ಬೆಂಗಳೂರು [ನ.02]:  ಕಳೆದ ವಾರ ನಗರದಲ್ಲಿ ನಡೆದಿದ್ದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅನರ್ಹ ಶಾಸಕರನ್ನು ಬೆಂಬಲಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿದ್ದಾರೆ ಎನ್ನಲಾದ ಭಾವನಾತ್ಮಕ ಭಾಷಣ ರಾಜ್ಯ ರಾಜಕಾರಣದಲ್ಲೀಗ ತೀವ್ರ ಸಂಚಲನ ಸೃಷ್ಟಿಸಿದೆ.

ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾತನಾಡಿದ್ದ ವಿಡಿಯೋ ಈಗ ವೈರಲ್ ಆಗಿದ್ದು, ಅದರಲ್ಲಿ ಅನರ್ಹ ಶಾಸಕರ ತ್ಯಾಗದಿಂದಲೇ ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ, ಇದನ್ನು ಯಾರೊಬ್ಬರೂ ಅರ್ಥ ಮಾಡಿಕೊಳ್ಳುತ್ತಿಲ್ಲ, ಅವರನ್ನು ನಂಬಿಸಿ ಕೈಬಿಡಬೇಕಾ ಎಂದು ಪಕ್ಷದ ನಾಯಕರಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಸುಮಾರು 7.04 ನಿಮಿಷದ ಈ ವಿಡಿಯೋದಲ್ಲಿ ಯಾರ ಮುಖವೂ ಕಾಣುವುದಿಲ್ಲ. ಆದರೆ ಯಡಿಯೂರಪ್ಪ ಅವರದ್ದೆನ್ನಲಾದ ಧ್ವನಿಯಷ್ಟೇ ಕೇಳಿಸುತ್ತದೆ. 

ಆಗಿದ್ದೇನು?: ಬೆಳಗಾವಿ ಜಿಲ್ಲೆಯ ಅಥಣಿ, ಕಾಗವಾಡ, ಗೋಕಾಕ, ಹಾವೇರಿ ಜಿಲ್ಲೆಯ ಹಿರೇಕೆರೂರು, ರಾಣೆಬೆನ್ನೂರು, ಬಳ್ಳಾರಿ ಜಿಲ್ಲೆಯ ವಿಜಯನಗರ ಹಾಗೂ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಕ್ಷೇತ್ರಗಳ ಉಪ ಚುನಾವಣೆ ಕುರಿತು ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಅ.26ರಂದು ಸಭೆ ನಡೆಸಲಾಗಿತ್ತು. ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳೀನ್‌ಕುಮಾರ ಕಟೀಲ್, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಸುರೇಶ ಅಂಗಡಿ, ಡಿಸಿಎಂ ಗಳಾದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಸಚಿವ ಜಗದೀಶ ಶೆಟ್ಟರ್, ಮಾಜಿ ಸಚಿವ ಸಿ.ಎಂ. ಉದಾಸಿ ಸೇರಿ ಹಲವು ಮುಖಂಡರು ಪಾಲ್ಗೊಂಡಿ ದ್ದರು.

ಮೊದಲಿಗೆ ಎಲ್ಲ ಕ್ಷೇತ್ರಗಳ ಪ್ರತ್ಯೇಕ ಸಭೆ ನಡೆಸಿದ್ದ ಬಿಜೆಪಿ ಮುಖಂಡರು, ಬಳಿಕ ಕೋರ್ ಕಮಿಟಿ ಸಭೆ ನಡೆಸಿದ್ದರು. ಇದೀಗ ವೈರಲ್ ಆಗಿರುವ ಆಡಿಯೋ ಪ್ಲಸ್ ವಿಡಿಯೋ ಬೆಳಗಾವಿ ಜಿಲ್ಲೆಯ ಉಪ ಚುನಾವಣೆಗೆ ಸಂಬಂಧಿಸಿ ನಡೆದ ಅಲ್ಲಿನ ಮುಖಂಡರ ಸಭೆಯದು ಎಂದು ಮೂಲಗಳು ತಿಳಿಸಿವೆ. 

