ಬಿಟಿಎಂ ಬಡಾವಣೆಯ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಎಂದು ಹೇಳಿಕೊಂಡು ಓಡಾಡುತ್ತಿರುವ ವ್ಯಕ್ತಿಯೊಬ್ಬರ ಮೇಲೆ ಬಡವರಿಗೆ ನಕಲಿ ನಿವೇಶನ ನೀಡಿ ವಂಚಿಸಿರುವುದು ಸೇರಿ 12 ಕ್ರಿಮಿನಲ್‌ ಪ್ರಕರಣ ಇವೆ. ಅವುಗಳ ಬಗ್ಗೆ ಕ್ರಮ ಕೈಗೊಳ್ಳದೆ ಸರ್ಕಾರ ರಕ್ಷಿಸುತ್ತಿದ್ದು, ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದೇವೆ: ಕೆಪಿಸಿಸಿ ವಕ್ತಾರ ರಮೇಶ್‌ ಬಾಬು 

ಬೆಂಗಳೂರು(ಏ.06): ರಾಜ್ಯದಲ್ಲಿ ಆಡಳಿತ ಪಕ್ಷ ಬಿಜೆಪಿಯ 40 ಶಾಸಕರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾಗಿವೆ. ಬಿಜೆಪಿಯ ಶೇ.35ರಷ್ಟು ಶಾಸಕರು ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿದ್ದಾರೆ. ರೌಡಿ ಶೀಟರ್‌ಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿರುವ ಬಿಜೆಪಿಯು ಹಲವಾರು ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿರುವವರ ರಕ್ಷಣೆಗೆ ಮುಂದಾಗಿದೆ ಎಂದು ಕೆಪಿಸಿಸಿ ವಕ್ತಾರ ರಮೇಶ್‌ ಬಾಬು ಆರೋಪಿಸಿದ್ದಾರೆ.

ಬಿಟಿಎಂ ಬಡಾವಣೆಯ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಎಂದು ಹೇಳಿಕೊಂಡು ಓಡಾಡುತ್ತಿರುವ ವ್ಯಕ್ತಿಯೊಬ್ಬರ ಮೇಲೆ ಬಡವರಿಗೆ ನಕಲಿ ನಿವೇಶನ ನೀಡಿ ವಂಚಿಸಿರುವುದು ಸೇರಿ 12 ಕ್ರಿಮಿನಲ್‌ ಪ್ರಕರಣ ಇವೆ. ಅವುಗಳ ಬಗ್ಗೆ ಕ್ರಮ ಕೈಗೊಳ್ಳದೆ ಸರ್ಕಾರ ರಕ್ಷಿಸುತ್ತಿದ್ದು, ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಎನ್‌.ಆರ್‌.ರಮೇಶ್‌ ಬಳಿ ಅಕ್ರಮ 200 ಕೋಟಿ ಆಸ್ತಿ: ರಮೇಶ್‌ ಬಾಬು

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ವ್ಯಕ್ತಿ ವಿರುದ್ಧ 12 ಕ್ರಿಮಿನಲ್‌ ಪ್ರಕರಣ ಹೆಬ್ಬಗೋಡಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿವೆ. ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿರುವ ಇವರಿಗೇ ಮಣೆ ಹಾಕಲು ಯತ್ನಿಸುತ್ತಿದೆ ಎಂದು ದೂರಿದರು.

