ಬೆಂಗಳೂರು(ನ.29): ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ನನ್ನ ವಿರುದ್ಧ ಪಿತೂರಿ ಮಾಡಿದರು. ಅವರಿಬ್ಬರೂ ಈಗ ಯಾವ ಪರಿಸ್ಥಿತಿಯಲ್ಲಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಬಿಜೆಪಿಯ ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ವ್ಯಂಗ್ಯವಾಡಿದ್ದಾರೆ. ಈ ಮೂಲಕ ‘ಚನ್ನಪಟ್ಟಣಕ್ಕೆ ನಾನೇ ಮಂತ್ರಿ, ನಾನೇ ಸರ್ಕಾರ’ ಎಂದಿದ್ದ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.

ಶನಿವಾರ ಸಚಿವ ರಮೇಶ್‌ ಜಾರಕಿಹೊಳಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನ ಹೋದ ಬಳಿಕ ತಳಮಳಗೊಂಡಿದ್ದು, ಬಹಳ ಹತಾಶರಾಗಿ ಮಾತನಾಡುತ್ತಿದ್ದಾರೆ. ಬಹಳ ವರ್ಷಗಳಿಂದ ನನ್ನ ವಿರುದ್ಧ ಪಿತೂರಿ ಮಾಡುತ್ತಲೇ ಇದ್ದಾರೆ. ಇದೀಗ ಅವರಿಗೆ ರಾಜಕೀಯ ಸಂಕಷ್ಟವಾಗಿದೆ. ಕೇವಲ ಚನ್ನಪಟ್ಟಣಕ್ಕೆ ಸೀಮಿತರಾಗಿರುವ ಅವರು ಮುಖ್ಯಮಂತ್ರಿ ಹುದ್ದೆ ಉಳಿಸಿಕೊಳ್ಳಲು ಆಗಲಿಲ್ಲ’ ಎಂದು ಮೂದಲಿಸಿದರು.
‘ಅಧಿಕಾರ ಕಳೆದುಕೊಂಡು ಬಹಳ ನೊಂದಿರುವ ಕುಮಾರಸ್ವಾಮಿ ಅವರನ್ನು ನಾನು ಇನ್ನೂ ನೋಯಿಸುವುದಿಲ್ಲ. ಆಗಾಗ ಮುಖ್ಯಮಂತ್ರಿ ಅವರನ್ನು ಭೇಟಿಯಾಗುತ್ತಾರೆ. ಕೆಲಸಗಳನ್ನು ಮಾಡಿಸಿಕೊಂಡು ಹೋಗಲಿ. ಅವರಿಗೆ ನಾನು ರಾಜಕೀಯವಾಗಿ ಬೆಳೆಯಲು ವಿರೋಧವಿದೆ. ಪಕ್ಷದೊಳಗೂ ಹಾಗೂ ಹೊರಗೂ ವಿರೋಧವಿದೆ’ ಎಂದರು.

ಯೋಗೇಶ್ವರ್‌ ಸಚಿವರಾಗುವುದು ನಮ್ಮೆಲ್ಲರ ಆಸೆ: ಡಿಸಿಎಂ ಅ​ಶ್ವತ್ಥ ನಾರಾ​ಯಣ

ಬೇಡ ಎಂದರೂ ವಿವಾದ ಹಿಂದೆ ಬಿದ್ದಿದೆ:

ಸಚಿವ ಸ್ಥಾನಕ್ಕೆ ಕೆಲ ಶಾಸಕರ ವಿರೋಧ ವಿಚಾರ ಕುರಿತು ಮಾತನಾಡಿದ ಯೋಗೇಶ್ವರ, ‘ನಾನು ಸೋತವನು ಅಂತ ಹೇಳುತ್ತಿದ್ದಾರೆ. ನಮ್ಮ ಶಾಸಕರೂ ಅದನ್ನೇ ಹೇಳುತ್ತಿದ್ದಾರೆ. ಯಾಕೋ ಗೊತ್ತಿಲ್ಲ. ವಿವಾದ ನನ್ನ ಹಿಂದೆ ಬಿದ್ದಿದೆ. ಶಾಸಕರು ತಮ್ಮ ಅಭಿಪ್ರಾಯ ಹೇಳಿರಬಹುದು. ನಾನು ಯಾರ ವಿರುದ್ಧವೂ ಮಾತನಾಡುವುದಿಲ್ಲ. ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಬಯಸಿದ್ದೆ. ಪಕ್ಷದ ಅಧಿಕಾರಕ್ಕೆ ಬಂದಿದೆ. ಸಾರ್ವತ್ರಿಕ ಚುನಾವಣೆಯಲ್ಲಿ ಸೋತಿದ್ದ ನನ್ನನ್ನು ವಿಧಾನ ಪರಿಷತ್‌ ಸದಸ್ಯರಾಗಿ ಮಾಡಿದ್ದಾರೆ. ಇನ್ನೇನು ಬೇಕು ನನಗೆ? ವಿವಾದ ಮಾಡಿಕೊಳ್ಳುವುದು ನನಗೆ ಇಷ್ಟವಿಲ್ಲ. ದೆಹಲಿಗೆ ಹೋಗುತ್ತೇನೆ, ಬರುತ್ತೇನೆ. ಇಲ್ಲಿ ವೈಯಕ್ತಿಕ ಅಭಿಪ್ರಾಯಕ್ಕಿಂತ ಪಕ್ಷದ ನಿರ್ಧಾರ ಮುಖ್ಯ’ ಎಂದು ಮಾರ್ಮಿಕವಾಗಿ ಹೇಳಿದರು.