ರಾಜ್ಯ ರಾಜಕಾರಣದಲ್ಲಿನ ಇತ್ತೀಚಿನ ಬೆಳವಣಿಗೆಗಳ ಮಧ್ಯೆ ಬಿ.ಎಸ್.ಯಡಿಯೂರಪ್ಪ ಅವರು ಎಚ್.ಡಿ.ದೇವೇಗೌಡರನ್ನು ಭೇಟಿಯಾಗಿ ಸುದೀರ್ಘ ಚರ್ಚೆ.. ಪ್ರಸ್ತುತ ಕಾಂಗ್ರೆಸ್ ಸರ್ಕಾರವನ್ನು ಕೆಳಗಿಳಿಸಲು ಒಗ್ಗಟ್ಟಿನಿಂದ ಶ್ರಮಿಸುವ ಹಾಗೂ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಮತ್ತಷ್ಟು ಬಲ?

ಬೆಂಗಳೂರು (ಅ.31): ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್‌ ಸೃಷ್ಟಿಸಿರುವ ಕೋಲಾಹಲ, ಇತ್ತೀಚಿನ ವಿಧಾನಪರಿಷತ್ ಚುನಾವಣೆಯ ಫಲಿತಾಂಶದ ಮಧ್ಯೆ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಹೆಚ್‌ಡಿ ದೇವೇಗೌಡರೊಂದಿಗೆ ಬಿಎಸ್‌ವೈ ಚರ್ಚೆ ಕುತೂಹಲ

ಶುಕ್ರವಾರ ಸಂಜೆ ಪದ್ಮನಾಭನಗರದಲ್ಲಿನ ಗೌಡರ ನಿವಾಸಕ್ಕೆ ತೆರಳಿದ ಯಡಿಯೂರಪ್ಪ ಅವರು ಸುಮಾರು ಅರ್ಧ ಗಂಟೆ ಕಾಲ ಸಮಾಲೋಚನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ದೇವೇಗೌಡರನ್ನು ಭೇಟಿ ಮಾಡಿ ರಾಜ್ಯದ ಪ್ರಚಲಿತ ರಾಜಕೀಯ ವಿದ್ಯಮಾನಗಳು, ಕಾಂಗ್ರೆಸ್ ಸರ್ಕಾರದ ಆಡಳಿತ ಹಾಗೂ ಮುಂಬರುವ ರಾಜಕೀಯ ಬೆಳವಣಿಗೆಗಳ ಕುರಿತು ಸುದೀರ್ಘವಾಗಿ ಚರ್ಚಿಸಿದ್ದೇನೆ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರದ ಬಗ್ಗೆ ದೇವೇಗೌಡರಿಗೆ ಅಸಮಾಧಾನ?

ದೇವೇಗೌಡರು ರಾಜ್ಯದ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಕುರಿತು ಅನೇಕ ಮಹತ್ವದ ಸಲಹೆಗಳನ್ನು ನೀಡಿದ್ದಾರೆ. ಕರ್ನಾಟಕದಲ್ಲಿ ಉತ್ತಮ ಆಡಳಿತ ಮತ್ತು ರಾಜಕೀಯ ಸ್ಥಿರತೆ ನೆಲೆಸಬೇಕು ಎಂಬುದು ಎಲ್ಲರ ಅಪೇಕ್ಷೆಯಾಗಿದೆ. ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಅವರು ಸಲಹೆ ನೀಡಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಆಡಳಿತದ ಬಗ್ಗೆ ಅವರಿಗೂ ಅಸಮಾಧಾನವಿದ್ದು, ಆದಷ್ಟು ಶೀಘ್ರವಾಗಿ ಈ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅವರ ಸಲಹೆಗಳು ನನ್ನ ಅಭಿಪ್ರಾಯಕ್ಕೂ ಪೂರಕವಾಗಿವೆ ಎಂದರು.

ಮುಂದಿನ ಚುನಾವಣಗೆ ಬಿಜೆಪಿ-ಜೆಡಿಎಸ್ ಮೈತ್ರಿಗೆ ಮತ್ತಶ್ಟು ಬಲ

ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ವಿಚಾರದಲ್ಲಿ ಅಂತಿಮ ತೀರ್ಮಾನವನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ ಪಕ್ಷದ ವರಿಷ್ಠರು ಕೈಗೊಳ್ಳಲಿದ್ದಾರೆ. ಅವರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದು ಹೇಳಿದರು.

ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್ ನಡುವೆ ಉತ್ತಮ ಸಂಬಂಧವಿದೆ. ದೇವೇಗೌಡರು ಪ್ರಧಾನಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ಮೈತ್ರಿಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮುಂದಾಗುತ್ತಾರೆ ಎಂಬ ವಿಶ್ವಾಸವಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸುವ ಮೂಲಕ ಕರ್ನಾಟಕದಲ್ಲಿ ರಾಜಕೀಯವಾಗಿ ಮುನ್ನಡೆಯಬೇಕಿದೆ. ಜಿ.ಪಂ. ಮತ್ತು ತಾ. ಪಂ. ಚುನಾವಣೆಗಳಲ್ಲಿಯೂ ಮೈತ್ರಿ ಮುಂದುವರಿಸುವ ಕುರಿತು ಆಶಯವಿದೆ. ಈ ಸಂಬಂಧ ಮುಂದಿನ ದಿನಗಳಲ್ಲಿ ಜೆಡಿಎಸ್ ನಾಯಕರು ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಸಮಗ್ರವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Scroll to load tweet…