ಇಂದು ಬೆಳಗ್ಗೆ ರಹಸ್ಯ ಬಯಲು ಖಾತೆ ಭಾರೀ ಬದಲಾವಣೆ?| 7 ನೂತನ ಸಚಿವರಿಗೆ ಇಂದು ಖಾತೆಗಳ ಹಂಚಿಕೆ| 15ಕ್ಕೂ ಹೆಚ್ಚು ಮಂತ್ರಿಗಳ ಖಾತೆ ಬದಲು ಸಂಭವ| 7.30ರಿಂದ 8ರೊಳಗೆ ಖಾತೆ ಪ್ರಕಟ: ಬಿಎಸ್‌ವೈ

ಬೆಂಗಳೂರು(ಜ.21): ಕಡೆಗೂ ನೂತನ ಸಚಿವರಿಗೆ ಖಾತೆ ಹಂಚಿಕೆಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಹೂರ್ತ ನಿಗದಿಪಡಿಸಿದ್ದಾರೆ. ಗುರುವಾರ ಬೆಳಗ್ಗೆ 7.30ರಿಂದ 8 ಗಂಟೆ ವೇಳೆಗೆ ಖಾತೆ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿಯವರೇ ಘೋಷಿಸಿದ್ದಾರೆ.

ತನ್ಮೂಲಕ ನೂತನ 7 ಸಚಿವರಿಗೆ ಯಾವ ಖಾತೆ ಒಲಿಯಬಹುದು ಎಂಬ ಬಗ್ಗೆ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿದೆ. ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಂಪುಟಕ್ಕೆ ಸೇರಿದ ಹೊಸ ಸಚಿವರಿಗೆ ಇಲಾಖೆಗಳ ಹೊಣೆಗಾರಿಕೆಯನ್ನು ಗುರುವಾರ ನೀಡಲಾಗುವುದು. ಈಗಾಗಲೇ ಸಚಿವರಿಗೆ ಖಾತೆ ಹಂಚಿಕೆಯ ಲಿಸ್ಟ್‌ ಸಹ ಸಿದ್ಧವಾಗಿದೆ. ಯಾರಿಗೆ ಯಾವ ಖಾತೆ ಸಿಗಲಿದೆ ಎಂಬುದು ಗುರುವಾರ ಬೆಳಗ್ಗೆ 7.30ರಿಂದ 8 ಗಂಟೆಯೊಳಗೆ ಗೊತ್ತಾಗಲಿದೆ ಎಂದು ಪ್ರಕಟಿಸಿದರು.

ಭಾರಿ ಬದಲಾವಣೆ?

ಮೂಲಗಳ ಪ್ರಕಾರ, ಹಾಲಿ ಇರುವ ಕನಿಷ್ಠ 15 ಸಚಿವರ ಖಾತೆಯಲ್ಲಿ ಬದಲಾವಣೆಯಾಗಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಣಕಾಸು, ಬೆಂಗಳೂರು ನಗರಾಭಿವೃದ್ಧಿ, ಇಂಧನ, ಗುಪ್ತಚರ ಖಾತೆಗಳನ್ನು ತಮ್ಮ ಬಳಿಯೇ ಇಟ್ಟುಕೊಳ್ಳಲಿದ್ದಾರೆ. ಈ ಮೂಲಕ ಬೆಂಗಳೂರು ನಗರಾಭಿವೃದ್ಧಿ ಖಾತೆ ಮೇಲೆ ಕಣ್ಣಿಟ್ಟಿರುವ ಡಿಸಿಎಂ ಅಶ್ವತ್ಥ ನಾರಾಯಣ, ಆರ್‌. ಅಶೋಕ್‌, ಅರವಿಂದ ಲಿಂಬಾವಳಿ ಅವರಿಗೆ ನಿರಾಶೆ ಉಂಟು ಮಾಡಲಿದ್ದಾರೆ ಎನ್ನಲಾಗಿದೆ.

ಗಣಿ ಮತ್ತು ಭೂವಿಜ್ಞಾನ ಸಚಿವರಾಗಿರುವ ಸಿ.ಸಿ. ಪಾಟೀಲ್‌ ಅವರ ಖಾತೆ ಬದಲಾಗಲಿದ್ದು, ಅವರಿಂದ ಆ ಖಾತೆಯನ್ನು ಹಿಂಪಡೆದು ಸಣ್ಣ ಕೈಗಾರಿಕೆ, ವಾರ್ತಾ ಇಲಾಖೆಯನ್ನು ನೀಡಲಾಗುತ್ತದೆ. ಆನಂದ ಸಿಂಗ್‌ ಅವರಿಂದ ಅರಣ್ಯ ಖಾತೆ ಹಿಂಪಡೆದು, ಪ್ರವಾಸೋದ್ಯಮ ಮತ್ತು ಪರಿಸರ ಖಾತೆಯನ್ನು ನೀಡಲಾಗುತ್ತದೆ. ನೂತನ ಸಚಿವ ಅರವಿಂದ ಲಿಂಬಾವಳಿ ಅವರಿಗೆ ಅರಣ್ಯ ಖಾತೆ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.

