Asianet Suvarna News Asianet Suvarna News

ರಾಜ್ಯದ ತೆರಿಗೆ ಹಣ ದುರುಪಯೋಗ ಮಾಡಲು ಸಿದ್ದು ಸರ್ಕಾರ ಹೊರಟಿದೆ: ವಿಜಯೇಂದ್ರ ಕಿಡಿ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಅವರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

BY Vijayendra Slams Karnataka Congress Government grg
Author
First Published Jan 12, 2024, 5:20 AM IST

ಬೆಂಗಳೂರು(ಜ.12): ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಪಕ್ಷದ ಕಾರ್ಯಕರ್ತರ ಸಮಿತಿ ರಚಿಸುವ ರಾಜ್ಯ ಕಾಂಗ್ರೆಸ್‌ ಸರ್ಕಾರದ ನಿರ್ಧಾರಕ್ಕೆ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದ್ದು, ಈ ಪೈಕಿ ಬಿಜೆಪಿಯು ರಾಜ್ಯಪಾಲರಿಗೆ ದೂರು ನೀಡುವುದಲ್ಲದೆ ಕಾನೂನು ಮೊರೆ ಹೋಗಲು ನಿರ್ಧರಿಸಿದೆ. 

ಗುರುವಾರ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಅವರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಲೋಕಸಭೆಗೆ ಚಿಕ್ಕಬಳ್ಳಾಪುರದಿಂದ ಸ್ಪರ್ಧೆಗೆ ರೆಡಿ: ಶಾಸಕ ಪ್ರದೀಪ್‌ ಈಶ್ವರ್‌

ವಿಜಯೇಂದ್ರ ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರಿಗೆ 20 ಸಾವಿರ 25 ಸಾವಿರ ರು. ಕೊಟ್ಟು ಹಣ ಪೋಲು ಮಾಡಲು ಮುಂದಾಗಿದ್ದಾರೆ. ಈ ಮೂಲಕ ರಾಜ್ಯದ ತೆರಿಗೆ ಹಣವನ್ನು ದುರುಪಯೋಗ ಮಾಡಲು ರಾಜ್ಯ ಸರ್ಕಾರ ಹೊರಟಿದೆ. ಇದು ಯಾವುದೇ ಕಾರಣಕ್ಕೂ ಸರಿ ಇಲ್ಲ ಎಂದು ಹೇಳಿದರು.

ರೈತರಿಗೆ ಬರಗಾಲದ ಪರಿಹಾರ ಹಣ ನೀಡುತ್ತಿಲ್ಲ. ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಇದರ ನಡುವೆ ಕಾರ್ಯಕರ್ತರಿಗೆ ಸಂಬಳ ಕೊಡಲು ತೆರಿಗೆ ಹಣ ಇರುವುದಿಲ್ಲ. ಇದರ ವಿರುದ್ಧ ಸದ್ಯವೇ ರಾಜ್ಯಪಾಲರಿಗೆ ದೂರು ನೀಡುತ್ತೇವೆ. ಅಲ್ಲದೆ, ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದೂ ಅವರು ತಿಳಿಸಿದರು.

ಕುಮಾರಸ್ವಾಮಿ ಮಾತನಾಡಿ, ಈಗ ಗ್ಯಾರಂಟಿ ನೋಡಿಕೊಳ್ಳೋದಕ್ಕೆ ಓರ್ವ ಅಧ್ಯಕ್ಷ, ಅದಕ್ಕೆ ವಾರ್ಷಿಕ 16 ಕೋಟಿ ರು. ಖರ್ಚಂತೆ. ಐವರು ಉಪಾಧ್ಯಕ್ಷರಂತೆ, ಇದೆಲ್ಲಾ ಏನಕ್ಕೆ? ಕಾಂಗ್ರೆಸ್‌ ಯಾರದ್ದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡುತ್ತಿದೆ. ಕಾಂಗ್ರೆಸ್ಸಿನ ಸದ್ಯದ ಪರಿಸ್ಥಿತಿ ನನಗೆ ಅರ್ಥವಾಗಿದೆ. ಲೋಕಸಭಾ ಚುನಾವಣೆ ಫಲಿತಾಂಶ ಬಂದ ಬಳಿಕ ಎಲ್ಲವೂ ಗೊತ್ತಾಗುತ್ತದೆ ಎಂದು ಹೇಳಿದರು.

