ಬಾಗಲಕೋಟೆ/ಹೊಸದುರ್ಗ[ಫೆ.11]: ‘ಆಡಿಯೋದಲ್ಲಿರುವ ಧ್ವನಿ ನನ್ನದಾದರೆ ರಾಜೀನಾಮೆ ನೀಡುವುದಾಗಿ ಹೇಳಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ತಾವೇ ತಪ್ಪೊಪ್ಪಿಗೆ ಹೇಳಿಕೆ ನೀಡಿರುವುದರಿಂದ ತಕ್ಷಣ ರಾಜೀನಾಮೆ ನೀಡಲಿ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದರು.

ಬಾಗಲಕೋಟೆ ಜಿಲ್ಲೆಯ ಬಾದಾಮಿ ಹೆಲಿಪ್ಯಾಡ್‌ನಲ್ಲಿ ಭಾನುವಾರ ಮಾತನಾಡಿದ ಅವರು, ‘ಯಡಿಯೂರಪ್ಪ ತಾವು ಹೇಳಿದಂತೆ ನಡೆದುಕೊಳ್ಳಲಿ. ಶುಕ್ರವಾರದ ಆಡಿಯೋ ರಿಲೀಸ್‌ ಆದ ಸಂದರ್ಭದಲ್ಲಿ ಯಡಿಯೂರಪ್ಪ ಹೇಳಿದ್ದೇನು’ ಎಂದು ಪ್ರಶ್ನಿಸಿದರು. ಅಲ್ಲದೆ, ‘ನನ್ನದೇ ಧ್ವನಿಯಾಗಿದ್ದರೆ ರಾಜೀನಾಮೆ ಕೊಡುವೆ ಎಂದಿದ್ದರು. ಈಗ ರಾಜೀನಾಮೆ ಕೊಡಲಿ. ಕೊಟ್ಟಮಾತಿನಂತೆ ನಡೆದುಕೊಳ್ಳಲಿ’ ಎಂದಿದ್ದಾರೆ.

ಬಿಎಸ್‌ವೈಗೆ ಅಧಿಕಾರದ ಹುಚ್ಚು:

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಬ್ರಹ್ಮವಿದ್ಯಾನಗರದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ಯಡಿಯೂರಪ್ಪಗೆ ಅಧಿಕಾರದ ಹುಚ್ಚು ಹಿಡಿದಿದೆ. ಇದರಿಂದ ಸಂವಿಧಾನಬದ್ಧ ಸಮ್ಮಿಶ್ರ ಸರ್ಕಾರವನ್ನು ಕುತಂತ್ರದಿಂದ ಕಿತ್ತೆಸೆಯಲು ಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಇದೇ ವೇಳೆ ಹುಬ್ಬಳ್ಳಿಯಲ್ಲಿ ಆಯೋಜಿಸಲಾದ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದ ಸರ್ಕಾರಿ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿಗಳನ್ನು ಆಹ್ವಾನಿಸದಿರುವುದನ್ನು ಗಮನಿಸಿದರೆ ಅವರಿಗೆ ಪ್ರೋಟೋ​ಕಾಲ್‌ ಬಗ್ಗೆ ಗೊತ್ತಿಲ್ಲ ಎನಿಸುತ್ತದೆ. ರಾಜಕೀಯ ಭಾಷಣ ಮಾಡಲು ಬಂದಿರುವ ಅವರನ್ನು ರಾಜಕೀಯವಾಗಿ ಎದುರಿಸಲು ಸಿದ್ಧ. ಪ್ರಧಾನಿ ನರೇಂದ್ರ ಮೋದಿ ರಾರ‍ಯಲಿ ಪ್ರಚಾರ ನಡೆಸಿದರೂ, ಕರ್ನಾಟಕದಲ್ಲಿ ಏನೂ ಆಗುವುದಿಲ್ಲ. ಬಿಜೆಪಿ ಏನೇ ತಂತ್ರ, ಕುತಂತ್ರ ನಡೆಸಿದರೂ ಅದಕ್ಕೆ ತಕ್ಕ ಉತ್ತರ ನೀಡುವ ಶಕ್ತಿ ಕಾಂಗ್ರೆಸ್‌ ಪಕ್ಷಕ್ಕಿದೆ ಎಂದರು.