ಪಕ್ಷ ವಿರೋಧಿ ಚಟುವಟಿಕೆ, ಪಕ್ಷಕ್ಕೆ ಮುಜುಗರ ಆಗುವ ರೀತಿಯಲ್ಲಿ ನಡೆದುಕೊಂಡ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರ ಉಚ್ಚಾಟನೆ ಕ್ರಮ ಸ್ವಾಗತಾರ್ಹ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಬೆಂಗಳೂರು (ಮೇ.28): ಪಕ್ಷ ವಿರೋಧಿ ಚಟುವಟಿಕೆ, ಪಕ್ಷಕ್ಕೆ ಮುಜುಗರ ಆಗುವ ರೀತಿಯಲ್ಲಿ ನಡೆದುಕೊಂಡ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರ ಉಚ್ಚಾಟನೆ ಕ್ರಮ ಸ್ವಾಗತಾರ್ಹ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಈ ಇಬ್ಬರು ಶಾಸಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ರಾಜ್ಯ ಘಟಕ ಕೋರಿತ್ತು. ಆ ಪ್ರಕಾರ ಬಿಜೆಪಿ ಕೇಂದ್ರ ಶಿಸ್ತು ಸಮಿತಿಯು ಇಬ್ಬರನ್ನೂ ಉಚ್ಚಾಟನೆ ಮಾಡಿದೆ ಎಂದು ವಿವರಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸೋಮಶೇಖರ್ ಮತ್ತು ಹೆಬ್ಬಾರ್ ಅವರು ಏನು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆಂದು ಅವರಿಬ್ಬರಿಗೂ ಹಾಗೂ ಕೇಂದ್ರ ನಾಯಕತ್ವಕ್ಕೆ ಗೊತ್ತಿದೆ. ಇದರ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಷ್ಟೊಂದು ನೋವು ಅಥವಾ ಬೇಸರಪಟ್ಟುಕೊಳ್ಳುವ ಅಗತ್ಯವಿಲ್ಲ. ಇದು ಪಕ್ಷದ ತೀರ್ಮಾನ ಎಂದು ತಿಳಿಸಿದರು. ಬಿಜೆಪಿ ಸರ್ಕಾರ ಬಂದ ನಂತರ ಅವರಿಬ್ಬರಿಗೂ ಉತ್ತಮ ಅವಕಾಶ ಲಭಿಸಿತ್ತು. ಆದರೆ ಸರ್ಕಾರ ಇಲ್ಲದಿದ್ದಾಗ, ಪ್ರತಿಪಕ್ಷದಲ್ಲಿದ್ದಾಗ ಅವರಿಗೆ ಸ್ವಲ್ಪ ಸಮಸ್ಯೆ ಆಗಿದೆ ಎಂದು ಕಾಣುತ್ತದೆ. ಅವರಿಬ್ಬರ ಕುರಿತು ರಾಜ್ಯ ಕೋರ್ ಕಮಿಟಿ ಸಭೆಯಲ್ಲೂ ಚರ್ಚೆ ಆಗಿತ್ತು. ಅವರಿಗೆ ನೋಟಿಸ್ ಕೊಡಲಾಗಿತ್ತು. ಅವರು ಕೊಟ್ಟ ಉತ್ತರದ ಕುರಿತು ಮಾಹಿತಿ ಇಲ್ಲ ಎಂದು ವಿಜಯೇಂದ್ರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ಸಿಎಂರಿಂದ ಕುತಂತ್ರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿಗಣತಿ ಹೆಸರಲ್ಲಿ ಜಾತಿ ವಿಷಬೀಜ ಬಿತ್ತುವ ಕುತಂತ್ರ ಮಾಡುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರವೇ ಇದೀಗ ಜಾತಿಗಣತಿ ನಿರ್ಧಾರ ಕೈಗೊಂಡಿದ್ದರಿಂದ ಇವೆಲ್ಲಕ್ಕೂ ಇತಿಶ್ರೀ ಬೀಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನಗಣತಿ ಜತೆಗೆ ಜಾತಿ ಜನಗಣತಿ ಕೈಗೊಳ್ಳುವ ತೀರ್ಮಾನ ಕೈಗೊಂಡಿರುವುದು ಸ್ವಾಗತಾರ್ಹ. ಭಾರತದಲ್ಲಿ 1931ರ ನಂತರ ಜಾತಿ ಜನಗಣತಿ ಆಗಿರಲಿಲ್ಲ. ಈ ದೇಶದ ಪ್ರತಿಯೊಬ್ಬ ಪ್ರಜೆಗೂ ನ್ಯಾಯ ಸಿಗಬೇಕು ಮತ್ತು ಎಲ್ಲ ಸಮುದಾಯಗಳಿಗೂ ಸವಲತ್ತು ಸಿಗಬೇಕೆಂಬುದೇ ಮೋದಿ ಆಶಯ ಎಂದು ಹೇಳಿದರು.
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಜಾತಿ- ಜಾತಿಗಳ ನಡುವೆ ವಿಷಬೀಜ ಬಿತ್ತುವ ಮೂಲಕ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಕೇಂದ್ರದ ಈ ನಿರ್ಧಾರ ಕಾಂಗ್ರೆಸ್‌ಗೆ ಅಚ್ಚರಿಯಾಗಿದೆ. ಸ್ವಾತಂತ್ರ್ಯಾ ನಂತರ ಆಡಳಿತ ನಡೆಸಿದ್ದ ಕಾಂಗ್ರೆಸ್ ಜಾತಿ ಜನಗಣತಿ ಕಾರ್ಯ ಕೈಗೊಂಡಿರಲಿಲ್ಲ. ರಾಜ್ಯ ಸರ್ಕಾರಕ್ಕೆ ಜಾತಿ ಜನಗಣತಿ ಮಾಡುವ ಅವಕಾಶ ಇಲ್ಲ. ಕೇಂದ್ರ ಸರ್ಕಾರಕ್ಕೆ ಮಾತ್ರ ಈ ಅಧಿಕಾರ ಇದೆ. ಇದೆಲ್ಲ ಗೊತ್ತಿದ್ದರೂ ಜಾತಿ ವಿಷಬೀಜ ಬಿತ್ತುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ವಿಜಯೇಂದ್ರ ಟೀಕಿಸಿದರು.
ರಾಜ್ಯದಲ್ಲಿ ಜಾತಿ ಜನಗಣತಿ ಮಾಡಿ 10 ವರ್ಷ ಕಳೆದಿದ್ದು, ಅವಧಿ ಮೀರಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ವೀರಪ್ಪ ಮೊಯ್ಲಿ ಹೇಳಿದ್ದರು. ಸರ್ಕಾರದ ಬಳಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ನೀಡಿದ್ದ ವರದಿಯೇ ಇಲ್ಲ. ವರದಿ ಇಲ್ಲದಿದ್ದರೂ ಸಮಾಜಗಳ ನಡುವೆ ಗೊಂದಲ ಸೃಷ್ಟಿಸಲು ಹಾಗೂ ಕಂದಕ ಸೃಷ್ಟಿ ಕೆಲಸವನ್ನು ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡುತ್ತಿತ್ತು ಎಂದು ಹರಿಹಾಯ್ದರು.
