ಇಡೀ ವಿಶ್ವಕ್ಕೆ ಮೊದಲ ಸಂಸತ್ ಎಂದೇ ಕರೆಯಲ್ಪಡುವ ಅನುಭವ ಮಂಟವೂ ನೂತನವಾಗಿ ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿದ್ದು, ಈ ಯೋಜನೆಯ ₹742 ಕೋಟಿ ಪರಿಷ್ಕೃತ ಅಂದಾಜು ವೆಚ್ಚಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ದಾಬಸ್‍ಪೇಟೆ (ಜೂ.20): ಇಡೀ ವಿಶ್ವಕ್ಕೆ ಮೊದಲ ಸಂಸತ್ ಎಂದೇ ಕರೆಯಲ್ಪಡುವ ಅನುಭವ ಮಂಟವೂ ನೂತನವಾಗಿ ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿದ್ದು, ಈ ಯೋಜನೆಯ ₹742 ಕೋಟಿ ಪರಿಷ್ಕೃತ ಅಂದಾಜು ವೆಚ್ಚಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಭೂ ವಿವಾದದ ಕಾರಣದಿಂದ ಮೊದಲು ನಿರ್ಧರಿಸಲಾದ ಸ್ಥಳದಲ್ಲಿ ಕಾಮಗಾರಿ ಸಾಧ್ಯವಾಗದ್ದರಿಂದ ಬೇರೆ ಸ್ಥಳದಲ್ಲಿ ಜಾಗ ನೀಡಲಾಗಿದ್ದು, ಕಂದಾಯ ಇಲಾಖೆ ಮತ್ತು ಯೋಜನಾ ವೆಚ್ಚದಲ್ಲಿ ಜಿಎಸ್‌ಟಿ ಶೇ.18ಕ್ಕೆ ಏರಿಕೆ ಆದ ಪರಿಣಾಮ ಮೊದಲು ಅಂದಾಜಿಸಿದ್ದ ₹612 ಕೋಟಿ ಯೋಜನೆಯು ಈಗ ₹742 ಕೋಟಿಗೆ ಪರಿಷ್ಕೃತವಾಗಿದೆ. ಇದಕ್ಕೆ ಅನುಮೋದನೆ ನೀಡಿದ ಸಿಎಂ, ಡಿಸಿಎಂ, ಸಂಪುಟದ ಎಲ್ಲ ಸಹೋದ್ಯೋಗಿಗಳಿಗೆ ಧನ್ಯವಾದ ಎಂದರು.

ಅರಣ್ಯ ಭೂಮಿ ಉಳುಮೆಗೆ ವಿಶೇಷ ಪ್ರಸ್ತಾವನೆ: ಅರಣ್ಯ ಕಾಯಿದೆ 1963ರ ಸೆಕ್ಷನ್‌ 4ರ ಅಡಿ ಅಧಿಸೂಚನೆ ಹೊರಡಿಸಿದ ಬಳಿಕ ಮಂಜೂರಾಗಿ 30-40 ವರ್ಷಗಳಿಂದ ಮನೆ ಕಟ್ಟಿ, ಉಳುಮೆ ಮಾಡುತ್ತಿರುವ ರೈತರಿಗೆ ನ್ಯಾಯ ಒದಗಿಸಲು ಕೇಂದ್ರ ಹಾಗೂ ಸುಪ್ರೀಂ ಕೋರ್ಟ್‌ಗೆ ವಿಶೇಷ ಪ್ರಸ್ತಾವನೆ ಸಲ್ಲಿಸುವುದಾಗಿ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಭರವಸೆ ನೀಡಿದ್ದಾರೆ. ವಿಕಾಸಸೌಧದಲ್ಲಿ ಶುಕ್ರವಾರ ಚಿಕ್ಕಮಗಳೂರು ಜಿಲ್ಲೆಯ ಶಾಸಕರು ಹಾಗೂ ಅರಣ್ಯ, ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ರೈತರಿಗೆ ಶಾಶ್ವತ ಪರಿಹಾರ ಒದಗಿಸಲು ಸಂಬಂಧಪಟ್ಟ ಜಮೀನನ್ನು ಡೀಮ್ಡ್‌ ಅರಣ್ಯ ವ್ಯಾಪ್ತಿಯಿಂದ ಕೈಬಿಡಬೇಕು. ಅದಕ್ಕೆ ಪರಿಹಾರವಾಗಿ ಅರಣ್ಯೇತರ ಕಂದಾಯ ಭೂಮಿಯನ್ನು ನೀಡಿ ಅಲ್ಲಿ ಅರಣ್ಯೀಕರಣ ಮಾಡುತ್ತೇವೆ ಎಂದು ಸುಪ್ರೀಂ ಕೋರ್ಟ್‌ ಹಾಗೂ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಎಂದು ಭರವಸೆ ನೀಡಿದರು.