1997ರಲ್ಲಿ ಜಮೀನು ಪ್ರಕರಣವೊಂದರಲ್ಲಿ ಅನೇಕ ಕೇಸು ದಾಖಲಾಗಿವೆ. ಜಿಗಣಿ ಹೋಬಳಿಯಲ್ಲಿ 9 ಎಕರೆ ಜಾಗದಲ್ಲಿ 450ಕ್ಕೂ ಹೆಚ್ಚು ಕಂದಾಯ ನಿವೇಶನ ಸೃಷ್ಟಿಮಾಡಿ ಬಡವರಿಗೆ ಮಾರಿದ್ದಾರೆ. ಬಳಿಕ ಅದೇ ಜಮೀನಿಗೆ ಮತ್ತೆ ದಾಖಲೆ ಸೃಷ್ಟಿಸಿ ಖಾಸಗಿ ಕಂಪನಿಗಳು ಹಾಗೂ ವ್ಯಕ್ತಿಗಳಿಗೆ ಮಾರಾಟ ಮಾಡಿ ಕೋಟ್ಯಂತರ ರು. ಅವ್ಯವಹಾರ ಮಾಡಿದ್ದಾರೆ. ಈ ಬಗ್ಗೆ ದೂರು ದಾಖಲಾಗಿದ್ದರೂ ಪೂರ್ಣ ಪ್ರಮಾಣದ ತನಿಖೆಯಾಗಿಲ್ಲ.

ಸಿಒಡಿ ತನಿಖೆಗೆ ಆಗ್ರಹ:

ಹೀಗಾಗಿ ಕಾಂಗ್ರೆಸ್‌ ಪರವಾಗಿ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ, ಪೊಲೀಸ್‌ ಮಹಾ ನಿರ್ದೇಶಕರಿಗೆ ಪತ್ರ ಬರೆದು ಈ ಹಗರಣ ಸಿಐಡಿ ತನಿಖೆಗೆ ನೀಡಬೇಕು ಎಂದು ಒತ್ತಾಯಿಸಿದ್ದೇವೆ. ಈ ಆರೋಪಕ್ಕೆ ಗುರಿಯಾಗಿರುವ ಶ್ರೀಧರ್‌ ರೆಡ್ಡಿ ಹಾಗೂ ಅವರ ಸಹಚರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಿವೇಶನ ಖರೀದಿ ಮಾಡಿರುವವರಿಗೆ ತೊಂದರೆ ಆಗದಂತೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದೇವೆ ಎಂದರು.

ಕ್ಷೇತ್ರ ಹುಡುಕಾಟ ಸಿದ್ದುಗೆ ಅನಿವಾರ್ಯವೇ?: ಮಾಜಿ ಎಂಎಲ್ಸಿ ರಮೇಶ್‌ ಬಾಬು

ಜನರ ಗಮನ ಬೇರೆಡೆ ಸೆಳೆಯಲು ದೇವೇಗೌಡರ ಹೇಳಿಕೆ: ಬಾಬು

ಬೆಂಗಳೂರು: ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಅವರ ನಡುವೆ ಒಳ ಒಪ್ಪಂದ ಆಗಿದೆ ಎಂಬ ಎಚ್‌.ಡಿ. ದೇವೇಗೌಡ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಮೇಶ್‌ ಬಾಬು, ವರುಣಾದಲ್ಲಿ ವಿಜಯೇಂದ್ರ ಅವರ ಸ್ಪರ್ಧೆಗೆ ಯಡಿಯೂರಪ್ಪ ಅವರು ಒಪ್ಪುತ್ತಿಲ್ಲ ಎಂಬ ಕಾರಣಕ್ಕೆ ಈ ಹೇಳಿಕೆ ನೀಡಿದ್ದಾರೆ.

ನಾನು ದೇವೇಗೌಡರ ಮೇಲೆ ಅಪಾರ ಗೌರವ ಹೊಂದಿದ್ದು, ಅವರ ಬಾಯಲ್ಲಿ ಇಂತಹ ಹೇಳಿಕೆ ಬರಬಾರದು. ಅವರು ಹಾಸನ ಟಿಕೆಟ್‌ ವಿಚಾರವಾಗಿ ಇರುವ ಗೊಂದಲದ ವಿಚಾರದಿಂದ ಜನರ ಗಮನ ಬೇರೆಡೆ ಸೆಳೆಯಲು ಈ ಹೇಳಿಕೆ ನೀಡಿದ್ದಾರೆ ಎಂದರು.