ಮತ್ತೆ ಸುದ್ದಿಯಲ್ಲಿ ಯತ್ನಾಳ್: ಜಾತಿ ನಿಂದನೆ ಕೇಸ್ ಬುಕ್..!
ಸದಾ ಒಂದಿಲ್ಲೊಂದು ವಿವಾದವನ್ನ ಮೈಮೇಲೆ ಎಳೆದುಕೊಂಡು ಟೀಕೆಗೆ ಗುರಿಯಾಗುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಇದೀಗ ಜಾತಿ ನಿಂದನೆ ಕೇಸ್ ದಾಖಲಾಗಿದೆ.
ದಾವಣಗೆರೆ, (ಮಾ.07): ಮಹಾಭಾರತ ಬರೆದದ್ದು ಕೀಳುಜಾತಿಯ ವಾಲ್ಮೀಕಿ ಎಂದು ಹೇಳಿ ಎಡುವಟ್ಟು ಮಾಡಿಕೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಾಗಿದೆ.
ಯತ್ನಾಳ್ ವಿರುದ್ಧ ಇಂದು (ಶನಿವಾರ) ದಾವಣಗೆರೆ ಬಡಾವಣೆ ಪೋಲಿಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣದ ಅಡಿ ದೂರು ದಾಖಲಾಗಿದೆ. ವಾಲ್ಮೀಕಿ ಸಮಾಜದ ಯುವ ಮುಖಂಡ ರಘು ದೊಡ್ಮನಿ ಎನ್ನುವರು ಯತ್ನಾಳ್ ವಿರುದ್ಧ ದೂರು ದಾಖಲಿಸಿದ್ದಾರೆ.
ಮಹಾಭಾರತ ಬರೆದದ್ದು ಕೀಳುಜಾತಿಯ ವಾಲ್ಮೀಕಿ: ಯತ್ನಾಳ್ ಮತ್ತೊಂದು ಎಡವಟ್ಟು
ಶುಕ್ರವಾರ ಸದನದಲ್ಲಿ ಸಂವಿಧಾನದ ಕುರಿತು ಚರ್ಚೆಗಳು ನಡೆಯುತ್ತಿದ್ದು ಈ ವೇಳೆ ಮಾತನಾಡಿದ ಯತ್ನಾಳ್, ಮಹಾಭಾರತವನ್ನು ಬರೆದಿದ್ದು ಕೀಳುಜಾತಿಯ ವಾಲ್ಮೀಕಿ ಎಂದಿದ್ದರು.
ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಭಾಷಣ ಒಂದನ್ನು ಉಲ್ಲೇಖ ಮಾಡಿದ ಯತ್ನಾಳ್, ಹಿಂದೂಗಳಿಗೆ ವೇದಗಳು ಬೇಕಾಗಿದ್ದವು. ಆಗ ಅವರು ವ್ಯಾಸನನ್ನು ಕರೆದರು. ಅವರಿಗೊಂದು ಮಹಾ ಕಾವ್ಯ ಮಹಾಭಾರತ ಬೇಕಾಗಿತ್ತು. ಆವಾಗ ಅಸ್ಪೃಶ್ಯನಾದ ವಾಲ್ಮೀಕಿ ಬೇಕಾದ. ಇದೀಗ ಸಂವಿಧಾನದ ಅಗತ್ಯವಿದೆ ಅದಕ್ಕಾಗಿ ನನ್ನನ್ನು ಕರೆದರು ಎಂದು ಅಂಬೇಡ್ಕರ್ ಮಾತನ್ನು ಸದನದಲ್ಲಿ ತಪ್ಪಾಗಿ ಉಲ್ಲೇಖ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ವಾಲ್ಮೀಕಿ ಸಮಾಜದ ಯುವ ಮುಖಂಡ ರಘು ದೊಡ್ಮನಿ ಎನ್ನುವರು ದಾವಣಗೆರೆ ಬಡಾವಣೆ ಪೋಲಿಸ್ ಠಾಣೆಯಲ್ಲಿ ಕೇಸ್ ಬುಕ್ ಮಾಡಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಮಾಯಣದ ಕತೃ, ವಿಶ್ವಗುರು ಮಹರ್ಷಿ ವಾಲ್ಮೀಕಿರವರನ್ನ ಒಬ್ಬ ಅಸ್ಪರ್ಶ ಎಂದು ಮತ್ತು ಅವರು ಹುಟ್ಟಿರುವ ಜಾತಿಯನ್ನ ಬಳಸಿ ನಿಂದಿಸಿ ಅವಮಾನಿಸಿದ್ದಾರೆ. ಆದ್ದರಿಂದ ಯತ್ನಾಳ್ ವಿರುದ್ಧ ಸನುಸೂಷಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ಪ್ರತಿಬಂದ) ಕಾಯ್ದೆ 1989ರ ಅಡಿಯಲ್ಲಿ ಜಾತಿ ನಿಂದನೆ ಪ್ರಕರಣವನ್ನ ದಾಖಲಿಸಿ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಅವರನ್ನು ಪಾಕಿಸ್ತಾನದ ಏಜೆಂಟ್ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿ ವಿವಾದ ಸೃಷ್ಟಿಸಿಕೊಂಡಿದ್ದನ್ನ ಇಲ್ಲಿ ಸ್ಮರಿಸಬಹುದು.
ಮಾರ್ಚ್ 7ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