ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟನಂತರ ಮನೆಗೆ ಹೋಗಿ ಮಲಗುತ್ತಾನೆಂದುಕೊಂಡಿದ್ದರು. ಆದರೆ, 150 ಕ್ಷೇತ್ರಗಳಲ್ಲಿ ಗೆದ್ದು, ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವವರೆಗೂ ವಿಶ್ರಮಿಸುವವನು ನಾನಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು. 

ದಾವಣಗೆರೆ (ಏ.21): ಬಿ.ಎಸ್‌.ಯಡಿಯೂರಪ್ಪ (BS Yediyurappa) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟನಂತರ ಮನೆಗೆ ಹೋಗಿ ಮಲಗುತ್ತಾನೆಂದುಕೊಂಡಿದ್ದರು. ಆದರೆ, 150 ಕ್ಷೇತ್ರಗಳಲ್ಲಿ ಗೆದ್ದು, ಬಿಜೆಪಿಯನ್ನು (BJP) ಮತ್ತೆ ಅಧಿಕಾರಕ್ಕೆ ತರುವವರೆಗೂ ವಿಶ್ರಮಿಸುವವನು ನಾನಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ನಗರದ ಬೈಪಾಸ್‌ ರಸ್ತೆಯ ಶಾಮನೂರು ಜಯದೇವಪ್ಪ ಕಲ್ಯಾಣ ಮಂಟಪದಲ್ಲಿ ಬುಧವಾರ ದಾವಣಗೆರೆ ಉತ್ತರ-ದಕ್ಷಿಣ, ಮಾಯಕೊಂಡ ಹಾಗೂ ಹರಿಹರ ಕ್ಷೇತ್ರಗಳ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ರಾಜ್ಯಾದ್ಯಂತ ಸುತ್ತಾಡಿ, 150 ಕ್ಷೇತ್ರ ಗೆಲ್ಲುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದೇನೆ ಎಂದು ಹೇಳಿದರು.

ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಸಿಗುತ್ತಿದ್ದ ಪ್ರೀತಿ, ಅಭಿಮಾನ, ಗೌರವವನ್ನೇ ಇಂದಿಗೂ ನನಗೆ ನೀಡುತ್ತಿದ್ದು, ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಉತ್ಸಾಹ ಹೆಚ್ಚಿಸಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಕಳೆದ 7 ವರ್ಷಗಳಲ್ಲಿ ಒಂದು ದಿನವೂ ರಜೆ ಪಡೆದಿಲ್ಲ, ವಿಶ್ರಾಂತಿಗೆ ಎಂದೂ ಕೂತಿಲ್ಲ. ಹಾಗಿದ್ದಾಗ ನಾವು ಕಾರ್ಯಕರ್ತರು ಚುನಾವಣೆಗೆ ಇನ್ನೂ ಒಂದು ವರ್ಷ ಇದೆ. ಈಗಿನಿಂದಲೇ ಚುನಾವಣೆಗೆ ಸಜ್ಜಾಗಬೇಕಿದೆ. ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿ (Basavaraj Bommai) ಸರ್ಕಾರಗಳ ಸಾಧನೆ, ಕೊಡುಗೆ, ಯೋಜನೆಗಳ ಬಗ್ಗೆ ಜನರಿಗೆ ತಿಳಿಸುವ ಮೂಲಕ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಾರ್ಯೋನ್ಮುಖರಾಗಬೇಕು ಎಂದು ಕರೆ ನೀಡಿದರು.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರಿಡಲು ತೀರ್ಮಾನ, ಕೇಂದ್ರಕ್ಕೆ ಶಿಫಾರಸ್ಸು

