ಬೆಂಗಳೂರು, (ಸೆ.21):  ರೈತರ ಭೂಮಿಯನ್ನು ಯಾರು ಬೇಕಾದರೂ ಖರೀದಿ ಮಾಡಲು ಅವಕಾಶವಿರುವ ಕರ್ನಾಟಕ ಭೂಸುಧಾರಣೆಗಳ ತಿದ್ದುಪಡಿ ವಿಧೇಯಕ ನಾಳೆ (ಮಂಗಳವಾರ) ವಿಧಾನಸಭೆಯಲ್ಲಿ ಮಂಡನೆಯಾಗಲಿದೆ. ಇದರ ಜೊತೆಗೆ ಕೈಗಾರಿಕೆಗಳಿಗೆ ಕೃಷಿ ಭೂಮಿಯನ್ನು ನೀಡುವ ಕರ್ನಾಟಕ ಕೈಗಾರಿಕಾ ಸೌಲಭ್ಯಗಳ ತಿದ್ದುಪಡಿ ವಿಧೇಯಕವೂ ಸಹ ಮಂಡನೆಯಾಗ್ತಿದೆ. 

ರೈತರ ವಿರೋಧದ ಮಧ್ಯೆಯೇ ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದಿರುವ ಈ ವಿವಾದಿತ ಕಾಯ್ದೆ ಕುರಿತು ಸಹಜವಾಗಿಯೇ ಇಂದಿನ ಕಲಾಪದಲ್ಲಿ ದೊಡ್ಡ ಮಟ್ಟದ ಗದ್ದಲ ನಿಶ್ಚಿತವಾಗಿದೆ. 

ಕೃಷಿ ಮಸೂದೆ ಖಂಡಿಸಿ ಸರ್ಕಾರದ ವಿರುದ್ಧ ಅನ್ನದಾತರ ಸಮರ; ಬೀದಿಗಿಳಿದಿದ್ದಾರೆ ರೈತರು

ಕರ್ನಾಟಕ ಭೂಸುಧಾರಣೆಗಳ ತಿದ್ದುಪಡಿ ವಿಧೇಯಕದ ವಿರುದ್ಧ ಆಡಳಿತಾರೂಢ ಪಕ್ಷದಲ್ಲಿಯೇ ಸ್ವಲ್ಪಮಟ್ಟಿನ ವಿರೋಧವಿರುವ ಕಾರಣಕ್ಕೆ ಸದನದಲ್ಲಿ ಗಂಭೀರ ಚರ್ಚೆ ನಿರೀಕ್ಷಿಸಲಾಗಿದೆ. ಗ್ರಾಮೀಣ ರೈತರ ಬದುಕು ನಾಶ ಮಾಡುವ ಕಾಯ್ದೆ ಅಂತ ಬಿಂಬಿಸಲ್ಪಟ್ಟಿರುವ ಈ ಕಾಯಿದೆಯ ವಿರುದ್ಧ ಸದನದ ಹೊರಗೆ ಪ್ರತಿಪಕ್ಷ ಕಾಂಗ್ರೆಸ್ ಮತ್ತು ರೈತ ಸಮೂದಾಯದ ಹೋರಾಟ ಮುಂದುವರಿದಿದೆ. 

ಹೀಗಾಗಿ ಈ ವಿಧೇಯಕ ಅಂಗಿಕಾರಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ವಿರೋಧ ವ್ಯಕ್ತಪಡಿಸೋದ್ರಿಂದ ಸದನ ಗದ್ದಲದ ಗೂಡಾಗೋದು ಗ್ಯಾರಂಟಿಯಾಗಿದೆ. ಇನ್ನೂ ಕೈಗಾರಿಕಾ ಸೌಲಭ್ಯ ತಿದ್ದುಪಡಿ ವಿಧೇಯಕವೂ ಸಹ ವಿರೋಧಕ್ಕೆ ಗುರಿಯಾಗಲಿದೆ. ಹೀಗಾಗಿ ಮಂಗಳವಾರದ ಕಲಾಪ ಗದ್ದಲಕ್ಕೆ ಸೀಮಿತವಾಗಲಿದೆಯಾ ಅನ್ನೋ ಕುತೂಹಲ ಮೂಡಿದೆ. 

ಯಾವುದೇ ರಾಜ್ಯದಲ್ಲಿ ಕೃಷಿ ಉತ್ಪನ್ನ ಮಾರಿ: ಕೃಷಿಗೆ ಸಂಬಂಧಿಸಿದ 2 ಸುಗ್ರೀವಾಜ್ಞೆ!

ಜೊತೆಗೆ ಬೆಂಗಳೂರಿನ ಪ್ರತಿಷ್ಠಿತ ಗುರುರಾಘವೇಂದ್ರ ಸಹಕಾರಿ ಬ್ಯಾಂಕಿನ ಅವ್ಯವಹಾರ ಕುರಿತು ಆಡಳಿತ ಪಕ್ಷದ ಶಾಸಕರೇ ಪ್ರಸ್ತಾಪ ಮಾಡಲು ಮುಂದಾಗಿರೋದ್ರಿಂದ ಸಹಜವಾಗಿಯೇ  ಈ ವಿಚಾರದಲ್ಲಿ ಗದ್ದಲ ನಿಶ್ಚಿತವಾಗಿದೆ.