ಪ್ರತಾಪ ಸಿಂಹಗೆ ರಾಜ್ಯ ರಾಜಕಾರಣದಲ್ಲಿ ಉಜ್ವಲ ಭವಿಷ್ಯ: ಬಿ.ವೈ.ವಿಜಯೇಂದ್ರ
ಪ್ರತಾಪ ಸಿಂಹಗೆ ರಾಜ್ಯ ರಾಜಕಾರಣದಲ್ಲಿ ಉಜ್ವಲ ಭವಿಷ್ಯವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಕೊಡಗು ಜಿಲ್ಲಾ ಬಿಜೆಪಿಯಿಂದ ನಡೆದ ಕಾರ್ಯಕರ್ತರ ಸಮಾವದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಡಿಕೇರಿ (ಮಾ.28): ಪ್ರತಾಪ ಸಿಂಹಗೆ ರಾಜ್ಯ ರಾಜಕಾರಣದಲ್ಲಿ ಉಜ್ವಲ ಭವಿಷ್ಯವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಕೊಡಗು ಜಿಲ್ಲಾ ಬಿಜೆಪಿಯಿಂದ ನಡೆದ ಕಾರ್ಯಕರ್ತರ ಸಮಾವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಾಪ ಸಿಂಹ ಅವರಿಗೆ ಟಿಕೆಟ್ ಕೈತಪ್ಪಿದೆ ಎನ್ನುವುದಕ್ಕಿಂತ ಅವರಿಗೆ ರಾಜ್ಯ ರಾಜಕಾರಣದಲ್ಲಿ ಉಜ್ವಲ ಭವಿಷ್ಯವಿದೆ. ಅವರು ರಾಜ್ಯ ಯುವ ಮೋರ್ಚಾದ ಅಧ್ಯಕ್ಷಾಗಿದ್ದಾಗ ಅವರ ಕೆಲಸ ನೋಡಿದ್ದೇನೆ. ರಾಜ್ಯದ ಯುವ ಜನರಿಗೆ ಯಾವ ರೀತಿ ಶಕ್ತಿ ತುಂಬವ ಕೆಲಸ ಮಾಡಿದ್ದಾರೆಂಬುದನ್ನು ಗಮನಿಸಿದ್ದೇನೆ. ನಾನು ರಾಜ್ಯಾಧ್ಯಕ್ಷನಾಗಿರುವ ಅವಧಿಯಲ್ಲೇ ಅವರ ಭವಿಷ್ಯದ ದೃಷ್ಟಿಯನ್ನು ಯೋಚಿಸುತ್ತೇನೆ ಎಂದರು.
ಪ್ರತಾಪ್‌ಗೆ ಉತ್ತಮ ಸ್ಥಾನಮಾನ ಖಚಿತ: ಸಂಸದ ಪ್ರತಾಪ್ ಸಿಂಹ ಅವರು ಪ್ರಧಾನಿ ಮೋದಿಗೆ ತುಂಬಾ ಹತ್ತಿರ ಇದ್ದಾರೆ. ಅವರಿಗೆ ಪಕ್ಷದಲ್ಲಿ, ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಮುಂದೆ ಉತ್ತಮ ಸ್ಥಾನಮಾನ ಸಿಗಲಿದೆ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್ ಹೇಳಿದರು. ಮೈಸೂರು-ಕೊಡಗು ಕ್ಷೇತ್ರದಲ್ಲಿ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿದ ವಿಚಾರವಾಗಿ ಸೋಮವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು. ಸಂಸದರಾಗಿ ಪ್ರತಾಪ್ ಸಿಂಹ 10 ವರ್ಷ ಉತ್ತಮ ಕೆಲಸ ಮಾಡಿದ್ದಾರೆ. ಪ್ರತಾಪ್ ಸಿಂಹ ಅವರನ್ನು ಬದಲಾವಣೆ ಮಾಡಲು ನಿರ್ದಿಷ್ಟವಾದ ಕಾರಣಗಳಿಲ್ಲ. ಸಾಕಷ್ಟು ಕಡೆ ಈ ರೀತಿ ಬದಲಾವಣೆ ಮಾಡಲಾಗಿದೆ. ಬದಲಾವಣೆ ಎಂಬುದು ಪಕ್ಷದ ನಿರಂತರ ಪ್ರಕ್ರಿಯೆ. ಯದುವೀರ್ ಮತ್ತಷ್ಟು ಉತ್ತಮ ಅಭ್ಯರ್ಥಿ ಆಗಿದ್ದಾರೆ ಎಂದರು.
