DKS vs Ashwath Narayan ತಮ್ಮೆದುರಲ್ಲೇ ನಡೆದ ಅಶ್ವತ್ಥ್ ನಾರಾಯಣ-ಡಿಕೆ ಸುರೇಶ್ ಗಲಾಟೆ ಬಗ್ಗೆ ಸಿಎಂ ಹೇಳಿದ್ದಿಷ್ಟು
* ಡಿಕೆ ಸುರೇಶ್ ಹಾಗೂ ಅಶ್ವತ್ಥ್ ನಾರಾಯಣ ಗಲಾಟೆ ಪ್ರಕರಣ
* ತಮ್ಮೆದುರಲ್ಲೇ ನಡೆದ ಗಲಾಟೆ ಬಗ್ಗೆ ಸಿಎಂ ಕೊಟ್ರು ಸ್ಪಷ್ಟನೆ
* ರಾಮನಗರದ ಬಹಿರಂಗ ವೇದಿಕೆ ಮೇಲೆಯೇ ಕಿತ್ತಾಡಿಕೊಂಡಿರುವ ಜನನಾಯಕರು
ರಾಮನಗರ, (ಜ.03): ತಮ್ಮ ಎದುರಲ್ಲೇ ಸಚಿವ ಡಾ, ಸಿಎನ್ ಅಶ್ವತ್ಥ ನಾರಾಯಣ (Dr CN Ashwath Narayan) ಹಾಗೂ ಡಿಕೆ ಸುರೇಶ್(DK Suresh) ನಡುವೆ ಗಲಾಟೆಗೆ ಸಂಬಂಧಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಪ್ರತಿಕ್ರಿಯೆ ನೀಡಿದ್ದಾರೆ.
ಜಿಲ್ಲೆಯ ಅಭಿವೃದ್ಧಿ, ಕರ್ನಾಟಕದ ಅಭಿವೃದ್ಧಿಗೆ ಸಂಕಲ್ಪ ಮಾಡಲಾಗಿದೆ. ಈ ಘಟನೆಗಳು ಅಭಿವೃದ್ಧಿಯ ಮೇಲೆ ಪರಿಣಾಮ ಬೀರಲ್ಲ. ಚುನಾವಣೆಗೆ 1 ತಿಂಗಳಿರುವಾಗ ರಾಜಕಾರಣ ಮಾಡೋಣ ಎಂದರು.
ರಾಮನಗರ(Ramanagara) ಜಿಲ್ಲೆ ಕರ್ನಾಟಕಕ್ಕೆ ಮಾದರಿಯಾಗುವ ಜಿಲ್ಲೆ. ಅಭಿಮಾನ, ಸಂತಸದಿಂದ ರಾಮನಗರಕ್ಕೆ ಬಂದಿದ್ದೇನೆ. ಜಿಲ್ಲೆಯ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಚುನಾವಣೆಯ 1 ತಿಂಗಳು ಮಾತ್ರ ರಾಜಕಾರಣ ಮಾಡೋಣ. ರಾಮನಗರ ಜಿಲ್ಲೆಗೆ ಬಂದು ಪ್ರಚಾರ ಪಡೆಯುವ ಅಗತ್ಯವಿಲ್ಲ. ರಾಮನಗರ ಜಿಲ್ಲೆಗೆ ಕೊಡುಗೆ ಕೊಡಲು ಇಲ್ಲಿಗೆ ಬಂದಿದ್ದೇನೆ. ಹಲವಾರು ವಿಚಾರಗಳು ನನೆಗುದಿಗೆ ಬಿದ್ದಿರುವುದು ಗೊತ್ತಿದೆ. ಜನರು ರಾಜಕಾರಣ ಮಾಡುವುದನ್ನು ಕಲಿಯಬೇಕು ಎಂದು ಬೊಮ್ಮಾಯಿ ತಿಳಿಸಿದ್ದಾರೆ.
