Asianet Suvarna News Asianet Suvarna News

ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತನ್ನಿ: ಯಡಿಯೂರಪ್ಪಗೆ ವರಿಷ್ಠರ ಟಾಸ್ಕ್‌

ಮೋದಿ, ನಡ್ಡಾ, ಸಂತೋಷ್‌ ಭೇಟಿಯಾದ ಮಾಜಿ ಸಿಎಂ ಬಿಎಸ್‌ವೈ, ಸಂಸದೀಯ ಮಂಡಳಿಗೆ ನೇಮಕ ಬಳಿಕ ಮೊದಲ ಭೇಟಿ

Bring the Party Back to Power in Karnataka Task to BS Yediyurappa grg
Author
Bengaluru, First Published Aug 27, 2022, 5:45 AM IST

ನವದೆಹಲಿ(ಆ.27):  ಬಿಜೆಪಿ ಸಂಸದೀಯ ಮಂಡಳಿಗೆ ನೇಮಕಗೊಂಡ ಬಳಿಕ ಇದೇ ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ದೆಹಲಿಗೆ ತೆರಳಿ ಶುಕ್ರವಾರ ವರಿಷ್ಠರನ್ನು ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಈ ವೇಳೆ ರಾಜ್ಯದಲ್ಲಿ ಪಕ್ಷ ಸಂಘಟನೆ ಮತ್ತು ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವ ಮಹತ್ವದ ಹೊಣೆಗಾರಿಕೆಯನ್ನು ವರಿಷ್ಠರು ಯಡಿಯೂರಪ್ಪ ಅವರಿಗೆ ವಹಿಸಿದ್ದಾರೆ.

ಮೊದಲಿಗೆ ಸಂಜೆ 5 ಗಂಟೆ ವೇಳೆಗೆ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಸುಮಾರು 20 ನಿಮಿಷ ಮಾತುಕತೆ ನಡೆಸಿದ್ದು, ಈ ವೇಳೆ ಉಭಯ ನಾಯಕರು ರಾಜ್ಯದಲ್ಲಿ ಪಕ್ಷ ಸಂಘಟನೆ ಕುರಿತು ಚರ್ಚೆ ನಡೆಸಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತನ್ನಿ, ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಿ, ಎಲ್ಲರೂ ಒಗ್ಗೂಡಿ ಮುಂದಡಿಯಿಡಿ ಎಂದು ಮೋದಿ ಅವರು ಹಿರಿಯ ನಾಯಕನಿಗೆ ಸಲಹೆ ನೀಡಿದ್ದಾರೆಂದು ಹೇಳಲಾಗಿದೆ.

ಬಿಎಸ್‌ವೈ ದಿಲ್ಲಿ ಭೇಟಿ: ಮತ್ತೇನೋ ಹೊಸ ರಾಜಕೀಯ ಬದಲಾವಣೆ ಆಗುವಂತಿದೆ ಎಂದ ಕಾಂಗ್ರೆಸ್

ರಾಜ್ಯಕ್ಕೆ ಹೆಚ್ಚಿನ ಗಮನಕೊಡಿ: ಮುಂಬರುವ ವಿಧಾನಸಭಾ ಚುನಾವಣೆ ಬಿಜೆಪಿ ಪಾಲಿಗೆ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ನೀವು ರಾಜ್ಯ ಪ್ರವಾಸಕ್ಕೆ ಹೆಚ್ಚಿನ ಸಮಯ ಮೀಸಲಿಡಿ, ಮಂಗಳೂರು ಪ್ರವಾಸದ ಬಳಿಕವೂ ಮತ್ತೆ ಮತ್ತೆ ಕರ್ನಾಟಕಕ್ಕೆ ಬಂದು ಹೋಗಿ, ಇದರಿಂದ ಚುನಾವಣೆ ವೇಳೆ ಪಕ್ಷಕ್ಕೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ಯಡಿಯೂರಪ್ಪ ಅವರು ಮೋದಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಮೋದಿ ಅವರಿಂದ ಸಕಾರಾತ್ಮಕ ಸ್ಪಂದನೆಯೂ ಸಿಕ್ಕಿದೆ ಎನ್ನಲಾಗಿದೆ.

ಬಿಎಸ್‌ವೈಗೆ ಸಂಸದೀಯ ಮಂಡಳಿಯಲ್ಲಿ ಸ್ಥಾನ, ಬಿಜೆಪಿಗೆ ಬಲ: ಎಂಟಿಬಿ ನಾಗರಾಜ್‌

ಲಕ್ಷಕ್ಕೂ ಅಧಿಕ ಜನ ಸೇರಿಸುತ್ತೇವೆ: ಆ ಬಳಿಕ ಮಾತನಾಡಿದ ಯಡಿಯೂರಪ್ಪ, ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷ ಸಂಘಟನೆ ವಿಚಾರವಾಗಿ ಮೋದಿ ಸೇರಿ ಪ್ರಮುಖರ ಜತೆ ಚರ್ಚಿಸಿದ್ದೇನೆ. ಪ್ರಧಾನಿ ಮೋದಿ ಅವರು ಸೆ.2ರಂದು ಮಂಗಳೂರಿಗೆ ಭೇಟಿ ನೀಡಲಿದ್ದು, ಅಂದು ಲಕ್ಷಕ್ಕೂ ಅಧಿಕ ಜನ ಸೇರಿಸಿ ಬೃಹತ್‌ ಕಾರ್ಯಕ್ರಮ ಮಾಡಲಿದ್ದೇವೆ ಎಂದರು.

ಈಗಾಗಲೇ ರಾಜ್ಯದಲ್ಲಿ ಪಕ್ಷ ಸಂಘಟನೆಗಾಗಿ ಪ್ರವಾಸ ಮಾಡಲು ನಿರ್ಧರಿಸಲಾಗಿದ್ದು, ನಾನು ಮತ್ತು ಬೊಮ್ಮಾಯಿ ಸೇರಿದಂತೆ ಎಲ್ಲಾ ನಾಯಕರು ರಾಜ್ಯ ಪ್ರವಾಸ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದರು.

ಕೃತಜ್ಞತೆ ಸಲ್ಲಿಸಿದ ಬಿಎಸ್‌ವೈ: ಪ್ರಧಾನಿ ಮೋದಿ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ನಂತರ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್‌ ಜೀ ಅವರನ್ನೂ ಭೇಟಿಯಾಗಿ ಯಡಿಯೂರಪ್ಪ ಕೆಲಕಾಲ ಮಾತುಕತೆ ನಡೆಸಿದರು. ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿ ಸದಸ್ಯರಾಗಿ ತಮ್ಮನ್ನು ಆಯ್ಕೆ ಮಾಡಿರುವುದಕ್ಕೆ ಈ ವೇಳೆ ಯಡಿಯೂರಪ್ಪ ಕೃತಜ್ಞತೆ ಸಲ್ಲಿಸಿದರು.
 

Follow Us:
Download App:
  • android
  • ios