ಪಕ್ಕದಲ್ಲಿರುವವರಿಗೂ ದ್ರೋಹ ಮಾಡಲ್ಲ: ನಾನು ಪಕ್ಷಕ್ಕೂ ದ್ರೋಹ ಮಾಡಲ್ಲ, ಪಕ್ಕದಲ್ಲಿರುವವರಿಗೂ (ಯದುವೀರ) ದ್ರೋಹ ಮಾಡಲ್ಲ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದರು. ಬಿಜೆಪಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿ, 2014ರಲ್ಲಿ ನನಗೆ ಯಾಕೆ ಟಿಕೆಟ್ ಕೊಟ್ಟರು ಅಂಥಾ ಹೈಕಮಾಂಡ್ ಹೇಳಿರಲಿಲ್ಲ. ನಾನು ಯಾಕೆ ಕೊಟ್ಟರು ಅಂಥ ಕೇಳಿರಲಿಲ್ಲ. ಈಗಲೂ ಅಷ್ಟೇ ಯಾಕೆ ತಪ್ಪಿಸಿದ್ದೀರಿ ಅಂತಾ ನಾನು ಕೇಳಿಯೂ ಇಲ್ಲ, ಅವರು ಹೇಳಿಯೂ ಇಲ್ಲ ಎಂದು ಹೇಳಿದರು. ನನಗೆ ಅಚಾನಕ್ ಆಗಿ 2014 ರಲ್ಲಿ ಬಿಜೆಪಿ ಟಿಕೆಟ್ ಸಿಕ್ಕಿತು. 2024ರಲ್ಲಿ ಪಕ್ಷ ನನ್ನ ಬದಲು ಬೇರೆಯವರಿಗೆ ಟಿಕೆಟ್ ಕೊಟ್ಟಿದೆ.
ಎನ್‌ಡಿಆರ್‌ಎಫ್ ಹಣಕ್ಕಾಗಿ ಸುಪ್ರೀಂಗೆ ಹೋಗಿರುವುದು ರಾಜಕೀಯ ತಂತ್ರಗಾರಿಕೆ: ಬೊಮ್ಮಾಯಿ
ಇದರಿಂದ ನನಗೆ ಯಾವುದೇ ಬೇಸರ ಇಲ್ಲ. ಪಕ್ಷ ನನ್ನ ತಾಯಿ ಇದ್ದ ಹಾಗೆ. ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇನೆ. ಯದುವೀರ ಅವರಿಗೆ ಟಿಕೆಟ್ ಸಿಕ್ಕ ಕೂಡಲೇ ಅವರಿಗೆ ಕರೆ ಮಾಡಿ, ನಾನು ನಿಮ್ಮ ಏಜೆಂಟ್ ಆಗಿ ಕೆಲಸ ಮಾಡುತ್ತೇನೆ ಎಂದಿದ್ದೇನೆ. ನಾನು ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ ಎಂದರು. ಯದುವೀರ್ ಅವರು ಅರಮನೆ ಉತ್ತರಾಧಿಕಾರಿಯಾಗಿರುವುದರಿಂದ ಮಹಾರಾಜರಾಗಿ ಕೆಲಸ ಮಾಡುತ್ತಾರಾ ಇಲ್ಲ ಜನಪ್ರತಿನಿಧಿಯಾಗಿ ಕೆಲಸ ಮಾಡುತ್ತಾರಾ ಎಂಬ ಪ್ರಶ್ನೆ ಎತ್ತಿದ್ದೆ ಅಷ್ಟೆ ಎಂದು ಸ್ಪಷ್ಟಪಡಿಸಿದರು. ಬಿಜೆಪಿ ಟಿಕೆಟ್ ಕೈ ತಪ್ಪಿದ ಮೇಲೆ ಕಾಂಗ್ರೆಸ್ ಪಕ್ಷದಿಂದ ಆಹ್ವಾನ ಬಂದಿದೆಯಾ ಎಂಬ ಪ್ರಶ್ನೆಗೆ, ಅವರು ಸ್ಪಷ್ಟವಾಗಿ ಉತ್ತರ ನೀಡಲು ನಿರಾಕರಿಸಿದರು.