ಅಟಲ್‌ ಬಿಹಾರಿ ವಾಜಪೇಯಿ ಉತ್ತಮ ಆಡಳಿತ ನೀಡಿದರೂ, ಜನರಿಗೆ ಅದನ್ನು ತಿಳಿಸಲಾಗದೆ ಸೋತ ಬಗ್ಗೆ ತಮ್ಮ ಬಳಿ ಹೇಳಿಕೊಂಡಿದ್ದರು. ಮೋದಿ, ಬೊಮ್ಮಾಯಿ ಸರ್ಕಾರಗಳ ಸಾಧನೆಯನ್ನು ಪ್ರತಿ ಮನೆಗೂ ತಿಳಿಸುವ ಕೆಲಸ ಆಗಬೇಕು. ದಾವಣಗೆರೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಬೇಕು. ಲೋಕಸಭೆ ಕ್ಷೇತ್ರವನ್ನೂ ಗೆಲ್ಲಬೇಕು. ನಾನು ನಿಲ್ಲುವುದಿಲ್ಲ, ಟಿಕೆಟ್‌ ಸಿಗಲ್ಲ ಅಂತಾ ಯಾರೋ ಒಂದಿಬ್ಬರು ಮಾತನಾಡಿದ್ದಾರೆ. ಇಂತಹ ದೂರು ನಿಲ್ಲಬೇಕು. ಪಕ್ಷ ಯಾರಿಗೆ ನಿಲ್ಲಲು ಸೂಚಿಸುತ್ತೋ ಅಂತಹವರನ್ನು ಗೆಲ್ಲಿಸಲು ನಾವೆಲ್ಲರೂ ಶ್ರಮಿಸೋಣ. ನಮ್ಮ ಪಕ್ಷದ ಗೆಲುವೇ, ನಮ್ಮ ಗೆಲುವು ಎಂಬ ಧ್ಯೇಯ ನಮ್ಮದಾಗಿರಲಿ ಎಂದು ತಿಳಿಸಿದರು.

ದಾವಣಗೆರೆ ಅಂದರೆ ಬರೀ ಬೆಣ್ಣೆದೋಸೆ ಮಾತ್ರ ಅಲ್ಲ, ಬಿಜೆಪಿ ಪಾಲಿಗೂ ಬೆಣ್ಣೆದೋಸೆ ಆಗಬೇಕು. 2 ದಿನ ಇಲ್ಲಿದ್ದು, ಬೆಣ್ಣೆದೋಸೆಯನ್ನೇ ತಿಂದಿದ್ದೇನೆ. ಅದೇ ರುಚಿ ಮೆಲುಕು ಹಾಕುತ್ತಾ ಬೆಂಗಳೂರಿಗೆ ಹೋಗುತ್ತೇನೆ. 2-3 ಸಾವಿರ ಜನರನ್ನು ಸೇರಿಸಿ, ನೀವು ಕರೆದರೆ ನಾನೂ ಸೇರಿ ನಮ್ಮೆಲ್ಲಾ ನಾಯಕರು ಬರುತ್ತೇವೆ. ಯಾವ ಕ್ಷೇತ್ರವೇ ಆಗಿರಲಿ, ನಮ್ಮ ಅಭ್ಯರ್ಥಿ, ಪಕ್ಷದ ಗೆಲುವೇ ನಮ್ಮ ಗುರಿ. ಚುನಾವಣೆಗೆ ಇನ್ನೂ ಒಂದು ವರ್ಷ ಇದೆ ಎಂದು ಮೈಮರೆಯಬೇಡಿ. ಹಣ, ಹೆಂಡ, ತೋಳ್ಬಲ, ಜಾತಿಯ ವಿಷ ಬೀಜಬಿತ್ತಿ, ಗೆಲ್ಲುತ್ತಿದ್ದ ಕಾಂಗ್ರೆಸ್ಸಿನ ವಿರುದ್ಧ ಪ್ರತಿ ಮತದಾರನೂ ಜಾಗೃತನಾಗಿದ್ದಾನೆ. ಎಲ್ಲವನ್ನೂ ಜನರು ಗಮನಿಸುತ್ತಾರೆ ಎಂದು ಹೇಳಿದರು.

