ್ಷಣ ರಾಜ್ಯ ಸರ್ಕಾರವು ತಕ್ಷಣವೇ ಆಕ್ಷೇಪ ಸಲ್ಲಿಸಬೇಕಿತ್ತು. ವಾಸ್ತವ ಸ್ಥಿತಿಯ ಬಗ್ಗೆ ದಾಖಲೆಗಳನ್ನು ಒದಗಿಸಿ, ಸಮರ್ಥವಾಗಿ ಎದುರಿಸಬೇಕಿತ್ತು. ಕಾಲಹರಣ ಮಾಡಿದ್ದಲ್ಲದೆ, ಈಗ ಕಾವೇರಿ ಬಗ್ಗೆ ಮೊಸಳೆ ಕಣ್ಣೀರು ಹಾಕಿದರೆ ಕನ್ನಡಿಗರು ನಂಬಬೇಕಾ ಎಂದು ಕಿಡಿಕಾರಿದ್ದಾರೆ.