ಬೆಂಗಳೂರು, (ಜೂನ್.03): ಸದ್ಯ ರಾಜ್ಯ ಬಿಜೆಪಿಯಲ್ಲಿನ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚಿಸಲು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ,ವೈ ವಿಜಯೇಂದ್ರ ಅವರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.

ಬುಧವಾರ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನ ಭೇಟಿಯಾಗಿದ್ದ ಸಿಎಂ ಪುತ್ರ ವಿಜಯೇಂದ್ರ ಇಂದು (ಗುರುವಾರ) ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನ ಭೇಟಿ ಮಾಡಿದ್ದು, ತೀವ್ರ ಕುತೂಹಲ ಮೂಡಿಸಿದೆ. ಅಲ್ಲದೇ ರಾಜ್ಯ ಬಿಜೆಪಿ ವಲಯದಲ್ಲಿ ಮತ್ತೆ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.

ದಿಢೀರ್ ದಿಲ್ಲಿಗೆ ಹಾರಿದ ವಿಜಯೇಂದ್ರ: ಕಾರಣ ಇದೇ ಆಗಿರಬಹುದಾ..?

ಅರ್ಧಗಂಟೆಗೂ ಹೆಚ್ಚು ಮಾತುಕತೆ ನಡೆಸಿದ್ದು, ಈ ವೇಳೆ ಪ್ರಸಕ್ತ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳನ್ನ ನಡ್ಡಾ ಅವರ ಗಮನಕ್ಕೆ ತಂದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದರ ಜೊತೆಗೆ ಬಿಜೆಪಿಯ ಕೆಲವು ನಾಯಕರು ಸರ್ಕಾರ ವಿರುದ್ಧ ಅಸಮಾಧಾನ ಹೊರ ಹಾಕಿರುವ ಬಗ್ಗೆ ನಡ್ಡಾ ಅವರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.​

ಇನ್ನು ಮೇಲ್ನೋಟಕ್ಕೆ ಈ ಬಗ್ಗೆ ಟ್ವೀಟ್ ಮಾಡಿರುವ ವಿಜಯೇಂದ್ರ, ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ವೇಳೆ 'ಕೊರೋನಾ ಸಂಕಷ್ಟದ ಈ ಸಮಯದಲ್ಲಿ ಕಾರ್ಯಕರ್ತರು ಜನರ ದುಃಖ-ದುಮ್ಮಾನಗಳಿಗೆ ಸ್ಪಂದಿಸಬೇಕಾದ ರೀತಿಯ ಕುರಿತು ಅವರಿಂದ ಪಡೆದ ಸಲಹೆ, ಮಾರ್ಗದರ್ಶನ ನನ್ನಲ್ಲಿ ಇನ್ನಷ್ಚು ಉತ್ಸಾಹ ಹಾಗೂ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದಿದ್ದಾರೆ.

ಒಟ್ಟಿನಲ್ಲಿ ರಾಜ್ಯ ಬಿಜೆಪಿಯಲ್ಲಿನ ವಿದ್ಯಮಾನಗಳನ್ನ ಗಮನಿಸಿದ್ರೆ ಏನೋ ಸಮ್‌ಥಿಂಗ್ ಸಮ್‌ಥಿಂಗ್ ನಡೆಯುತ್ತಿರವುದಂತೂ ಸತ್ಯ.