Political Fight: ಮುಖ್ಯಮಂತ್ರಿ ಎದುರೇ ಹೊಡೆದಾಟಕ್ಕೆ ಮುಂದಾದ ಸಂಸದ-ಮಿನಿಸ್ಟರ್
ಜನರು ರಾಜಕಾರಣ ಮಾಡಿದರೆ ನಮ್ಮನ್ನು ಕೈಬಿಡುವುದಿಲ್ಲ. ಕರ್ನಾಟಕ ಏಕೀಕರಣಕ್ಕೆ ಹೋರಾಟ ಮಾಡಿದ ಜಿಲ್ಲೆ ಇದು. ರಾಮನಗರ ಜಿಲ್ಲೆಯ ಜೊತೆ ಹಳೆಯ ಸಂಬಂಧವಿದೆ. ಕೆಂಗಲ್ ಹನುಮಂತಯ್ಯ ಅಖಂಡ ಕರ್ನಾಟಕದ ಸಿಎಂ ಆಗಿದ್ರು. ಕೆಂಗಲ್ ಹನುಮಂತಯ್ಯನವರು ಸುಸಂಸ್ಕೃತ ಆಡಳಿತ ನೀಡಿದ್ರು. ಇಂದಿರಾ ಗಾಂಧಿಯವರ ಜತೆ ಅತ್ಯಂತ ಒಡನಾಟ ಹೊಂದಿದ್ದರು. ಎಚ್.ಡಿ. ದೇವೇಗೌಡರಿಗೆ ಅನ್ಯೋನ್ಯ ಸಂಬಂಧವಿದೆ ಎಂದು ಬೊಮ್ಮಾಯಿ ಹೇಳಿದರು.
ರಾಜೀವ್ ಗಾಂಧಿ ಆರೋಗ್ಯ ವಿವಿ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಇನ್ನೆರಡು ತಿಂಗಳಲ್ಲಿ ಬಗೆಹರಿಸ್ತೇನೆ, ಪರಿಹಾರದ ಭಾಗವಾಗುವೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಸ್ಥಾಪಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಜಲಸಂಪನ್ಮೂಲ ಸಚಿವನಾಗಿ ಬಂದಾಗ ಸ್ವಾಗತ ಕೋರಿದ್ದರು. ರಾಮನಗರ ಜಿಲ್ಲೆ ಚನ್ನಪಟ್ಟಣಕ್ಕೆ ಬಂದಾಗ ಎಲ್ಲರೂ ಸ್ವಾಗತಿಸಿದ್ರು. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಜಲಾಶಯದಲ್ಲಿ ನೀರು ಸೋರಿಕೆಯಾಗುತ್ತಿತ್ತು. ಕೆಆರ್ಎಸ್ ಜಲಾಶಯ ಗೇಟ್ಗೆ ಗೋಣಿ ಚೀಲ ಕಟ್ಟಿದ್ದರು. ಒಂದೂವರೆ ವರ್ಷದಲ್ಲಿ ಎಲ್ಲಾ ಗೇಟ್ಗಳನ್ನು ಸರಿಪಡಿಸಿದ್ದೆವು ಎಂದರು.
ರಾಮನಗರ(Ramanagara) ಜಿಲ್ಲಾ ಕಚೇರಿಗಳ ಸಂಕೀರ್ಣದ ಮುಂಭಾಗ ಸೋಮವಾರ ನಡೆದ ಪ್ರತಿಮೆಗಳ ಅನಾವರಣ ಹಾಗೂ ವಿವಿಧ ಕಾಮಗಾರಿಗಳಿಗೆ ಚಾಲನೆ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎದುರೇ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಸಂಸದ ಡಿ.ಕೆ. ಸುರೇಶ್ ನಡುವೆ ವಾಕ್ಸಮರ ನಡೆದಿದೆ. ಅಲ್ಲದೇ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.
ವೇದಿಕೆಯಲ್ಲಿ ಅಶ್ವತ್ಥನಾರಾಯಣರ ಮಾತಿನಿಂದ ಕೆರಳಿದ ಸುರೇಶ್ ಅವರತ್ತ ನುಗ್ಗಿದರು. ಅತ್ತ ಅಶ್ವತ್ಥನಾರಾಯಣ ಸಹ ಕೆರಳಿದರು. ನಂತರ ಇಬ್ಬರು ಕೈ ಕೈ ಮಿಲಾಯಿಸಲು ಮುಂದಾದರು. ಕಾಂಗ್ರೆಸ್ ನವಿಧಾನ ಪರಿಷತ್ ಸದಸ್ಯ ರವಿ ಮೈಕ್ ಕಿತ್ತೆಸೆದರು. ಇದರಿಂದ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಯಿತು.
