ಒಪ್ಪಂದದಂತೆ ಬಿಎಸ್ವೈ ರಾಜೀನಾಮೆ : ಶ್ರೀನಿವಾಸಪ್ರಸಾದ್ ಸ್ಫೋಟಕ ಹೇಳಿಕೆ
- ಹೈಕಮಾಂಡ್ ನಡುವಿನ ಒಪ್ಪಂದದಂತೆ ಬಿ.ಎಸ್.ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ
- ಸಂಸದ ಶ್ರೀನಿವಾಸಪ್ರಸಾದ್ ಸ್ಪೋಟಕ ಹೇಳಿಕೆ
- 75 ವರ್ಷ ಮೇಲ್ಪಟ್ಟವರಿಗೆ ಆಯಕಟ್ಟಿನ ಹುದ್ದೆ ನೀಡಬಾರದೆಂಬ ಪಕ್ಷದ ನಿಲುವು
ಚಾಮರಾಜನಗರ (ಜು.23): ಹೈಕಮಾಂಡ್ ನಡುವಿನ ಒಪ್ಪಂದದಂತೆ ಬಿ.ಎಸ್.ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದಾರೆಂದು ಸಂಸದ ಶ್ರೀನಿವಾಸಪ್ರಸಾದ್ ಸ್ಪೋಟಕ ಹೇಳಿಕೆ ಕೊಟ್ಟಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, 75 ವರ್ಷ ಮೇಲ್ಪಟ್ಟವರಿಗೆ ಆಯಕಟ್ಟಿನ ಹುದ್ದೆ ನೀಡಬಾರದೆಂಬ ಪಕ್ಷದ ನಿಲುವು ಯಡಿಯೂರಪ್ಪ ಅವರಿಗಾಗಿ ಬದಲಿಸಿ ಸಿಎಂ ಸ್ಥಾನ ಕೊಟ್ಟಿದ್ದಾರೆ, ಎರಡು ವರ್ಷಗಳ ಬಳಿಕ ರಾಜೀನಾಮೆ ಕೊಡಬೇಕೆಂತಲೂ ಒಪ್ಪಂದ ಆಗಿತ್ತು. ಆ ಹಿನ್ನೆಲೆಯಲ್ಲಿ ಸಿಎಂ ರಾಜೀನಾಮೆ ಕೊಡಲಿದ್ದಾರೆ, ಬಿಜೆಪಿ ಹೈಕಮಾಂಡ್ ಕೂಡ ಯಡಿಯೂರಪ್ಪ ಅವರನ್ನು ಬಹಳ ಗೌರವಯುತವಾಗಿ ಕಂಡಿದ್ದಾರೆ, ರಾಜೀನಾಮೆ ಕೊಡುವ ಬಗ್ಗೆ ಯಡಿಯೂರಪ್ಪ ಅವರೇ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಜು.25ರಂದು ಬಿಎಸ್‌ವೈಗೆ ಹೈ ಕಮಾಂಡ್‌ನಿಂದ ಬರಲಿದೆ ಮಹತ್ವದ ಸಂದೇಶ
ಹೈಕಮಾಂಡ್ ಮತ್ತು ಬಿಎಸ್ವೈ ಅವರ ವಿಚಾರ ಇದಾಗಿದ್ದು ಮೂರನೇಯವರು ಮಾತನಾಡಬಾರದು, ಸ್ವಾಮೀಜಿಗಳು ಯಡಿಯೂರಪ್ಪ ಅವರೇ ಮುಂದುವರೆಯಬೇಕೆಂದು ಹೇಳುತ್ತಿದ್ದಾರೆ ಅವರೇನು ಸೂಪರ್ ಹೈಕಮಾಂಡಾ..? ಎಂದು ಮಠಾಧೀಶರ ವಿರುದ್ಧ ಕಿಡಿಕಾರಿದರು.
ಎಚ್.ವಿಶ್ವನಾಥ್ ಹೇಳಿಕೆಗಳಿಗೆ ಅವರು ಇದೇ ವೇಳೆ ಪ್ರತಿಕ್ರಿಯಿಸಿ, ವಿಶ್ವನಾಥ್ ಹೇಳಿಕೆಗಳಿಗೆ ಚಿಕ್ಕಾಸಿನ ಬೆಲೆಯಿಲ್ಲ,
ನಾವು ಪಕ್ಷ ಕಟ್ಟಿದವರಲ್ಲ ಬೇರೆ ಪಕ್ಷದಲ್ಲಿ ಅನ್ಯಾಯ ಆಯಿತೆಂದು ನಾನು, ವಿಶ್ವನಾಥ್ ಇಲ್ಲಿಗೆ ಬಂದವರು, ಪಕ್ಷ ಬಲಪಡಿಸುವ ಕೆಲಸ ಮಾಡಬೇಕೇ ಹೊರತು ಹೊರೆಯಾಗಬಾರದು, ತೆವಲಿಗೆಲ್ಲಾ ಹೇಳಿಕೆ ಕೊಡಬಾರದು, ನಾನೇನು ಹೈಕಮಾಂಡಾ, ವಿಶ್ವನಾಥ್ ಹೈ ಕಮಾಂಡಾ ಎಂದು ಎಚ್.ವಿ ವಿರುದ್ಧ ವಾಗ್ದಾಳಿ ನಡೆಸಿದರು.