Asianet Suvarna News Asianet Suvarna News

ದಕ್ಷಿಣ ಭಾರತದಲ್ಲೇ ಕರ್ನಾಟಕ ಬಿಜೆಪಿ ಭದ್ರಕೋಟೆ: ಬಿ.ವೈ.ವಿಜಯೇಂದ್ರ

ದಕ್ಷಿಣ ಭಾರತದಲ್ಲಿ ರಾಜ್ಯವು ಬಿಜೆಪಿಯ ಭದ್ರಕೋಟೆ ಎಂಬುದು ಮತ್ತೊಮ್ಮೆ ಲೋಕಸಭಾ ಚುನಾವಣೆಯಲ್ಲಿ ಸಾಬೀತಾಗಿದ್ದು, ಬಿಜೆಪಿ- ಜೆಡಿಎಸ್ ಒಟ್ಟಾಗಿರುವುದಕ್ಕೆ ರಾಜ್ಯ ಜನತೆಯ ಆಶೀರ್ವಾದ ಲಭಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. 
 

BY Vijayendra Said That Karnataka Has Proven To Be A BJP Stronghold In South India gvd
Author
First Published Jun 23, 2024, 6:36 PM IST

ಬೆಂಗಳೂರು (ಜೂ.23): ದಕ್ಷಿಣ ಭಾರತದಲ್ಲಿ ರಾಜ್ಯವು ಬಿಜೆಪಿಯ ಭದ್ರಕೋಟೆ ಎಂಬುದು ಮತ್ತೊಮ್ಮೆ ಲೋಕಸಭಾ ಚುನಾವಣೆಯಲ್ಲಿ ಸಾಬೀತಾಗಿದ್ದು, ಬಿಜೆಪಿ- ಜೆಡಿಎಸ್ ಒಟ್ಟಾಗಿರುವುದಕ್ಕೆ ರಾಜ್ಯ ಜನತೆಯ ಆಶೀರ್ವಾದ ಲಭಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ-ಜೆಡಿಎಸ್‌ನ ಸಂಸದರು, ಸಚಿವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೈತ್ರಿ ಪಕ್ಷದ ಸಂಸದರ ಆಯ್ಕೆಗೆ ಕಾರಣಕರ್ತರಾದ ಎಲ್ಲ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು. ಕಾಂಗ್ರೆಸ್ ಪಕ್ಷದ ಸಾಕಷ್ಟು ಅಪಪ್ರಚಾರ ಮತ್ತು ಆಮಿಷಗಳ ನಡುವೆ ರಾಜ್ಯದ ಜನತೆ ಮೈತ್ರಿಕೂಟಕ್ಕೆ ಆಶೀರ್ವಾದ ಮಾಡಿದ್ದಾರೆ.

ಕಳೆದ ಚುನಾವಣೆಯಲ್ಲಿ ಒಂದು ಸ್ಥಾನ ಗೆದ್ದ ಕಾಂಗ್ರೆಸ್ ಪಕ್ಷ ಈಗ 9 ಸ್ಥಾನ ಗೆದ್ದಿರಬಹುದು. ಆದರೆ, ಮತ್ತೊಂದೆಡೆ ರಾಜ್ಯದ 145ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮುನ್ನಡೆ ಸಾಧಿಸಿವೆ. ಕಾಂಗ್ರೆಸ್ ಸಚಿವರಿರುವ ಕ್ಷೇತ್ರದಲ್ಲೂ ಮೈತ್ರಿ ಅಭ್ಯರ್ಥಿಗಳು ಹೆಚ್ಚಿನ ಮತಗಳನ್ನು ಗಳಿಸಿದ್ದಾರೆ ಎಂದು ಹೇಳಿದರು.  ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಹಣದ ಹೊಳೆ, ಆಮಿಷಗಳ ನಡುವೆ ರಾಜ್ಯದ ಜನರು ಬಿಜೆಪಿ ಸಂಸದರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿದ್ದಾರೆ. 

