Asianet Suvarna News Asianet Suvarna News

15 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ: ಅನರ್ಹರು, ಬಿಜೆಪಿಗೆ ಅಗ್ನಿಪರೀಕ್ಷೆ!

ರೋಚಕ ಉಪಕದನ: ಇಂದು ಮತದಾನ| ಅನರ್ಹರು, ಬಿಜೆಪಿಗೆ ಅಗ್ನಿಪರೀಕ್ಷೆ| 15 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ| ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ

By polls crucial for Disqualified MLAs and BJP survival in Karnataka
Author
Bangalore, First Published Dec 5, 2019, 7:20 AM IST

 ಬೆಂಗಳೂರು[ಡಿ.05]: ಸ್ಪೀಕರ್‌ ಹಾಗೂ ಸುಪ್ರೀಂಕೋರ್ಟಿನಿಂದ ಅನರ್ಹಗೊಂಡಿರುವ 17 ಪದಚ್ಯುತ ಶಾಸಕರ ಪೈಕಿ 13 ಮಂದಿಯ ಭವಿಷ್ಯ ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಬಹುಮತ ನಿರ್ಧರಿಸುವ ಅತಿ ನಿರೀಕ್ಷಿತ ರಾಜ್ಯ ವಿಧಾನಸಭಾ ಉಪಚುನಾವಣೆ ಗುರುವಾರ ನಡೆಯಲಿದೆ. ಆಡಳಿತ ಮತ್ತು ಪ್ರತಿಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತದಾನ ಗುರುವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಉಮೇದುವಾರರೂ ಸೇರಿದಂತೆ ಅಖಾಡದಲ್ಲಿರುವ 165 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಮತದಾರರು ಬರೆಯಲಿದ್ದಾರೆ.

ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿರುವುದಾಗಿ ಚುನಾವಣಾ ಆಯೋಗವು ತಿಳಿಸಿದೆ. 15 ಕ್ಷೇತ್ರಗಳಲ್ಲಿ 165 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಈ ಪೈಕಿ 156 ಪುರುಷರು ಮತ್ತು 9 ಮಹಿಳೆಯರು ಸ್ಪರ್ಧಿಸಿದ್ದಾರೆ. ಶಾಂತಿಯುತ ಚುನಾವಣಾ ಪ್ರಕ್ರಿಯೆ ನಡೆಯಲು 42,509 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆಯಾ ವಿಧಾನಸಭಾ ಕ್ಷೇತ್ರಗಳ ಮಸ್ಟರಿಂಗ್‌ ಕೇಂದ್ರಗಳಲ್ಲಿ ಬುಧವಾರ ಸಮಾವೇಶಗೊಂಡಿದ್ದ ಚುನಾವಣಾ ಸಿಬ್ಬಂದಿ ಮತಯಂತ್ರ ಸೇರಿದಂತೆ ಅಗತ್ಯ ಪರಿಕರಗಳೊಂದಿಗೆ ಮತಗಟ್ಟೆಗಳಿಗೆ ತೆರಳಿದ್ದಾರೆ. ಮತದಾನ ನಡೆಯುವ ಕ್ಷೇತ್ರಗಳ ವ್ಯಾಪ್ತಿಯ ಶಾಲೆ-ಕಾಲೇಜು, ಸರ್ಕಾರಿ ನೌಕರರಿಗೆ ಹಾಗೂ ಖಾಸಗಿ ಕಂಪನಿಗಳಿಗೆ ಗುರುವಾರ ವೇತನ ಸಹಿತ ರಜೆ ಘೋಷಣೆ ಮಾಡಲಾಗಿದೆ.

ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರಿದ್ದು, ಚುನಾವಣಾ ಆಯೋಗದ ಗುರುತಿನ ಚೀಟಿ ಇಲ್ಲದಿದ್ದರೆ ಪಾಸ್‌ಪೋರ್ಟ್‌, ಚಾಲನಾ ಪರವಾನಗಿ, ಕೇಂದ್ರ ಅಥವಾ ರಾಜ್ಯ ಸರ್ಕಾರ ವಿತರಣೆ ಮಾಡಿರುವ ಗುರುತಿನ ಚೀಟಿ, ಪಾನ್‌ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌, ಆಧಾರ್‌ ಕಾರ್ಡ್‌ ಸೇರಿದಂತೆ 11 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಕೊಂಡೊಯ್ದು ಮತದಾನ ಮಾಡಬಹುದಾಗಿದೆ.