ಬಸವರಾಜ ಬೊಮ್ಮಾಯಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆಯ ಬಗ್ಗೆ ನನಗೆ ನಿರಾಸೆಯಾಗಿದೆ.‌ ಇವರು ರಾಜ್ಯದ ಮುಖ್ಯಮಂತ್ರಿಯೇ ಅಥವಾ ಕಾಂಗ್ರೆಸ್ ಮುಖ್ಯಮಂತ್ರಿಯೇ? ಗ್ಯಾರಂಟಿ ಹೆಸರಿನಲ್ಲಿ ರಾಜಕೀಯ ಲಾಭ ಮಾಡಿಕೊಳ್ಳುತ್ತಿದ್ದಾರೆ. ಗ್ಯಾರಂಟಿ ಜಾರಿಯ ಬಗ್ಗೆ ನೋಡಿಕೊಳ್ಳಲು ಕಾಂಗ್ರೆಸ್ ಕಾರ್ಯಕರ್ತರೇ ಬೇಕಾ? ಇದು ಕಾನೂನುಬಾಹಿರ ನೇಮಕಾತಿ ಆಗುತ್ತದೆ. ಮುಖ್ಯ ಕಾರ್ಯದರ್ಶಿಗಳು ಇದಕ್ಕೆ ಅವಕಾಶ ಕೊಡಬಾರದು. ಕೊಟ್ಟರೆ ಅವರೂ ಇದರಲ್ಲಿ ಭಾಗಿಯಾಗುತ್ತಾರೆ. ಇದು ಸ್ವಜನ ಪಕ್ಷಪಾತವಾಗುತ್ತದೆ ಎಂದು ತರಾಟೆ ತೆಗೆದುಕೊಂಡರು.

ಮರ ಕಡಿತ ಕೇಸಲ್ಲಿ ಕ್ರಮ ಆಗಿದೆ: ಎಚ್‌ಡಿಕೆಗೆ ಸಚಿವ ಈಶ್ವರ ಖಂಡ್ರೆ ತಿರುಗೇಟು!

ಅಶೋಕ್ ಮಾತನಾಡಿ, ರೈತರಿಗೆ ಪರಿಹಾರ ನೀಡಲು ಕಾಂಗ್ರೆಸ್‌ ಸರ್ಕಾರದ ಬಳಿ ಹಣವಿಲ್ಲ. ಆದರೆ ಕಾಂಗ್ರೆಸ್‌ನ ಚೇಲಾಗಳಿಗೆ ಬಿರಿಯಾನಿ ಊಟ ಕೊಡಿಸಲು, ಮಜಾ ಮಾಡಲು ಮಾತ್ರ 150 ಕೋಟಿ ರು. ಇದೆ ಎಂದು ಲೇವಡಿ ಮಾಡಿದರು.

ಬರಗಾಲದಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರವಾಗಿ ಕಾಂಗ್ರೆಸ್‌ ಸರ್ಕಾರ 100 ಕೋಟಿ ರು. ಬಿಡುಗಡೆಗೊಳಿಸುತ್ತಿದೆ. ನ್ಯಾಯವಾಗಿ ಮೂರ್ನಾಲ್ಕು ಸಾವಿರ ಕೋಟಿ ರು. ನೀಡಬೇಕಿತ್ತು. ಈಗ ಗ್ಯಾರಂಟಿ ಜಾರಿ ಸಮಿತಿಯ ಮೂಲಕ ಮೂರು ಸಾವಿರ ಕಾಂಗ್ರೆಸ್‌ ಕಾರ್ಯಕರ್ತರಿಗೆ 25 ಕೋಟಿ ರು. ಖರ್ಚು ಮಾಡಲಾಗುತ್ತದೆ. ಅಂದರೆ ಐದು ವರ್ಷಕ್ಕೆ 150 ಕೋಟಿ ರು. ಆಗಲಿದೆ. ಕಾಂಗ್ರೆಸ್‌ ಚೇಲಾಗಳಿಗೆ ಮಜಾ ಮಾಡಲು ಇಷ್ಟು ಹಣ ಖರ್ಚು ಮಾಡಲಾಗುತ್ತಿದೆ. ಅವರಿಗೆ ಕ್ಯಾಬಿನೆಟ್‌ ದರ್ಜೆ ನೀಡಲಾಗುತ್ತದೆ. ಗ್ಯಾರಂಟಿ ನಿರ್ವಹಣೆಗೆ ಬೇಕಿದ್ದರೆ ಅಧಿಕಾರಿಗಳನ್ನು ಬಳಸಿಕೊಳ್ಳಲಿ ಎಂದು ಹರಿಹಾಯ್ದರು.

Follow Us:
Download App:
  • android
  • ios