ಬಿಬಿಎಂಪಿ ಚುನಾವಣೆ ತಂತ್ರಗಾರಿಕೆಗೆ ಕಾಂಗ್ರೆಸ್‌ ಸಮಿತಿ: ಡಿ.ಕೆ.ಶಿವಕುಮಾರ್‌

ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಸರ್ಕಾರ ರಚನೆ ಆಗಬಾರದೆಂದು ದೇಶೀಯ ಶಕ್ತಿಗಳು ಮಾತ್ರವಲ್ಲದೆ, ವಿದೇಶೀಯ ಶಕ್ತಿಗಳೂ ಕೆಲಸ ಮಾಡಿದ್ದವು. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್‌ ಮಿತ್ರಕೂಟ ವಿರುದ್ಧ ಟೀಕಾಪ್ರಹಾರ ನಡೆಸಿದರು.  ಕಾರ್ಯಕ್ರಮದಲ್ಲಿ ಮಿತ್ರಪಕ್ಷದ ಸಚಿವರು, ಸಂಸದರಿಗೆ ಅಭಿನಂದಿಸಿ ಗೌರವಿಸಲಾಯಿತು. ಈ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ ಸೇರಿದಂತೆ ಕೇಂದ್ರದ ಸಚಿವರು, ಸಂಸದರು, ಮಿತ್ರಪಕ್ಷಗಳ ಮುಖಂಡರು ಉಪಸ್ಥಿತರಿದ್ದರು. 

ವಾಲ್ಮೀಕಿ ಹಗರಣಕ್ಕೆ ಸಿಎಂ ಹೊಣೆ: ವಾಲೀಕಿ ಅಭಿವೃದ್ಧಿ ನಿಗಮ ಮಂಡಳಿಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್‌ ಜೋಶಿ ವಾಗ್ದಾಳಿ ನಡೆಸಿದರು.

ಸೋಮಣ್ಣ, ಬಿಎಸ್‌ವೈ ಪರಸ್ಪರ ಟಾಂಗ್‌!: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಾಯಕತ್ವ ವಿಚಾರದಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಡುವೆ ಪರೋಕ್ಷವಾಗಿ ಏಟಿಗೆ-ತಿರುಗೇಟು ನೀಡಿದ ಪ್ರಸಂಗ ನಡೆಯಿತು. ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ-ಜೆಡಿಎಸ್‌ನ ಸಚಿವರು, ಸಂಸದರಿಗೆ ಅಭಿನಂದನಾ ಕಾರ್ಯಕ್ರಮವು ಇಬ್ಬರು ಮುಖಂಡರ ಹೇಳಿಕೆಯು ಪರಸ್ಪರ ಮುನಿಸು ಇರುವುದಕ್ಕೆ ಸಾಕ್ಷಿಯಾಯಿತು. ಕಾರ್ಯಕ್ರಮದಲ್ಲಿ ಮೊದಲಿಗೆ ಮಾತನಾಡಿದ ಕೇಂದ್ರ ಸಚಿವ ವಿ.ಸೋಮಣ್ಣ, ಇನ್ನು ಮುಂದಾದರೂ ಪಕ್ಷದಲ್ಲಿ ಕೆಲಸ ಮಾಡುವವರನ್ನು ಗುರುತಿಸಿ, ಸಂಘಟನೆ ಮಾಡದಿರುವವರನ್ನು ನಿರ್ದಾಕ್ಷಿಣ್ಯವಾಗಿ ಕಿತ್ತು ಹಾಕಬೇಕು. 

ಯಾರೋ ಮಾಡಿದ ಪಾಪಕ್ಕೆ ಇನ್ನಾರನ್ನೋ ಗುರಿ ಮಾಡಬಾರದು ಎಂದು ಯಡಿಯೂರಪ್ಪ ಕುಟುಂಬಕ್ಕೆ ಟಾಂಗ್‌ ಕೊಟ್ಟರು. ಹೈದ್ರಾಬಾದ್‌-ಕರ್ನಾಟಕದಲ್ಲಿ ಐದು ಸ್ಥಾನ ಎಂದೂ ಕಳೆದುಕೊಂಡಿರಲಿಲ್ಲ. ರಾಯಚೂರು, ಕೊಪ್ಪಳ ಬೀದರ್‌, ಕಲಬುರಗಿ, ಬಳ್ಳಾರಿ ಜತೆಗೆ ದಾವಣಗೆರೆ ಕೂಡ ಕಳೆದುಕೊಂಡಿದ್ದೇವೆ. ಎಂದೂ ಹೀಗೆ ಆಗಿರಲಿಲ್ಲ. ಇನ್ನಾದರೂ ಕೆಲಸಕ್ಕೆ ಬಾರದವರ ಮೇಲೆ ಕಠಿಣ ಕ್ರಮ ಆಗಬೇಕು. ವಿಶೇಷವಾಗಿ ಚಿಕ್ಕೋಡಿ ಕ್ಷೇತ್ರದ ಬಗ್ಗೆ ಚರ್ಚೆಯಾಗಬೇಕಿದೆ. ಕೆಲಸವನ್ನೇ ಮಾಡದೆ, ನಾಯಕರ ಹಿಂದೆ ಸುತ್ತಾಡುವವರು ಇದ್ದರೂ ಒಂದೇ, ಬಿಟ್ಟರೂ ಒಂದೇ ಎಂದು ಸ್ವಪಕ್ಷೀಯರ ವಿರುದ್ಧವೇ ಕಿಡಿಕಾರಿದರು.

