ಚುನಾವಣೆ ಗೆಲ್ಲಲು ಬೇಕಾದ ಕೆಲವೊಂದು ರಣತಂತ್ರ ಕುರಿತು ಚರ್ಚಿಸಲು ಅವರು ಪ್ರತ್ಯೇಕವಾಗಿ ಸಭೆ ಕರೆದಿದ್ದರು. ಹಾಗಾಗಿ, ಉಳಿದ ನಾಯಕರು ಹೋಗಿದ್ದರು. ನಾನು ಹೋಗಿರಲಿಲ್ಲ ಅಷ್ಟೆ. ಈ ಬಗ್ಗೆ ನನಗೇನೂ ಬೇಸರವಿಲ್ಲ. ಸಂತೋಷದಿಂದ ಇದ್ದೇನೆ ಎಂದು ಸಮಜಾಯಿಷಿ ನೀಡಿದ ಬಿ.ಎಸ್.ಯಡಿಯೂರಪ್ಪ.
ನವದೆಹಲಿ(ಏ.11): ಪಕ್ಷದ ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಸೋಮವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ ಅವರು, ಕೆಲವೊಂದು ಕ್ಷೇತ್ರಗಳ ಬಗ್ಗೆ ಗೊಂದಲವಿತ್ತು. ಹೀಗಾಗಿ, ನನ್ನ ಅಭಿಪ್ರಾಯ ತಿಳಿಸಿದ್ದೇನೆ. ನಡ್ಡಾ ಅವರು ನನ್ನ ಅಭಿಪ್ರಾಯ ಆಲಿಸಿದ್ದಾರೆ. ಮಂಗಳವಾರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಬಾರಿ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಚುನಾವಣೆ ಗೆಲ್ಲಲು ಬೇಕಾದ ಕೆಲವೊಂದು ರಣತಂತ್ರ ಕುರಿತು ಚರ್ಚಿಸಲು ಅವರು ಪ್ರತ್ಯೇಕವಾಗಿ ಸಭೆ ಕರೆದಿದ್ದರು. ಹಾಗಾಗಿ, ಉಳಿದ ನಾಯಕರು ಹೋಗಿದ್ದರು. ನಾನು ಹೋಗಿರಲಿಲ್ಲ ಅಷ್ಟೆ. ಈ ಬಗ್ಗೆ ನನಗೇನೂ ಬೇಸರವಿಲ್ಲ. ಸಂತೋಷದಿಂದ ಇದ್ದೇನೆ ಎಂದು ಸಮಜಾಯಿಷಿ ನೀಡಿದರು.
ಬಿಜೆಪಿ ಟಿಕೆಟ್ ಹಂಚಿಕೆ ಅಸಮಾಧಾನ, ಪಟ್ಟಿ ಪ್ರಕಟಕ್ಕೂ ಮುನ್ನವೇ ಬೆಂಗಳೂರಿಗೆ ಹೊರಟ ಬಿಎಸ್‌ವೈ!
ನಡ್ಡಾ ಜೊತೆ ಯಡಿಯೂರಪ್ಪ ಅವರು ಸುಮಾರು 10 ನಿಮಿಷಗಳ ಕಾಲ ಚುಟುಕಾಗಿ ಚರ್ಚೆ ನಡೆಸಿದರು. ಮಾತುಕತೆ ಬಳಿಕ ನಡ್ಡಾ ಅವರು ಯಡಿಯೂರಪ್ಪ ಅವರ ಕಾರಿನ ತನಕ ಬಂದು ಅವರನ್ನು ಬೀಳ್ಕೊಟ್ಟರು. ಅಲ್ಲಿಂದ ನೇರವಾಗಿ ಯಡಿಯೂರಪ್ಪ ಅವರು ಬೆಂಗಳೂರಿಗೆ ತೆರಳಿದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