ಅರಣ್ಯ ಕಾಯಿದೆ 1963ರ ಸೆಕ್ಷನ್ 4ರಡಿ ಅಧಿಸೂಚನೆ ಆಗುವ ಮುನ್ನ ಮಂಜೂರಾಗಿರುವ ಭೂಮಿಯನ್ನು ಅರಣ್ಯದಿಂದ ಕೈಬಿಡಲು ಸರ್ಕಾರಕ್ಕೆ ಅವಕಾಶವಿದೆ. ಆದರೆ ಅಧಿಸೂಚನೆ ಹೊರಡಿಸಿದ ಬಳಿಕ ಮಂಜೂರಾಗಿರುವ ಜಮೀನು, ವಸತಿ ಪ್ರದೇಶ, ಪಟ್ಟಾಭೂಮಿ ಇತ್ಯಾದಿ ಇರುವ ಜಾಗವನ್ನು ಡೀಮ್ಡ್‌ ಅರಣ್ಯದಿಂದ ಕೈಬಿಡಬೇಕು. ಈ ಜಮೀನಿಗೆ ಪರ್ಯಾಯವಾಗಿ ಬೇರೆಡೆ ಲಭ್ಯವಿರುವ ಅರಣ್ಯೇತರ ಭೂಮಿ ನೀಡುತ್ತೇವೆ ಎಂದು ಮನವಿ ಸಲ್ಲಿಸಲಾಗುವುದು ಎಂದು ಖಂಡ್ರೆ ತಿಳಿಸಿದರು.

ಹಾಸನ ಜಿಲ್ಲೆಯ ಅರಸೀಕೆರೆ ವ್ಯಾಪ್ತಿಯಲ್ಲಿನ ಕರಡಿ ಧಾಮದ ಸುತ್ತ ಪ್ರಸ್ತುತ 10 ಕಿ.ಮೀ. ಬಫರ್ ವಲಯ ಎಂದು ಘೋಷಿಸಲಾಗಿರುವ ಕಾರಣ ಗಡಿ ಭಾಗದ ಚಿಕ್ಕಮಗಳೂರು ರೈತರೂ ಸಂಕಷ್ಟ ಎದುರಿಸುವಂತಾಗಿದೆ ಎಂಬ ಶಾಸಕರ ಮನವಿಗೆ ಸ್ಪಂದಿಸಿದ ಸಚಿವರು, ಈ ಮಿತಿಯನ್ನು 1 ಕಿ.ಮೀ.ಗೆ ಇಳಿಕೆ ಮಾಡಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಶೀಘ್ರವೇ ಈ ಸಮಸ್ಯೆ ಬಗೆಹರಿಯುತ್ತದೆ ಎಂದು ಭರವಸೆ ನೀಡಿದರು. ಹಲವು ಪ್ರಕರಣಗಳಲ್ಲಿ ಸೆಕ್ಷನ್ 4 ಅಧಿಸೂಚನೆ ಆಗಿ 60-70 ವರ್ಷವಾಗಿದ್ದರೂ ಇನ್ನೂ ಸೆಕ್ಷನ್ 17 ಆಗಿರುವುದಿಲ್ಲ. 1980ರ ಅರಣ್ಯ ಸಂರಕ್ಷಣಾ ಕಾಯಿದೆ ಜಾರಿ ಬಳಿಕ ಈಗ ಅಂತಹ ಅರಣ್ಯ ಕೈಬಿಡುವುದು ಕಷ್ಟಸಾಧ್ಯ ಆಗಿದೆ. ಹೀಗಾಗಿ ಕೇಂದ್ರ ಹಾಗೂ ಸುಪ್ರೀಂಕೋರ್ಟ್‌ಗೆ ಮನವಿ ಮಾಡುವುದು ಅನಿವಾರ್ಯ ಎಂದು ಹೇಳಿದರು.