ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಒಂದು ತಿಂಗಳಷ್ಟೇ ಕಳೆದಿದೆ  ಇಷ್ಟು ಕಡಿಮೆ ಅವಧಿಯಲ್ಲಿ ಸರ್ಕಾರ ಪಾಸೋ, ಫೇಲೋ ಎಂದು ನಿರ್ಧರಿಸಲು ಆಗುವುದಿಲ್ಲ ಎಂದ ಶೆಟ್ಟರ್

 ಹುಬ್ಬಳ್ಳಿ (ಸೆ.04):  ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಒಂದು ತಿಂಗಳಷ್ಟೇ ಕಳೆದಿದ್ದು, ಇಷ್ಟು ಕಡಿಮೆ ಅವಧಿಯಲ್ಲಿ ಸರ್ಕಾರ ಪಾಸೋ, ಫೇಲೋ ಎಂದು ನಿರ್ಧರಿಸಲು ಆಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ ಶೆಟ್ಟರ್‌ ಹೇಳಿದರು.

ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಿದ ಬಳಿಕ ಮಾತನಾಡಿದ ಅವರು, ಗೃಹ ಸಚಿವ ಅಮಿತ್‌ ಶಾ ಅವರು ಸರ್ಕಾರ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಹೇಳಿರುವುದು ಒಳ್ಳೆಯದು ಎಂದಷ್ಟೇ ಹೇಳಿದರು.

ರಾಜ್ಯ ಬಿಜೆಪಿ ಪಾಳಯದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

ಮುಂದಿನ ಚುನಾವಣೆಯನ್ನು ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದಲ್ಲಿ ನಡೆಸುವ ಬಗ್ಗೆ ಶಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಇನ್ನೂ ದೂರವಿದೆ. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಯಡಿಯೂರಪ್ಪ ಅವರು ಸ್ವಯಂ ಆಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಎಂದು ಅಮಿತ್‌ ಶಾ ಅವರೇ ಹೇಳಿದ್ದಾರೆ. ಈ ವಿಷಯದಲ್ಲಿ ನಾನು ಹೇಳುವುದು ಏನೂ ಇಲ್ಲ ಎಂದರು.

ಬೇರೆ ಬೇರೆ ಸರ್ಕಾರ ಇದ್ದಾಗಲೂ ಬೆಲೆ ಏರಿಕೆ ಇದ್ದೇ ಇತ್ತು. ಹೀಗಾಗಿ ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಈ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಾಲಕಾಲಕ್ಕೆ ಏರಿಕೆ ಆಗುವುದು ಸಹಜ ಎಂದರು.

ಈ ಬಾರಿ ಟಿಕೆಟ್‌ ಆಕಾಂಕ್ಷಿಗಳು ಹೆಚ್ಚಿದ್ದರು. ಒಂದು ವಾರ್ಡಿನಲ್ಲಿ 10-15 ಅರ್ಜಿಗಳು ಬಂದಿದ್ದವು. ಬಂಡಾಯವಾಗಿ ನಿಂತವರ ಮೇಲೆ ಪಕ್ಷದಿಂದ ಕ್ರಮವಾಗಿದೆ. ಟಿಕೆಟ್‌ ಸಿಗದ ಕಾರಣಕ್ಕೆ ಬಂಡಾಯವೆದ್ದು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವ ಯಾರೂ ಗೆಲ್ಲುವುದಿಲ್ಲ ಎಂದರು.

ಬಿಜೆಪಿ ಅಭ್ಯರ್ಥಿಗೆ ಜೈಲಿನಿಂದಲೆ ಬೆದರಿಕೆ ಬಂದ ಆರೋಪ ಗಮನಕ್ಕಿದೆ. ಪೊಲೀಸರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಆದರೆ, ದೂರು ನೀಡಲಾಗದಂತೆ ಬೆದರಿಕೆ ಇದ್ದರೂ ಇರಬಹುದು ಎಂದರು.