ಮುಖ್ಯಮಂತ್ರಿ ಸೇರಿ ರಾಜ್ಯದ ಕಾಂಗ್ರೆಸ್ ಸರ್ಕಾರದ ಎಲ್ಲರೂ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ ಎಂಬುದಕ್ಕೆ ಶಾಸಕ ಬಿ.ಆರ್.ಪಾಟೀಲ್ ಅವರ ಆಡಿಯೋ ಒಂದು ಸಣ್ಣ ನಿದರ್ಶನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀಕ್ಷ್ಣವಾಗಿ ಹೇಳಿದ್ದಾರೆ.
ಬೆಂಗಳೂರು (ಜೂ.21): ಮುಖ್ಯಮಂತ್ರಿ ಸೇರಿ ರಾಜ್ಯದ ಕಾಂಗ್ರೆಸ್ ಸರ್ಕಾರದ ಎಲ್ಲರೂ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ ಎಂಬುದಕ್ಕೆ ಶಾಸಕ ಬಿ.ಆರ್.ಪಾಟೀಲ್ ಅವರ ಆಡಿಯೋ ಒಂದು ಸಣ್ಣ ನಿದರ್ಶನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀಕ್ಷ್ಣವಾಗಿ ಹೇಳಿದ್ದಾರೆ. ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಹೈಕಮಾಂಡ್‌ನ ಎಟಿಎಂ ಆಗಿ ಸರ್ಕಾರವನ್ನು ಪರಿವರ್ತನೆಗೊಳಿಸಿದೆ ಎಂದು ಹರಿಹಾಯ್ದರು.
ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ಶೇ.40ರ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದರು. ಇಂದು ಜನಸಾಮಾನ್ಯರು, ಉದ್ಯಮಿಗಳು ಸೇರಿ ಯಾರನ್ನೇ ಕೇಳಿದರೂ ಶೇ.100 ಭ್ರಷ್ಟಾಚಾರ ನಡೆಯುವ ಬಗ್ಗೆ ಮಾತನಾಡುತ್ತಿದ್ದಾರೆ. ಈ ರೀತಿ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋದ ಬಗ್ಗೆ ಇದೀಗ ಸ್ವತಃ ಆಡಳಿತ ಪಕ್ಷದ ಶಾಸಕರೇ ಬಹಿರಂಗಪಡಿಸಿದ್ದಾರೆ. ಯಾವುದೇ ಇಲಾಖೆಗೆ ಹೋದರೂ ಲಂಚ ಇಲ್ಲದೆ ಕೆಲಸಗಳು ಆಗುತ್ತಿಲ್ಲ. ಈ ವಿಷಯದಲ್ಲಿ ಜನರು ಸರ್ಕಾರದ ಬಗ್ಗೆ ಬೇಸತ್ತಿದ್ದಾರೆ ಎಂದರು.
ಸರ್ಕಾರ ಅನ್ಯಾಯ ಮಾಡಿದೆ: ಬಡ ಕುಟುಂಬಗಳಲ್ಲಿ ಹೆಣ್ಣುಮಕ್ಕಳು ಹುಟ್ಟುವುದೇ ಶಾಪ ಎನ್ನುತ್ತಿದ್ದ ಕಾಲದಲ್ಲಿ ಯಡಿಯೂರಪ್ಪ ಸರ್ಕಾರ ಭಾಗ್ಯಲಕ್ಷ್ಮೀ ಯೋಜನೆ ನೀಡುವುದರ ಮೂಲಕ ವರವನ್ನಾಗಿ ಪರಿಣಮಿಸಿದರು. 36 ಲಕ್ಷಕ್ಕೂ ಹೆಚ್ಚು ಹೆಣ್ಣು ಮಕ್ಕಳು ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಈ ಯೋಜನೆಯನ್ನು ನಿಲ್ಲಿಸಿ ಹೆಣ್ಣುಮಕ್ಕಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.
ನಗರದ ಶ್ರೀ ಜಯದೇವ ನಗರ ಭವನ ಬಿಜೆಪಿ ಹಮ್ಮಿಕೊಂಡಿದ್ದ ಗ್ರಾಮಾಂತರ ಜಿಲ್ಲಾ ಮಟ್ಟದ ಅಹಲ್ಯಾಬಾಯಿ ಹೋಳ್ಕರ್ 300ನೇ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಅಹಲ್ಯಬಾಯಿ ಅವರು ಸಣ್ಣ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡು ಧೃತಿಗೆಡದೆ ಸೈನ್ಯ ಕಟ್ಟಿ, ಹಿಂದು ದೇವಾಲಯಗಳನ್ನು ರಕ್ಷಿಸಿ ಔರಂಗಜೇಬನನ್ನು ಹಿಮ್ಮೆಟ್ಟಿಸಿದ್ದಳು. ಹಿಂದು ಹೆಣ್ಣುಮಕ್ಕಳಿಗೆ ಹಿಂದು ಕಾರ್ಯಕರ್ತರಿಗೆ ರಕ್ಷಣೆ ಇಲ್ಲದಂತಹ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಪ್ರತಿಯೊಬ್ಬ ಹೆಣ್ಣುಮಕ್ಕಳು ಪಣತೊಡಬೇಕು, ಆದ್ದರಿಂದಲೇ ಇದನ್ನು ಮಹಿಳಾ ಸಮಾವೇಶದ ರೀತಿಯಲ್ಲಿ ದೇಶಾದ್ಯಂತ ಆಚರಿಸಲಾಗುತ್ತಿದೆ ಎಂದರು.
ಮಂಗಳೂರಿನಲ್ಲಿ ಪೊಲೀಸರ ಮೂಲಕ ಹಿಂದುಗಳನ್ನು ಬೆದರಿಸಿ ದುಂಡಾವರ್ತನೆ ತೋರುತ್ತಿದೆ, ಕೇಸ್‌ಗಳನ್ನು ದಾಖಲಿಸುತ್ತಿದೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದೆ ಎಂದರು. ತಮಿಳಿನಿಂದ ಕನ್ನಡ ಹುಟ್ಟಿದೆ ಎನ್ನುವ ತಮಿಳು ನಟ ಕಮಲಹಾಸನ್ ಉಚ್ಚನ್ಯಾಯಾಲಯದ ನಿರ್ದೇಶನದಂತೆ ಕೂಡಲೆ ಕ್ಷಮೆ ಯಾಚಿಸಬೇಕು ಎಂದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಅಹಲ್ಯಾಬಾಯಿ ಹೋಳ್ಕರ್ ಅವರ ಭಾವಚಿತ್ರವನ್ನು ಪ್ರವಾಸಿ ಮಂದಿರದಿಂದ ಜಯದೇವ ಭವನದ ವರೆಗೆ ಮೆರವಣಿಗೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ವಿಜಯೇಂದ್ರ ಅವರಿಗೆ ಕ್ರೇನ್ ಮೂಲಕ ಬೃಹತ್ ಹಾರ ಹಾಕಿ ಸ್ವಾಗತಿಸಲಾಯಿತು. ಕಾಂಗ್ರೆಸ್ ಯುವಮುಖಂಡ ಅರುಣ್‌ಕಮಾರ್ ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು.