ವಿಡಿಯೋದಲ್ಲೇನಿದೆ?: ಬೆಳಗಾವಿ ಜಿಲ್ಲೆಯಲ್ಲಿ ಮುಂಬರುವ ಉಪ ಚುನಾವಣೆಯಲ್ಲಿ ಅನರ್ಹ ಶಾಸಕರಿಗೆ ಟಿಕೆಟ್ ಸಂಬಂಧ ಸ್ಥಳೀಯ ಮುಖಂಡರು ವ್ಯಕ್ತಪಡಿಸಿದ ಆಕ್ಷೇಪಕ್ಕೆ ಯಡಿಯೂರಪ್ಪ ಅವರ ಧ್ವನಿಯ ಈ ವಿಡಿಯೋದಲ್ಲಿ ತೀವ್ರ ತರಾಟೆಗೆ ತೆಗೆದು ಕೊಳ್ಳಲಾಗಿದೆ. ಸರ್ಕಾರ ಉಳಿಸುವ ದಾಟಿಯಲ್ಲಿ ಮುಖಂಡರು ಯಾರೂ ಚಕಾರ ಎತ್ತಿಲ್ಲ. 17 ಅನರ್ಹ ಶಾಸಕರ ಕುರಿತ ತೀರ್ಮಾನ ನನ್ನೊಬ್ಬನದ್ದೇ ಅಲ್ಲ ಎಂದಿದ್ದಾರೆ.

ಅನರ್ಹ ಶಾಸಕರ ರಾಜೀನಾಮೆಯಿಂದಲೇ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಅವರು ರಾಜೀನಾಮೆ ಕೊಡುವ ಅಗತ್ಯವಾದರೂ ಏನಿತ್ತು? ಅವರು ನಮ್ಮನ್ನು ನಂಬಿ ರಾಜೀನಾಮೆ ನೀಡಿ ಎರಡೂವರೆ ತಿಂಗಳು ಮುಂಬೈನಲ್ಲೇ ಉಳಿದಿದ್ದರು. ಕ್ಷೇತ್ರಕ್ಕೂ ಹೋಗಿರಲಿಲ್ಲ. ಹೆಂಡ್ತಿ-ಮಕ್ಕಳ ಮುಖ ನೋಡಿರಲಿಲ್ಲ. ಉಪಚುನಾವಣೆ ಏನಾಗುತ್ತದೋ ಗೊತ್ತಿಲ್ಲ. ಆದರೆ ಅನರ್ಹ ಶಾಸಕರ ಪರ ನಾವು ಗಟ್ಟಿಯಾಗಿ ನಿಲ್ಲಬೇಕು ತಾನೆ. ಆದರೆ ಈ ಯಾವ ಮಾತುಗಳೂ ನಿಮ್ಮ ಬಾಯಿ ಯಿಂದ ಬರಲಿಲ್ಲ. ನೀವು ಅವರ ಜಾಗದಲ್ಲಿದ್ದರೆ ಏನು ಮಾಡ್ತಿದ್ರಿ, ಅನರ್ಹರನ್ನು ನಂಬಿಸಿ ಕೈಬಿಡುವುದಾ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. 

 

ನನಗೇನು ಮುಖ್ಯಮಂತ್ರಿಗಿರಿ ಬೇಕಾಗಿಲ್ಲ. ಈಗಾಗಲೇ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದವನು ನಾನು. ಈಗ ನಾನು ಮುಖ್ಯಮಂತ್ರಿ ಆಗಿದ್ದೇ ತಪ್ಪೆನಿಸುತ್ತಿದೆ. ವಾಸ್ತವ ಸ್ಥಿತಿ ಅರಿಯದೆ ನೀವೆಲ್ಲ ಮಾತನಾಡಿದ್ದೀರಿ. ರಾಜು ಕಾಗೆ ಬಗ್ಗೆ ಹೇಳುತ್ತೀರಿ. ರಾಜು ಕಾಗೆ ಕಳೆದ ಚುನಾವಣೆಯಲ್ಲಿ 33 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ ಅಲ್ವೇ ಎಂದು ಇದೇ ವೇಳೆ ಯಡಿಯೂರಪ್ಪ ಪ್ರಶ್ನಿಸಿದ್ದಾರೆ.

ಲಕ್ಷ್ಮಣ ಸವದಿ ಬಗ್ಗೆ ಇಲ್ಲಿ ಚರ್ಚೆ ಬೇಡ. ಅವರದ್ದು ವಿಶೇಷ ಪ್ರಕರಣ ಅದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದಿರುವ ಯಡಿಯೂರಪ್ಪ, ನಾನು ಈ ಸಭೆಗೆ ಬರಬಾರದಿತ್ತು. ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನನ್ನ ಮನಸ್ಸಿಗೆ ನೋವು ಮಾಡುತ್ತೀರಿ ಎಂದು ನಾನು ಅಂದುಕೊಂಡಿರಲಿಲ್ಲ ಎಂದೆಲ್ಲ ಬೇಸರ ವ್ಯಕ್ತಪಡಿಸಿದ್ದಾರೆ.