ಅರುಣ್‌ ಸಿಂಗ್‌ರ ಮೂರು ದಿನಗಳ ಭೇಟಿಯ ಒಟ್ಟು ಫಲಶ್ರುತಿ ಎಂದರೆ ಅಸಮಾಧಾನ ಬಿಕ್ಕಟ್ಟಿನ ಸ್ವರೂಪಕ್ಕೆ ಹೋಗಿದೆ. 

ಬೆಂಗಳೂರು (ಜೂ. 19): ಯಾವುದೇ ರಾಷ್ಟ್ರೀಯ ಪಕ್ಷದಲ್ಲಿ ದಿಲ್ಲಿಯಿಂದ ರಾಜ್ಯ ಉಸ್ತುವಾರಿಗಳು ಬಂದಾಗ ರಾಜ್ಯ ನಾಯಕರಲ್ಲಿ ಇರುವ ಅಲ್ಪಸ್ವಲ್ಪ ಅಸಮಾಧಾನ, ಬೇಸರ ಮಾಯವಾಗಿ ಒಗ್ಗಟ್ಟು ಮೇಲ್ನೋಟಕ್ಕಾದರೂ ಗೋಚರಿಸಬೇಕು. ಆದರೆ ಅರುಣ್‌ ಸಿಂಗ್‌ರ ಮೂರು ದಿನಗಳ ಭೇಟಿಯ ಒಟ್ಟು ಫಲಶ್ರುತಿ ಎಂದರೆ ಅಸಮಾಧಾನ ಬಿಕ್ಕಟ್ಟಿನ ಸ್ವರೂಪಕ್ಕೆ ಹೋಗಿದೆ.

ಅರುಣ ಸಿಂಗ್‌ರ ಭೇಟಿ ಮತ್ತು ನಡೆದಿರುವ ಚರ್ಚೆ ಮತ್ತು ಅದಕ್ಕೆ ಸಿಕ್ಕಿರುವ ಮಾಧ್ಯಮಗಳ ಪ್ರಚಾರದಿಂದ ಪಕ್ಷದ ಸಂಘಟನೆ ಅಥವಾ ಸರ್ಕಾರದ ಇಮೇಜ್‌ಗೆ ಲಾಭ ಆಗುವುದರ ಬದಲು ಇನ್ನಷ್ಟುಹೊಸ ಪ್ರಶ್ನೆಗಳು ಹುಟ್ಟಿಕೊಂಡಿವೆ. ಮೊದಲೇ ದಿಲ್ಲಿ ಅಂಗಳದಲ್ಲಿದ್ದ ಚೆಂಡು ಅರುಣ ಸಿಂಗ್‌ ಮೂಲಕ ಬೆಂಗಳೂರಿಗೆ ಬಂದು, ಟೀವಿ-ಪತ್ರಿಕೆಗಳ ಮೂಲಕ ರಾಜ್ಯದ ಮನೆ ಮನೆಗಳಿಗೆ ತಲುಪಿ, ಮರಳಿ ಮೋದಿ ಮತ್ತು ಅಮಿತ್‌ ಶಾ ಬಳಿ ತೆರಳಿದೆ. ಹೈಕಮಾಂಡ್‌ ಮೂಲಗಳು ‘ಕರ್ನಾಟಕದ ನಾಯಕತ್ವದ ಬಗ್ಗೆ ಅಂತಿಮ ನಿರ್ಣಯ ಆಗಿಲ್ಲ, ಸೂಕ್ತ ಸಮಯದಲ್ಲಿ ನಂಬರ್‌ 1 (ಮೋದಿ) ಮತ್ತು ನಂಬರ್‌ 2 (ಶಾ) ನಿರ್ಣಯ ತೆಗೆದುಕೊಳ್ಳುತ್ತಾರೆ.

ಯೋಗಿಯೊಬ್ಬರನ್ನೇ ನೆಚ್ಚಿಕೊಂಡರೆ ಮತ್ತೆ ಗೆಲ್ಲಲು ಅಸಾಧ್ಯವೆಂದು ಮೋದಿ ಹೊಸ ದಾಳ!

ಅರುಣ ಸಿಂಗ್‌ ದಿಲ್ಲಿಗೆ ಬಂದು ಜೆ.ಪಿ.ನಡ್ಡಾಗೆ ವರದಿ ಸಲ್ಲಿಸುತ್ತಾರೆ. ಮುಂದಿನ ತಿಂಗಳು ಕೇಂದ್ರ ಸಂಪುಟ ಪುನಾರಚನೆ ನಂತರ ಅಂತಿಮ ನಿರ್ಣಯ ತೆಗೆದುಕೊಳ್ಳುತ್ತೇವೆ’ ಎಂದು ಹೇಳುತ್ತಿವೆ. ನಿರ್ಧಾರ ತೆಗೆದುಕೊಳ್ಳುವುದು ಅಂತಿಮವಾಗಿ ಮೋದಿ ಮತ್ತು ಶಾ ಅವರೇ ಎನ್ನುವುದು ಗೊತ್ತಿದ್ದಾಗ ಇಷ್ಟೆಲ್ಲ ಸುದ್ದಿ ಮಾಡಿ ರಾಜ್ಯಕ್ಕೆ ಬಂದು ಪಕ್ಷ ಮತ್ತು ಸರ್ಕಾರವನ್ನು ತುದಿಗಾಲಲ್ಲಿ ನಿಲ್ಲಿಸೋದು ಬೇಕಿತ್ತಾ ಎಂಬ ಪ್ರಶ್ನೆ ಏಳುವುದು ಸಹಜ. ಯಾಕೆ ಈ ಭೇಟಿ, ಅಭಿಪ್ರಾಯ ಸಂಗ್ರಹ ಎಂಬ ಪ್ರಶ್ನೆಗಳಿಗೆ ದಿಲ್ಲಿ ನಾಯಕರ ಅಂತಿಮ ನಿರ್ಧಾರವೇ ಉತ್ತರ ಕೊಡಬಲ್ಲದು.

