ಹಾವೇರಿ, (ಸೆ.29): ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ.

ಹಾವೇರಿಯಲ್ಲಿ ಇಂದು (ಮಂಗಳವಾರ) ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಬಗ್ಗೆ ಎಲ್ಲೂ ಇದರ ಕುರಿತು ಚರ್ಚೆ, ಮಾತುಕತೆಯಾಗಿಲ್ಲ. ಯಾರೂ ಕೂಡ ಇದರ ಬಗ್ಗೆ ಮಾತನಾಡಿಲ್ಲ. ಮುಂದಿನ ಮೂರು ವರ್ಷ ಬಿಎಸ್ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ‌ ಎಂದು ಹೇಳಿದರು.

ಬಿಎಸ್‌ವೈ ನಾಯಕತ್ವ ಬದಲಾವಣೆ ಸುದ್ದಿಗೆ ಸ್ಪಷ್ಟನೆ ಕೊಟ್ಟ ಬಿಜೆಪಿ: ಎಲ್ಲಾ ಊಹಾಪೋಹಗಳಿಗೆ ತೆರೆ

ಸುರೇಶ್ ಅಂಗಡಿಯವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಹಿಂದೆ ಸಭೆಯಾಗಿತ್ತು ಎಂಬ ಸೋದರ ಮಾವ ಲಿಂಗರಾಜ ಹೇಳಿಕೆಗೆ ಪ್ರತಿಕ್ರಿಯಿಸಿದ ಕಟೀಲ್, ಸುರೇಶ್ ಅಂಗಡಿ ನನಗೆ ಬಹಳ ಆತ್ಮೀಯರು ಅವರು ಎಂದು ಹಾಗೇ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ಪರವಾದ ಕಾಯ್ದೆ ವಿರುದ್ಧ ಕಾಂಗ್ರೆಸ್ ರಾಜಕಾರಣ ಮಾಡಿದೆ. ರೈತರನ್ನು ಎತ್ತಿ ಕಟ್ಟುವ ಕೆಲಸ ಮಾಡಿದೆ. ರೈತನೆ ತನ್ನ ಬೆಳೆಗಳ ಮಾರುಕಟ್ಟೆ ಧಾರಣೆ ರೈತನೇ ಮಾಡಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆ ತಿದ್ದುಪಡಿ ತಂದಿದೆ‌. ಈ ಕಾಯ್ದೆಯಿಂದ ಬಿಜೆಗೆ ಲಾಭವಾಗುತ್ತದೆ ಎಂದು ವಿರೋಧಿಸುತ್ತಿದ್ದಾರೆ ಎಂದರು.

ದಲ್ಲಾಳಿಗಳ ಪರವಾಗಿ ಕಾಂಗ್ರೆಸ್ ಬ್ಯಾಟಿಂಗ್ ಮಾಡುತ್ತಿದೆ. ರೈತರ ದಲ್ಲಾಳಿಗಳ ತುಳಿತಕ್ಕೆ ಒಳಗಾಗಿದ್ದಾರೆ. ಇವತ್ತಿನಿಂದ ಅದು ಪರಿವರ್ತನೆಯಾಗಿದೆ‌. ಮುಂದೆ ರೈತನ ತೀರ್ಮಾನವೇ ಅಂತಿಮ ತೀರ್ಮಾನವಾಗುತ್ತದೆ. ದಲ್ಲಾಳಿಗಳು ರೈತ ಮನೆ ಬಾಗಿಲಿಗೆ ಬರುತ್ತಾರೆ. ರೈತ ವಿರೋಧಿಯಾಗಿ ಕಾಂಗ್ರೆಸ್ ತೀರ್ಮಾನ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.

ನಿನ್ನೆಯ ಬಂದ್ ಗೆ ಬೆಂಬಲ ಸೂಚಿಸಿ ಕಿಚ್ಚು ಹಚ್ಚುವ ಪ್ರಯತ್ನ ಮಾಡಿದ್ದಾರೆ. ಬಂದ್ ವಿಫಲವಾಗಿದೆ, ರಾಜ್ಯದ ಜನರು ಕೇಂದ್ರ,ರಾಜ್ಯ ಸರ್ಕಾರದ ಪರವಾಗಿ ನಿಂತಿದ್ದಾರೆ‌. ಕಾಂಗ್ರೆಸ್ ರೈತ ವಿರೋಧಿಯಾಗಿದೆ ಎಂದು ಕಿಡಿಕಾರಿದರು.