ಯಡಿಯೂರಪ್ಪ ಅವರು ತಮಗೆ ವಯಸ್ಸಾಗಿದೆ. ಒತ್ತಡದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ. ಹೀಗಾಗಿ ಜವಾಬ್ದಾರಿಯಿಂದ ಬಿಡುಗಡೆಗೊಳಿಸಿ ರಾಜೀನಾಮೆ ಪತ್ರದಲ್ಲಿ ಸ್ಪಷ್ಟವಾಗಿ ಬರೆದಿದ್ದರು: ಸಚಿವ ಜೆ.ಸಿ.ಮಾಧುಸ್ವಾಮಿ
ವಿಧಾನ ಪರಿಷತ್(ಫೆ.22): ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಯಾರೂ ತೆಗೆದಿಲ್ಲ. ಅವರೇ ತಮ್ಮ ವಯಸ್ಸಿನ ಕಾರಣ ನೀಡಿ ರಾಜೀನಾಮೆ ನೀಡಿದರು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಮಂಗಳವಾರ ವಿಧಾನಷರಿಷತ್ತಿನಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಮುಖ್ಯಮಂತ್ರಿಗಳ ಪರವಾಗಿ ಉತ್ತರ ನೀಡಿದ ಅವರು, ‘ಯಡಿಯೂರಪ್ಪ ಅವರು ತಮಗೆ ವಯಸ್ಸಾಗಿದೆ. ಒತ್ತಡದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ. ಹೀಗಾಗಿ ಜವಾಬ್ದಾರಿಯಿಂದ ಬಿಡುಗಡೆಗೊಳಿಸಿ ರಾಜೀನಾಮೆ ಪತ್ರದಲ್ಲಿ ಸ್ಪಷ್ಟವಾಗಿ ಬರೆದಿದ್ದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಕರೆಸಿಕೊಂಡು ಮನವೊಲಿಸಲು ಪ್ರಯತ್ನಿಸಿದಾಗಲೂ ಪಕ್ಷ ಸಂಘಟನೆ ಕಾರ್ಯದಲ್ಲಿ ತೊಡಗಿ ಕೊಳ್ಳುವುದಾಗಿ ಹೇಳಿದ್ದರು. ಯಡಿಯೂರಪ್ಪ ಅವರೇ ನಮ್ಮ ನಾಯಕರು. ಅವರ ಮಾರ್ಗದರ್ಶನದಲ್ಲೇ ನಾವು ಮುಂದೆ ಹೋಗುತ್ತೇವೆ’ ಎಂದರು.
ಸಿದ್ದರಾಮಯ್ಯಗೆ ನೋವಾಗಿದ್ದರೆ ವಿಷಾದಿಸುವೆ: ಸಚಿವ ಅಶ್ವತ್ಥ ನಾರಾಯಣ
ಈ ವೇಳೆ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ‘ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನ ಕಣ್ಣೀರು ಏಕೆ ಹಾಕಿದರು?’ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ, ‘ಅಂದು ಅವರು ರಾಜೀನಾಮೆಗೂ ಮುನ್ನ ಭಾವನಾತ್ಮಕವಾಗಿ ಕಣ್ಣೀರಿಟ್ಟರು. ರಾಜೀನಾಮೆಗೆ ಯಾವುದೇ ಒತ್ತಡ ಇರಲಿಲ್ಲ’ ಎಂದರು.