ಮತದಾರರಿಗೆ ಎಡಗೈ ತೋರು ಬೆರಳಿಗೆ ನೀಲಿ ಬಣ್ಣದ ಶಾಯಿಯನ್ನು ಹಾಕಲಾಗುತ್ತದೆ. 8,370 ಬ್ಯಾಲೆಟ್‌ ಯುನಿಟ್‌, 8,370 ಕಂಟ್ರೋಲ್‌ ಯುನಿಟ್‌ ಮತ್ತು 8,370 ವಿವಿಪ್ಯಾಟ್‌ಗಳನ್ನು ಬಳಕೆ ಮಾಡಲಾಗುವುದು.

15 ಕ್ಷೇತ್ರದಲ್ಲಿ ಒಟ್ಟು 4185 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 884 ಅತಿಸೂಕ್ಷ್ಮ ಮತಗಟ್ಟೆಗಳಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಯ (ಸಿಎಪಿಎಫ್‌) 45 ಕಂಪನಿಯ 2,511 ಸಿಬ್ಬಂದಿ 414 ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸಲಿದೆ. 805 ಮತಗಟ್ಟೆಗಳಲ್ಲಿ ಸೂಕ್ಷ್ಮ ವೀಕ್ಷಕರು ಇರಲಿದ್ದಾರೆ. 206 ಮತಗಟ್ಟೆಗಳಲ್ಲಿ ವೆಬ್‌ ಕ್ಯಾಮೆರಾ ಇರಿಸಲಾಗುತ್ತದೆ ಮತ್ತು 259 ಮತಗಟ್ಟೆಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಗುವುದು. ಉಪಚುನಾವಣೆಯಲ್ಲಿ 42,509 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದು, 19,299 ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸಲಿದೆ. 1,695 ವಿಚಕ್ಷಣ ಸಿಬ್ಬಂದಿ, 900 ಅತಿ ಸೂಕ್ಷ್ಮ ವೀಕ್ಷಕರು, 11,241 ರಾಜ್ಯ ಪೊಲೀಸರು ಸೇರಿದಂತೆ ಇತರೆ ಸಿಬ್ಬಂದಿ ಚುನಾವಣೆಗಾಗಿ ನಿಯೋಜನೆಗೊಂಡಿದ್ದಾರೆ.

ಕಾಂಗ್ರೆಸ್‌, ಬಿಜೆಪಿಯಿಂದ ಎಲ್ಲಾ 15 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ ಜೆಡಿಎಸ್‌ನಿಂದ 12, ಬಿಎಸ್‌ಪಿಯಿಂದ ಇಬ್ಬರು, ಎನ್‌ಸಿಪಿಯಿಂದ ಒಬ್ಬರು, ನೋಂದಾಯಿತ ಪಕ್ಷಗಳಿಂದ 45, ಪಕ್ಷೇತರರು 45 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಶಿವಾಜಿನಗರ ಕ್ಷೇತ್ರದಲ್ಲಿ ಅತಿ ಹೆಚ್ಚು ಸ್ಪರ್ಧಿಗಳಿದ್ದು, 19 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಹೊಸಕೋಟೆಯಲ್ಲಿ 17, ಹುಣಸೂರಿನಲ್ಲಿ 10, ಅಥಣಿ 8, ಕಾಗವಾಡ 9, ಗೋಕಾಕ್‌ 11, ಯಲ್ಲಾಪುರ 7, ಹಿರೇಕೆರೂರು 9, ರಾಣೆಬೆನ್ನೂರು 9, ವಿಜಯನಗರ 13, ಚಿಕ್ಕಬಳ್ಳಾಪುರ 9, ಕೆ.ಆರ್‌.ಪುರ 13, ಯಶವಂತಪುರ 12, ಮಹಾಲಕ್ಷ್ಮೇ ಲೇಔಟ್‌ 12, ಕೆ.ಆರ್‌.ಪೇಟೆ 7 ಸೇರಿದಂತೆ 165 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.

