ಹುಬ್ಬಳ್ಳಿ [ಅ.27]:  ಸ್ಪೀಕರ್‌ ಕುರಿತು ಏಕವಚನ ಬಳಸಿ ತರಾಟೆಗೆ ತೆಗೆದುಕೊಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಪೀಕರ್‌ ಕುರಿತ ಹೇಳಿಕೆಗೆ ಸಿದ್ದರಾಮಯ್ಯ ಕ್ಷಮೆ ಕೋರಬೇಕು, ಇಲ್ಲವಾದಲ್ಲಿ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿ, ದೇಶದ ಇತಿಹಾಸದಲ್ಲೇ ಸ್ಪೀಕರ್‌ ಬಗ್ಗೆ ಹಗುರವಾಗಿ ಯಾರೂ ಮಾತನಾಡಿಲ್ಲ. ಮುಖ್ಯಮಂತ್ರಿ ಹುದ್ದೆ ನಿರ್ವಹಿಸಿರುವ ಸಿದ್ದರಾಮಯ್ಯ ಇದಕ್ಕಾಗಿ ಕೂಡಲೇ ಕ್ಷಮೆ ಕೇಳಬೇಕು. ಅವರು ನಾಲಗೆ ಬಿಗಿ ಹಿಡಿದು ಮಾತನಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ಅವರಿಗೆ ತಕ್ಕಪಾಠ ಕಲಿಸಲಿದೆ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ಪಕ್ಷ ನಾಯಕರಾದ ಮೇಲೆ ವೀರ ಸಾವರ್ಕರ್‌ ಹಾಗೂ ಸ್ಪೀಕರ್‌ ಬಗ್ಗೆ ಮನ ಬಂದಂತೆ ಮಾತನಾಡುತ್ತಿದ್ದಾರೆ. ವೀರ ಸಾವರ್ಕರ್‌ ಬಗ್ಗೆ ಸಿದ್ದರಾಮಯ್ಯಗೆ ‘ಎಬಿಸಿಡಿ’ ಸಹ ಗೊತ್ತಿಲ್ಲ. ದೇಶಕ್ಕಾಗಿ ಸಾವರ್ಕರ್‌ ಮಾಡಿದ ತ್ಯಾಗ, ಬಲಿದಾನದ ಬಗ್ಗೆ ಸಿದ್ದರಾಮಯ್ಯ ತಿಳಿದುಕೊಳ್ಳಬೇಕಿದ್ದರೆ ಅಂಡಮಾನ್‌ ಜೈಲಿಗೆ ಹೋಗಿ, ಸಾವರ್ಕರ್‌ ಅನುಭವಿಸಿದ ಶಿಕ್ಷೆ ಎಷ್ಟುಕ್ರೂರವಾಗಿತ್ತು ಎನ್ನುವುದನ್ನು ತಿಳಿದುಕೊಂಡು ಬರಲಿ ಎಂದರು.

ಬಾಗಲಕೋಟೆಗೆ ಇತ್ತೀಚೆಗೆ ಪ್ರವಾಹ ಪರಿಶೀಲನೆಗೆ ತೆರಳಿದ್ದ ಸಿದ್ದರಾಮಯ್ಯ ಅವರು, ‘ಅವನ್ಯಾರೋ ಒಬ್ಬ ಪುಣ್ಯಾತ್ಮನನ್ನು ಸ್ಪೀಕರ್‌ ಮಾಡಿಬಿಟ್ಟಿದ್ದಾರೆ, ಅವನಿಗೆ ಏನೂ ಗೊತ್ತಿಲ್ಲ, ವಿರೋಧ ಪಕ್ಷದ ನಾಯಕ ಜಾಸ್ತಿ ಮಾತನಾಡುವಂತಿಲ್ಲ, ಕೂತುಕೊಳ್ಳಿ ಅಂತಾನೆ’ ಎಂದು ಹೇಳಿದ್ದರು. ಇದು ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿತ್ತು.