ಕೋರ್‌ ಕಮಿಟಿಯಲ್ಲಿ ಏನಾಯಿತು?

ಕೋರ್‌ ಕಮಿಟಿ ಸಭೆ ಆರಂಭ ಆಗುತ್ತಿದ್ದಂತೆ ಈಶ್ವರಪ್ಪ, ಪ್ರಹ್ಲಾದ ಜೋಶಿ, ಶೆಟ್ಟರ್‌, ಅಶ್ವತ್ಥನಾರಾಯಣ್‌ ನಿಗಮ ಮಂಡಳಿಗಳಿಗೆ ಬೇಕಾಬಿಟ್ಟಿನೇಮಕ ಆಗಿದ್ದು, ಹಿಂದಿನ ಸಭೆಯಲ್ಲಿ ಚರ್ಚೆ ಮಾಡಿದ ನಂತರ ಏನೂ ಆಗಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಕೂಡಲೇ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಮರು ನೇಮಕ ಮಾಡೋಣ, ಮತ್ತೊಮ್ಮೆ ಚರ್ಚೆ ಮಾಡಿ ನೇಮಿಸುತ್ತೇನೆ ಎಂದು ಹೇಳಿದರಂತೆ. ನಂತರ ಬಸನಗೌಡ ಯತ್ನಾಳ್‌ ಮತ್ತು ಎಚ್‌.ವಿಶ್ವನಾಥ್‌ ಬೇಕಾಬಿಟ್ಟಿಮಾತನಾಡುತ್ತಾರೆ, ಇವತ್ತೇ ಸಸ್ಪೆಂಡ್‌ ಮಾಡಿ ಎಂದು ಯಡಿಯೂರಪ್ಪ ಹೇಳಿದಾಗ ಅರುಣ ಸಿಂಗ್‌ ನೀವು ಮತ್ತು ನಳಿನ್‌ ಕಟೀಲ್‌ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜೊತೆ ಮಾತಾಡಿ ಎಂದು ಹೇಳಿದರು.

ಪದೇ ಪದೇ ದೆಹಲಿಗೆ ಬೆಲ್ಲದ್ ಭೇಟಿ, ಲಿಂಗಾಯತ ನಾಯಕರಿಗೆ ಟೆನ್ಷನ್ ಯಾಕೆ..?

ಕೊನೆಗೆ ಅರುಣ್‌ ಸಿಂಗ್‌ ಬೆಳಗಾವಿ ಮತ್ತು ಮಸ್ಕಿ ಉಪ ಚುನಾವಣೆಗಳ ಬಗ್ಗೆ ಪ್ರಸ್ತಾಪಿಸಿದಾಗ ಯಡಿಯೂರಪ್ಪ ‘ಬಸವಕಲ್ಯಾಣ ಗೆದ್ದಿದ್ದೇವೆ, ಅದರ ಬಗ್ಗೆ ಕೂಡ ಹೇಳಿ’ ಎಂದರಂತೆ. ಆದರೆ ಆಗ ನಡೆದ ಮುಕ್ತ ಚರ್ಚೆಯಲ್ಲಿ ಹೀಗೇ ಹೋದರೆ 2023ರ ಚುನಾವಣೆ ಎದುರಿಸೋದು ಹೇಗೆ? ಜನರ, ಕಾರ್ಯಕರ್ತರ ಅಭಿಪ್ರಾಯ ಏನಿದೆ ಎಂದೆಲ್ಲ ಅರುಣ ಸಿಂಗ್‌ ಅಭಿಪ್ರಾಯ ಕೇಳಿದರಂತೆ.

ಕೊನೆಗೆ ತುಂಬಾ ಅಸಹಾಯಕತೆಯಿಂದ ಮಾತನಾಡಿದ ಅರುಣ ಸಿಂಗ್‌, ಏನೇ ಚರ್ಚೆ ನಡೆದರೂ ಮಾಧ್ಯಮಗಳ ಮೂಲಕ ಮಾತಾಡೋದು ನಿಲ್ಲಬೇಕು. ಇದು ಬೇರೆ ಯಾವುದೇ ರಾಜ್ಯದಲ್ಲೂ ಇಲ್ಲ. ನಾನು ಒಮ್ಮೆ ಬಂದು ಇನ್ನೊಮ್ಮೆ ಬರುವುದರ ಒಳಗೆ ಹೊಸದೊಂದು ಸಮಸ್ಯೆ ಸೃಷ್ಟಿಆಗಿರುತ್ತದೆ ಎಂದು ಬೇಸರ ಹೊರಹಾಕಿದರಂತೆ. ಆದರೆ ಈಡೀ ಸಭೆಯಲ್ಲಿ ಎಲ್ಲಿಯೂ ನಾಯಕತ್ವದ ಬಗ್ಗೆ ಪ್ರಸ್ತಾಪ ಆಗಿಲ್ಲ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