ಸಂಸದ ಡಿ.ಕೆ. ಸುರೇಶ್ ವೇದಿಕೆಯಲ್ಲೇ ಧರಣಿ ಕುಳಿತರು. ವೇದಿಕೆಯ ಕೆಳಗೂ ಗದ್ದಲ ಏರ್ಪಟ್ಟಿತು. ಮುಖ್ಯಮಂತ್ರಿ ಬೊಮ್ಮಾಯಿ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದರು. ' ರಾಜಕೀಯ ಇದ್ದದ್ದೇ. ಆದರೆ ನಾವು ಜನಪರವಾಗಿ ಕೆಲಸ ಮಾಡಬೇಕೇ ಹೊರತು ಭಿನ್ನಾಭಿಪ್ರಾಯವನ್ನೇ ದೊಡ್ಡದು ಮಾಡಬಾರದು' ಎಂದು ಇಬ್ಬರಿಗೂ ಕಿವಿಮಾತು ಹೇಳಿದರು. ಆಗಿದ್ದನ್ನು ಮರೆತು ಎಲ್ಲರೂ ಒಂದೇ ಮನಸ್ಸಿನಿಂದ ಮುಂದೆ ಹೋಗೋಣ ಎಂದರು.
ಅಷ್ಟಕ್ಕೂ ಆಗಿದ್ದೇನು?
ಕಾರ್ಯಕ್ರಮಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದ್ದನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಸಚಿವ ಅಶ್ವತ್ಥನಾರಾಯಣ ' ಇವತ್ತು ಏನು ತಪ್ಪಾಗಿದೆ ಎಂದು ನಾಲ್ಕು ಜನರನ್ನು ಸೇರಿಸಿ ಘೋಷಣೆ ಕೂಗುತ್ತೀರಿ. ನಾನೇನು ಯಾರ ಜಮೀನಿಗೂ ಕೈ ಹಾಕಿಲ್ಲ. ಯಾವನೋ ಅವನು ಗಂಡಸು ಅನ್ನೋನು' ಎಂದು ಪ್ರಚೋದಿಸಿದರು.
ಇದರಿಂದ ಕುಪಿತಗೊಂಡ ಸುರೇಶ್ ' ನನ್ನ ಗಂಡಸ್ಥನ ತೋರಿಸಲ' ಎಂದು ಅಶ್ವತ್ಥನಾರಾಯಣರತ್ತ ನುಗ್ಗಿದರು. ಇದರಿಂದ ಗಲಾಟೆ ಜೋರಾಯಿತು. ಬಳಿಕ ಸುರೇಶ್ ವೇದಿಕೆಯಲ್ಲೇ ಧರಣಿ ಕುಳಿತರು.
ಡಿಕೆ ಸುರೇಶ್ ಸ್ಪಷ್ಟನೆ
ಮಂತ್ರಿಗಳು ಮಂತ್ರಿಗಳ ರೀತಿ ನಡೆದುಕೊಳ್ಳಲಿಲ್ಲ. ಸಚಿವರು ಸವಾಲೆಸೆದು ಕರೆದಾದ ಸುಮ್ಮನೆ ಕೂರಲು ಆಗಲಿಲ್ಲ. ಇದು ರಾಜ್ಯ ಸರ್ಕಾರದ ವತಿಯಿಂದ ನಡೆದ ಕಾರ್ಯಕ್ರಮ. ಆದರೆ, ಇದು ಬಿಜೆಪಿ ಕಾರ್ಯಕ್ರಮದಂತೆ ಕಾಣುತ್ತಿತ್ತು. ರಾಮನಗರ ಜಿಲ್ಲಾ ಪಂಚಾಯತ್ ವತಿಯಿಂದ ಅನುದಾನ ಪಡೆದಿದ್ದಾರೆ. ಇಲ್ಲಿ ಹಾಕಿರುವ ಎಲ್ಲಾ ಕಲ್ಲುಗಳನ್ನು ನಾವು ತಂದಿದ್ದೆವು. ಸಚಿವರು ಎಲ್ಲವನ್ನು ನಾವೇ ಮಾಡಿದ್ದೇವೆಂದು ವೀರಾವೇಷ ಪ್ರದರ್ಶಿಸಿದಾಗ ಸುಮ್ಮನಿರಲಾಗಲಿಲ್ಲ. ಸಿಎಂ ಸಮ್ಮುಖದಲ್ಲಿ ವೇದಿಕೆಯಲ್ಲೇ ಅವರಿಗೆ ಉತ್ತರ ಕೊಟ್ಟಿದ್ದೇವೆ ಎಂದು ಘಟನೆ ಬಳಿಕ ರಾಮನಗರದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಹೇಳಿಕೆ ನೀಡಿದ್ದಾರೆ.