ಕರ್ನಾಟಕವು ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಮೂಲಕ ದೇಶದ ಪ್ರಗತಿಪರ ರಾಜ್ಯಗಳಲ್ಲೊಂದು ಎಂಬುದನ್ನು 2025-26 ನೇ ಸಾಲಿನ ರಾಜ್ಯ ಸರ್ಕಾರದ ಬಜೆಟ್ ನಿರೂಪಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. 

ಕಲಬುರಗಿ (ಮಾ.08): ಕರ್ನಾಟಕವು ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಮೂಲಕ ದೇಶದ ಪ್ರಗತಿಪರ ರಾಜ್ಯಗಳಲ್ಲೊಂದು ಎಂಬುದನ್ನು 2025-26 ನೇ ಸಾಲಿನ ರಾಜ್ಯ ಸರ್ಕಾರದ ಬಜೆಟ್ ನಿರೂಪಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಚಿವರು, 2025-26ನೇ ಸಾಲಿನ ಈ ಆಯ-ವ್ಯಯವು ಕರ್ನಾಟಕದ ಭವ್ಯ ಭವಿಷ್ಯದ ದಿಕ್ಸೂಚಿಯಾಗಿ ಹೊರಹೊಮ್ಮಿದೆ. ಜನ ಕೇಂದ್ರೀತ ಅಭಿವೃದ್ಧಿಯ ಮಾದರಿಯನ್ನು ಅಳವಡಿಸಿಕೊಂಡಿರುವ ನಮ್ಮ ಸರ್ಕಾರವು ಸಾಮಾಜಿಕ ಬಲವರ್ಧನೆಯ ಮೂಲಕ ಆರ್ಥಿಕ ಸುಸ್ಥಿರತೆ ಸಾಧಿಸುವಲ್ಲಿ ಮುನ್ನುಗ್ಗುತ್ತಿದೆ ಎಂದಿದ್ದಾರೆ.

ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಪರತೆಯನ್ನು ಪ್ರತಿಪಾದಿಸುವ ಕರ್ನಾಟಕ ಮಾದರಿಗೆ ದೇಶದಲ್ಲಷ್ಟೇ ಅಲ್ಲ, ಜಾಗತಿಕವಾಗಿಯೂ ಮನ್ನಣೆ ದೊರಕಿದೆ. ಸರ್ವರನ್ನೂ ಹಾಗೂ ಸರ್ವ ಕ್ಷೇತ್ರಗಳನ್ನೂ ಒಳಗೊಂಡ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿರುವ ಈ ಬಜೆಟ್ ಕರ್ನಾಟಕದ ಪ್ರಗತಿಯ ಔನತ್ಯಕ್ಕೆ ಕಾರಣವಾಗಲಿದೆ. ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡುವ ಕಾರ್ಯ ಯೋಜನೆಗಳೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. 2025-26ರ ಈ ಪ್ರಗತಿಪರ ಬಜೆಟ್‌ನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಕರ್ನಾಟಕ ಮಾದರಿಯನ್ನು ಮತ್ತಷ್ಟು ಪ್ರಕಾಶಿಸುವಂತೆ ಮಾಡಲು ನಮ್ಮ ಸರ್ಕಾರ ಬದ್ಧತೆ ಹೊಂದಿದೆ ಎಂದು ಸಚಿವ ಖರ್ಗೆ ಹೇಳಿದ್ದಾರೆ.

ಪರಿಶಿಷ್ಟರ ಹಣ ಅನ್ಯಉದ್ದೇಶಕ್ಕೆ ಬಳಕೆ: ಕೇಂದ್ರದ ಬಿಜೆಪಿ ಸರ್ಕಾರ ಸೇರಿ ಬಿಜೆಪಿ ಆಡಳಿತವಿರುವ ಗುಜರಾತ್‌, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ಸರ್ಕಾರಗಳು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿಟ್ಟ ಹಣವನ್ನು ಬೇರೆ ಬೇರೆ ಉದ್ದೇಶಕ್ಕೆ ಬಳಸುವ ಮೂಲಕ ಪರಿಶಿಷ್ಟ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಎಸ್‌ಸಿಪಿ/ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿ ಬುಧವಾರ ಪ್ರತಿಭಟನೆಗೆ ಮುಂದಾಗಿರುವುದಕ್ಕೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಗ್ರಾಮ ಪಂಚಾಯಿತಿಯ ಎಲ್ಲ ಸೈಟ್‌ಗೂ ಇ-ಖಾತಾ: ಸಚಿವ ಪ್ರಿಯಾಂಕ್‌ ಖರ್ಗೆ

ಎಸ್‌ಸಿಪಿ/ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿ ಬುಧವಾರ ಪ್ರತಿಭಟನೆಗೆ ಮುಂದಾಗಿರುವುದಕ್ಕೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಅವರು, ನೆರೆಯ ಮಹಾರಾಷ್ಟ್ರದ ಬಿಜೆಪಿ ಸರ್ಕಾರ ರೈತರ ಸಾಲ ಮನ್ನಾ ಮಾಡಲು ಹಣ ಬಳಸಿದ್ದಾರೆ. ಅದೇ ರೀತಿ 20 ವರ್ಷಗಳಿಂದ ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಮ್ಯೂಸಿಯಂ, ಧಾರ್ಮಿಕ ಸ್ಥಳಗಳು ಹಾಗೂ ಗೋ ರಕ್ಷಣೆಗೆ 95.67 ಕೋಟಿ ರು. ಬಳಕೆ ಮಾಡಲಾಗಿದೆ. ಗುಜರಾತ್‌ನಲ್ಲಿ ಪ್ರಧಾನಿ ಮೋದಿ ಹುಟ್ಟೂರಾದ ವಾಡ ನಗರದ ಕುರಿತು ಸಾಕ್ಷ್ಯಚಿತ್ರ ಮಾಡಲು 5 ಕೋಟಿ ರು. ಬಳಕೆ ಮಾಡಲಾಗಿದೆ ಎಂದು ದಾಖಲೆ ಸಹಿತ ತಿಳಿಸಿದ್ದಾರೆ.