ಜೆ.ಸಿ. ಮಾಧುಸ್ವಾಮಿ ಅವರಿಂದ ಕಾನೂನು ಖಾತೆಯನ್ನು ಹಿಂಪಡೆದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಹೆಚ್ಚುವರಿ ನೀಡಲಾಗುತ್ತದೆ. ಆರೋಗ್ಯ ಸಚಿವ ಸುಧಾಕರ್‌ ಬಳಿ ಇರುವ ವೈದ್ಯಕೀಯ ಶಿಕ್ಷಣವನ್ನು ಮಾಧುಸ್ವಾಮಿ ಅವರಿಗೆ ಕೊಡಲಾಗುತ್ತದೆ. ಇದರ ಜತೆಗೆ ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನೂ ನೀಡಲಾಗುತ್ತದೆ. ಗೋಪಾಲಯ್ಯ ಅವರ ಬಳಿ ಇರುವ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆಯನ್ನು ಉಮೇಶ್‌ ಕತ್ತಿ ಅವರಿಗೆ ನೀಡಲಾಗುತ್ತದೆ. ಗೋಪಾಲಯ್ಯ ಅವರಿಗೆ ತೋಟಗಾರಿಕೆ ಮತ್ತು ಸಕ್ಕರೆ ಖಾತೆ ಕೊಡಲಾಗುತ್ತದೆ ಎಂದು ಮೂಲಗಳು ವಿವರಿಸಿವೆ.

ಸಂಭಾವ್ಯ ಖಾತೆಗಳು

ಬಿ.ಎಸ್‌.ಯಡಿಯೂರಪ್ಪ- ಡಿಪಿಎಆರ್‌, ಹಣಕಾಸು, ಬೆಂಗಳೂರು ನಗರಾಭಿವೃದ್ಧಿ, ಇಂಧನ, ಗುಪ್ತಚರ, ಹಂಚಿಕೆ ಮಾಡದ ಇತರ ಖಾತೆಗಳು

ಬಸವರಾಜ ಬೊಮ್ಮಾಯಿ- ಗೃಹ, ಕಾನೂನು ಮತ್ತು ಸಂಸದೀಯ

ಸಿ.ಸಿ.ಪಾಟೀಲ್‌ - ಸಣ್ಣ ಕೈಗಾರಿಕೆ, ವಾರ್ತಾ ಇಲಾಖೆ

ಅರವಿಂದ ಲಿಂಬಾವಳಿ - ಅರಣ್ಯ

ಕೋಟ ಶ್ರೀನಿವಾಸ ಪೂಜಾರಿ - ಮುಜರಾಯಿ, ಹಿಂದುಳಿದ ವರ್ಗ

ಎಸ್‌.ಅಂಗಾರ - ಮೀನುಗಾರಿಕೆ ಮತ್ತು ಬಂದರು

ಉಮೇಶ್‌ ಕತ್ತಿ - ಆಹಾರ ಮತ್ತು ನಾಗರಿಕ ಪೂರೈಕೆ

ಡಾ| ಕೆ.ಸುಧಾಕರ್‌ - ಆರೋಗ್ಯ ಇಲಾಖೆ

ಮುರುಗೇಶ್‌ ನಿರಾಣಿ - ಗಣಿಗಾರಿಕೆ

ಎಂಟಿಬಿ ನಾಗರಾಜ್‌ - ಅಬಕಾರಿ

ಜೆ.ಸಿ.ಮಾಧುಸ್ವಾಮಿ - ವೈದ್ಯಕೀಯ ಶಿಕ್ಷಣ ಮತ್ತು ಕನ್ನಡ-ಸಂಸ್ಕೃತಿ

ಕೆ.ಗೋಪಾಲಯ್ಯ - ತೋಟಗಾರಿಕೆ ಮತ್ತು ಸಕ್ಕರೆ

ಕೆ.ಸಿ.ನಾರಾಯಣಗೌಡ - ಯುವಜನ ಸೇವೆ ಮತ್ತು ಕ್ರೀಡೆ, ಹಜ್‌ ಮತ್ತು ವಕ್ಫ್

ಆರ್‌.ಶಂಕರ್‌ - ಪೌರಾಡಳಿತ ಮತ್ತು ರೇಷ್ಮೆ

ಆನಂದ ಸಿಂಗ್‌ - ಪ್ರವಾಸೋದ್ಯಮ, ಪರಿಸರ

ಸಿ.ಪಿ.ಯೋಗೇಶ್ವರ್‌ - ಸಣ್ಣ ನೀರಾವರಿ

ಪ್ರಭು ಚವ್ಹಾಣ - ಪಶು ಸಂಗೋಪನೆ

ಶಿವರಾಮ್‌ ಹೆಬ್ಬಾರ್‌- ಕಾರ್ಮಿಕ ಖಾತೆ