ಬಿ.ಎಲ್.ಸಂತೋಷ್ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ದೊಡ್ಡ ಪ್ರೇರಣೆ: ಆರ್.ಅಶೋಕ್
ಸಂಘಟನೆಗಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡಿರುವ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ನಮ್ಮ ಪಕ್ಷದ ಕಾರ್ಯಕರ್ತರಿಗೆ ದೊಡ್ಡ ಪ್ರೇರಣೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಬೆಂಗಳೂರು (ಜ.17): ಸಂಘಟನೆಗಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡಿರುವ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ನಮ್ಮ ಪಕ್ಷದ ಕಾರ್ಯಕರ್ತರಿಗೆ ದೊಡ್ಡ ಪ್ರೇರಣೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ. ದೆಹಲಿಯಲ್ಲಿ ಸಂತೋಷ್ ಅವರನ್ನು ಭೇಟಿ ಮಾಡಿದ ಅಶೋಕ್ ಅವರು ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಮಾಲೋಚನೆ ನಡೆಸಿದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಹಿತ ಮಾಹಿತಿ ಹಂಚಿಕೊಂಡಿರುವ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಹೋರಾಟ ನಡೆಸುವ ಮತ್ತು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ಗೆದ್ದು ಪ್ರಧಾನಿ ನರೇಂದ್ರ ಮೋದಿ ಅವರ ಕೈಬಲಪಡಿಸುವ ನಿಟ್ಟಿನಲ್ಲಿ ಸಂತೋಷ್ ಅವರ ಮಾರ್ಗದರ್ಶನ, ಸಲಹೆ ಪಡೆಯಲಾಯಿತು ಎಂದು ತಿಳಿಸಿದ್ದಾರೆ.
ದೇಗುಲ ಸ್ವಚ್ಛಗೊಳಿಸಿದ ವಿಜಯೇಂದ್ರ, ಅಶೋಕ್: ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ರಾಜ್ಯ ಬಿಜೆಪಿ ನಾಯಕರು ಭಾನುವಾರ ವಿವಿಧೆಡೆ ದೇಗುಲಗಳ ಸ್ವಚ್ಛತಾ ಕಾರ್ಯ ನಡೆಸಿದರು. ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಹುಚ್ಚೂರಾಯಸ್ವಾಮಿ ದೇಗಲದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಬೆಂಗಳೂರಿನ ಜಯನಗರದ ವಿನಾಯಕ ದೇಗುಲದಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಸ್ವಚ್ಛತಾ ಕೆಲಸದಲ್ಲಿ ಭಾಗಿಯಾದರು.
ಕಾಂಗ್ರೆಸ್‌ಗೆ ರಾಮ ಮಂದಿರ ಭೀತಿ: ಕಾಂಗ್ರೆಸ್‌ಗೆ ರಾಮ ಮಂದಿರ ಭೀತಿ ಕಾಡುತ್ತಿದ್ದು, ಅದಕ್ಕಾಗಿ ಹಿಂದುಗಳ ಮೇಲಿನ ಹಳೆ ಕೇಸ್‌ಗಳನ್ನು ತೆರೆಯುವ ಮೂಲಕ ಹಿಂದು- ಮುಸ್ಲಿಂ ನಡುವೆ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ವಿಧಾನಸಭಾ ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ. ಜಿಲ್ಲಾ ಬಿಜೆಪಿ ಚುನಾವಣಾ ಕಚೇರಿಗೆ ಭೇಟಿ ನೀಡಿದ ವೇಳೆ ಅವರು ಸುದ್ದಿಗಾರರಲ್ಲಿ ಮಾತನಾಡಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಈಗ ಏಕಾಏಕಿ ಹಿಂದುಗಳ ವಿರುದ್ಧ ದಮನ ನೀತಿ ಅನುಸರಿಸುತ್ತಿದೆ. ಹಳೆಯ ಕರಸೇವಕರ ಕೇಸನ್ನು ಮತ್ತೆ ತೆರೆಯುವ ಮೂಲಕ ರಾಜ್ಯಾದ್ಯಂತ ಭೀತಿಯ ವಾತಾವರಣ ನಿರ್ಮಿಸುತ್ತಿದೆ. ಕಾಂಗ್ರೆಸ್‌ನ ಇಂಥ ಗೊಡ್ಡು ಬೆದರಿಕೆಗೆ ಬಿಜೆಪಿ ಜಗ್ಗುವುದಿಲ್ಲ. ಹಿಂದೆ ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋದ ಕಾರ್ಯಕರ್ತರು ಈಗಲೂ ಎದೆಗುಂದದೆ ಈ ಕೇಸುಗಳನ್ನು ಎದುರಿಸಲು ಶಕ್ತರಿದ್ದಾರೆ ಎಂದರು.
ತಮ್ಮ ಸರ್ಕಾರ ಇದ್ದಾಗ ಬೊಮ್ಮಾಯಿ, ಅಶೋಕ ಏನ್ಮಾಡ್ತಿದ್ರು?: ಸಚಿವ ಪ್ರಿಯಾಂಕ್ ಖರ್ಗೆ
ಹರಿಪ್ರಸಾದ್‌ಗೆ ಕಾಮನ್‌ಸೆನ್ಸ್ ಇಲ್ಲ: ಕಾಂಗ್ರೆಸ್‌ನ ಹಿರಿಯ ಮುಖಂಡ ಎನಿಸಿದ ಬಿ.ಕೆ.ಹರಿಪ್ರಸಾದ್‌ಗೆ ಕಾಮನ್‌ಸೆನ್ಸ್ ಇಲ್ಲ. ರಾಮ ಮಂದಿರ ಉದ್ಘಾಟನೆ ವೇಳೆ ಗೋದ್ರಾ ಮಾದರಿ ಗಲಭೆ ನಡೆಯುತ್ತದೆ ಎನ್ನುತ್ತಿದ್ದಾರೆ. ಆ ಬಗ್ಗೆ ದಾಖಲೆ ಇದೆ ಎನ್ನುವ ಅವರು ಅದನ್ನು ತನಿಖಾಧಿಕಾರಿಗೆ ಸಲ್ಲಿಸಲಿ, ಅದು ಬಿಟ್ಟು ಬೇಕಾಬಿಟ್ಟಿ ಮಾತನಾಡುವ ಅವರ ವಿರುದ್ಧವೇ ಕೇಸು ದಾಖಲಿಸಿ ಅವರನ್ನು ಸಮಗ್ರ ತನಿಖೆಗೆ ಸರ್ಕಾರ ಒಳಪಡಿಸಬೇಕು ಎಂದು ಅಶೋಕ್ ಆಗ್ರಹಿಸಿದರು.