15 ಕ್ಷೇತ್ರದಲ್ಲಿ ಒಟ್ಟು 37.82 ಲಕ್ಷ ಮತದಾರರಿದ್ದು, 19.30 ಲಕ್ಷ ಪುರುಷರು, 18.52 ಮಹಿಳೆಯರು, 414 ಇತರೆ ಮತದಾರರಿದ್ದಾರೆ. ಈ ಪೈಕಿ 4,711 ಸೇವಾ ಮತದಾರರಾಗಿದ್ದಾರೆ. 79,714 ಮತದಾರರು 18-19 ವಯೋಮಾನದವರಾಗಿದ್ದಾರೆ. ಅಂಗವಿಕಲ ಮತದಾರರಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. 24,744 ಅಂಗವಿಕಲ ಮತದಾರರಿದ್ದಾರೆ. ಅಂಗವಿಕಲರಿಗೆ ಮತದಾನ ಮಾಡಲು ಸಹಾಯ ನೀಡುವುದಕ್ಕೆ ಆಯೋಗವು ಅಗತ್ಯ ನೆರವು ನೀಡಲು ಕ್ರಮ ಕೈಗೊಂಡಿದೆ. ಈವರೆಗೆ 24,744 ಜನರು ಸಹಾಯಕ್ಕಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ವೋಟರ್‌ ಐಡಿ ಇಲ್ಲದಿದ್ದರೆ ಪರ್ಯಾಯ ದಾಖಲೆಗಳು

ಪಾಸ್‌ಪೋರ್ಟ್‌, ವಾಹನ ಪರವಾನಗಿ, ಕೇಂದ್ರ ಅಥವಾ ರಾಜ್ಯ ಸರ್ಕಾರ ನೀಡಿರುವ ಗುರುತಿನ ಚೀಟಿ, ಫೋಟೋ ಇರುವ ಬ್ಯಾಂಕ್‌/ಅಂಚೆ ಕಚೇರಿ ಪಾಸ್‌ಬುಕ್‌, ಪಾನ್‌ ಕಾರ್ಡ್‌, ಆರ್‌ಜಿಐ ವಿತರಿಸಿರುವ ಗುರುತಿನ ಚೀಟಿ, ನರೇಗಾ ಕಾರ್ಡ್‌, ಕಾರ್ಮಿಕ ಇಲಾಖೆ ನೀಡಿರುವ ಆರೋಗ್ಯ ವಿಮೆ ಕಾರ್ಡ್‌, ಫೋಟೋ ಇರುವ ಪಿಂಚಣಿ ದಾಖಲೆ, ಸಂಸದ/ಶಾಸಕರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ, ಆಧಾರ ಕಾರ್ಡ್‌

15 ಕ್ಷೇತ್ರ: ಅಥಣಿ, ಗೋಕಾಕ, ಕಾಗವಾಡ, ಯಲ್ಲಾಪುರ, ಹಿರೇಕೆರೂರು, ರಾಣೆಬೆನ್ನೂರು, ವಿಜಯನಗರ, ಕೆ.ಆರ್‌.ಪೇಟೆ, ಹುಣಸೂರು, ಚಿಕ್ಕಬಳ್ಳಾಪುರ, ಕೆ.ಆರ್‌.ಪುರ, ಹೊಸಕೋಟೆ, ಶಿವಾಜಿನಗರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್‌

165 ಮಂದಿ: 15 ವಿಧಾನಸಭಾ ಕ್ಷೇತ್ರಗಳಲ್ಲಿ ಕಣಕ್ಕೆ ಇಳಿದಿರುವ ಅಭ್ಯರ್ಥಿಗಳ ಸಂಖ್ಯೆ

37.82 ಲಕ್ಷ: 19.3 ಲಕ್ಷ ಪುರುಷ, 18.52 ಲಕ್ಷ ಮಹಿಳಾ, 414 ಇತರೆ ಮತದಾರರು

42509 ಜನ: ಉಪಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಒಟ್ಟು ಸಿಬ್ಬಂದಿ

4185 ಮತಗಟ್ಟೆ: 15 ಕ್ಷೇತ್ರಗಳಲ್ಲಿ ಮತದಾನಕ್ಕೆ ಸ್ಥಾಪಿಸಲಾಗಿರುವ ಕೇಂದ್ರಗಳ ಸಂಖ್ಯೆ

Follow Us:
Download App:
  • android
  • ios