ಪ್ರತಿ ವಾರ್ಡ್‌ನಲ್ಲೂ 30-40 ಜನರ ಮಹಿಳೆಯರ ಗುಂಪು, ಯುವಕರ ಗುಂಪು ಮಾಡಿ, ಮನೆ ಮನೆಗೆ ಕೇಂದ್ರ, ರಾಜ್ಯ ಸರ್ಕಾರದ ಯೋಜನೆ, ಸೌಲಭ್ಯಗಳ ಬಗ್ಗೆ ತಿಳಿಸಿ. ಉಭಯ ಸರ್ಕಾರದ ಒಂದೇ ಒಂದು ಸೌಲಭ್ಯ ಪಡೆಯದ ಮನೆ ಇಲ್ಲ. ಎಲ್ಲ ಮನೆಗೂ, ಎಲ್ಲರಿಗೂ ಒಂದಲ್ಲ ಒಂದು ಸೌಲಭ್ಯ ಸಿಕ್ಕಿವೆ. ನಗರ, ಗ್ರಾಮೀಣ ಪ್ರದೇಶದಲ್ಲಿ ನಮ್ಮ ಕಾರ್ಯಕರ್ತರು ಈಗಿನಿಂದಲೇ ಚುನಾವಣೆಗೆ ಸನ್ನದ್ಧರಾಗಬೇಕು. ಈಗಂತೂ ನಿರೀಕ್ಷೆಯನ್ನೂ ಮೀರಿ ವಾತಾವರಣ ನಮ್ಮ ಪಕ್ಷದ ಪರವಾಗಿದೆ. ನಾವು ಮನೆ ಮನೆಗೆ ಹೋಗಿ, ಜನರನ್ನು ಭೇಟಿ ಮಾಡಿ, ಬಿಜೆಪಿಗೆ ಬೆಂಬಲಿಸುವಂತೆ ಮನವಿ ಮಾಡಬೇಕು ಎಂದು ಸಲಹೆ ನೀಡಿದರು.

ದಾವಣಗೆರೆ ಬಿಜೆಪಿ ವಿಭಾಗೀಯ ಸಮಾವೇಶದಲ್ಲಿ ಕೈ ವಿರುದ್ಧ ಯಡಿಯೂರಪ್ಪ ಗುಡುಗು

ಸಂಸದ ಡಾ.ಜಿ.ಎಂ.ಸಿದ್ದೇಶ್ವರ್‌, ಸಚಿವರಾದ ಆರ್‌.ಅಶೋಕ, ಗೋವಿಂದ ಕಾರಜೋಳ, ಬಿ.ಎ.ಬಸವರಾಜ ಭೈರತಿ, ಶಾಸಕರಾದ ಎಸ್‌.ಎ.ರವೀಂದ್ರನಾಥ, ಪ್ರೊ.ಎನ್‌.ಲಿಂಗಣ್ಣ, ಎಸ್‌.ವಿ.ರಾಮಚಂದ್ರ, ರವಿಕುಮಾರ, ನವೀನ್‌, ಬಯಲು ಸೀಮೆ ಅಭಿವೃದ್ಧಿ ನಿಗಮದ ಅಣಬೇರು ಜೀವನಮೂರ್ತಿ, ಮೇಯರ್‌ ಜಯಮ್ಮ ಗೋಪಿನಾಯ್ಕ, ಉಪ ಮೇಯರ್‌ ಗಾಯತ್ರಿಬಾಯಿ, ದೂಡಾ ಅಧ್ಯಕ್ಷ ಕೆ.ಎಂ.ಸುರೇಶ, ಮಾಜಿ ಮೇಯರ್‌ ಸುಧಾ ಜಯರುದ್ರೇಶ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್‌.ಎಂ.ವೀರೇಶ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ.ಎಸ್‌.ಜಗದೀಶ, ವೀಕ್ಷಕ ಶಿವಲಿಂಗಪ್ಪ, ಶಂಕರಪ್ಪ, ಲಿಂಗಮೂರ್ತಿ ಇದ್ದರು.