ಕಳೆದ ಮೂರು ದಶಕಗಳಿಂದ ದಾವಣಗೆರೆ ಬಿಜೆಪಿಯ ಭದ್ರಕೋಟೆಯಾಗಿತ್ತು. ಇಲ್ಲಿ ನಾವು ಕೆಲವೇ ಸಾವಿರ ಮತಗಳ ಅಂತರದಿಂದ ಸೋತಿದ್ದೇವೆ. ಇದಕ್ಕೆ ಯಾರು ಕಾರಣ ಎಂಬುದು ಮುಖ್ಯವಲ್ಲ. ನಮ್ಮ ಸೋಲಿಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಲ್ಲವೇ? ಯಾರು, ಯಾವ ರೀತಿ ನಡೆದುಕೊಳ್ಳುತ್ತಾರೆ ಎಂಬುದನ್ನು ರಾಜ್ಯಾಧ್ಯಕ್ಷರು ಅವಲೋಕಿಸಬೇಕು. ತುಮಕೂರಿನಲ್ಲಿ ಸೋಮಣ್ಣ ಸೋಲುತ್ತಾರೆಂದು ಎಲ್ಲರೂ ಅಪಪ್ರಚಾರ ಮಾಡಿದರು. ನಾನು ಯಾವುದಕ್ಕೂ ಧೃತಿಗೆಡದೆ ಎರಡೂ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಚಾರ ನಡೆಸಿದೆ. ಜೆಡಿಎಸ್ ಸಹಕಾರ, ಬಿಜೆಪಿ ಹೊಂದಾಣಿಕೆಯಿಂದಾಗಿ ಜಯಗಳಿಸಿದ್ದೇನೆ ಎಂದರು. 

ಸಿದ್ದರಾಮಯ್ಯನವರೇ ತೈಲದರ ಏರಿಕೆ ಆದೇಶ ಹಿಂಪಡೆಯಿರಿ: ಶಾಸಕ ಆರಗ ಜ್ಞಾನೇಂದ್ರ

ನಂತರ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಇನ್ನೂ 2-3 ಕ್ಷೇತ್ರಗಳನ್ನು ಗೆಲ್ಲುವ ಅವಕಾಶ ಇತ್ತು. ಆದರೆ, ಟಿಕೆಟ್‌ ನೀಡುವಲ್ಲಿ ವ್ಯತ್ಯಾಸವಾಯಿತು ಎಂದು ವಿಜಯೇಂದ್ರ ನಾಯಕತ್ವ ಕುರಿತ ಹೇಳಿಕೆಗೆ ಟಾಂಗ್‌ ಕೊಟ್ಟರು. ಕಾಂಗ್ರೆಸ್ ಎಂದರೆ ಸುಳ್ಳು ಗ್ಯಾರಂಟಿ, ಭ್ರಷ್ಟಾಚಾರ, ದುರಾಡಳಿತ ಮತ್ತು ಅಭಿವೃದ್ಧಿ ಶೂನ್ಯತೆ ಎಂಬುದನ್ನು ಜನರಿಗೆ ಮನವರಿಕೆ ಮಾಡಬೇಕಿದೆ. ಶೀಘ್ರದಲ್ಲಿಯೇ ಬಿಬಿಎಂಪಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ನಡೆಯಲಿದೆ. ಜೆಡಿಎಸ್ ಪಕ್ಷದ ಜೊತೆಗೂಡಿ ಗೆಲುವು ಸಾಧಿಸಿ ನಮ್ಮ ಶಕ್ತಿಯನ್ನು ತೋರಿಸಬೇಕು. ಕಾರ್ಯಕರ್ತರ ಪರಿಶ್ರಮದಿಂದಾಗಿ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಂಸದರು ಆಯ್ಕೆಯಾಗಿದ್ದಾರೆ ಎಂದು ಹೇಳಿದರು.

Latest Videos
Follow Us:
Download App:
  • android
  • ios