ಬಿಜೆಪಿ ರಾಜ್ಯಾಧ್ಯಕ್ಷರ ನೇಮಕದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಪಕ್ಷದಲ್ಲಿನ ಸಮಸ್ಯೆಗಳನ್ನು ವರಿಷ್ಠರು ಬಗೆಹರಿಸಲಿದ್ದು, ಎಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ವಿರುದ್ಧ ಹೋರಾಡಲು ಅವರು ಕರೆ ನೀಡಿದ್ದಾರೆ.
ರಾಜ್ಯಾಧ್ಯಕ್ಷರ ನೇಮಕ, ಮರು ನೇಮಕ ಮತ್ತಿತರ ವಿಚಾರದಲ್ಲಿ ನನಗೆ ಗೊಂದಲ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಜತೆಗೆ, ಪಕ್ಷದಲ್ಲಿ ಏನೇ ಸಮಸ್ಯೆಗಳಿದ್ದರೂ ವರಿಷ್ಠರು ಬಗೆಹರಿಸಲಿದ್ದಾರೆ ಎಂದ ಅವರು, ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕು ಎಂದೂ ಮನವಿ ಮಾಡಿದ್ದಾರೆ. ಬಾಕಿ ಉಳಿದ ಜಿಲ್ಲೆಗಳ ಘಟಕಗಳಿಗೆ ಅಧ್ಯಕ್ಷರ ನೇಮಕ ಪ್ರಕ್ರಿಯೆ 2-3 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದೂ ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶಾದ್ಯಂತ ಈವರೆಗೆ ಕೇವಲ ಹತ್ತು ರಾಜ್ಯಗಳಿಗೆ ಮಾತ್ರ ರಾಜ್ಯಾಧ್ಯಕ್ಷರ ನೇಮಕ ಆಗಿದೆ. ಇನ್ನುಳಿದ ರಾಜ್ಯಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಬೇಕಿದೆ ಎಂದರು. ನಮ್ಮ ರಾಜ್ಯದಲ್ಲಿ ಈವರೆಗೆ 23 ಜಿಲ್ಲಾ ಘಟಕಗಳಿಗೆ ಅಧ್ಯಕ್ಷರ ನೇಮಕ ಆಗಿದೆ. ಒಂದು ಜಿಲ್ಲೆಯ ನೇಮಕ ತಡೆ ಹಿಡಿಯ ಲಾಗಿದೆ. ಬಾಕಿ ಉಳಿದ ಜಿಲ್ಲಾ ಘಟಕಗಳ ಅಧ್ಯಕ್ಷರ ನೇಮಕ ಪ್ರಕ್ರಿಯೆ ಎರಡು ಅಥವಾ ಮೂರು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಈ ಕುರಿತ ಪಟ್ಟಿಯನ್ನು ಕೇಂದ್ರ ಸಮಿತಿಗೆ ಕಳುಹಿಸಿ ಕೊಡಲಾಗುವುದು ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕಳೆದೊಂದು ವಾರದಿಂದ ಪಕ್ಷದಲ್ಲಿ ಗದ್ದಲ ಕಡಿಮೆ ಆಗಿದೆ. ನಮ್ಮ ಪಕ್ಷದಲ್ಲಿ ಆಂತರಿಕ ಸಮಸ್ಯೆಗಳು ವರಿಷ್ಠರ ಗಮನಕ್ಕೆ ಬಂದಿದೆ. ಈಗಾಗಲೇ ಕೇಂದ್ರದ ಶಿಸ್ತು ಸಮಿತಿ ಯಾರಿಗೆ ನೋಟಿಸ್ ಕೊಡಬೇಕೋ ಕೊಟ್ಟಿದೆ. ಯಾರು ಆ ನೋಟಿಸ್‌ಗೆ ಉತ್ತರ ನೀಡಬೇಕೋ ಅವರು ಉತ್ತರ ನೀಡಿದ್ದಾರೆ. ಅದರ ಬಗ್ಗೆ ಮುಂದಿನ ತೀರ್ಮಾನವನ್ನು ವರಿಷ್ಠರು ಕೈಗೊಳ್ಳುತ್ತಾರೆ ಎಂದು ಹೇಳಿದರು.
ಒಗ್ಗಟ್ಟಿನ ಹೋರಾಟಕ್ಕೆ ಮನವಿ: ಬಿಜೆಪಿಯ ಎಲ್ಲ ನಾಯಕರು ಹಾಗೂ ಕಾರ್ಯಕರ್ತರ ಮುಂದೆ ದೊಡ್ಡ ಸವಾಲಿದೆ. ಇಂಥ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದೇವೆ. ರಾಜ್ಯದ ಹಿತದೃಷ್ಟಿಯಿಂದ ಮುಂದೆಯೂ ಹೋರಾಟ ಮಾಡಬೇಕಾಗುತ್ತದೆ. ಇದು ನಮ್ಮ ಆದ್ಯ ಕರ್ತವ್ಯ ಎಂದು ತಿಳಿಸಿದರು. ಏನೇ ಸಮಸ್ಯೆಗಳಿದ್ದರೂ ಪಕ್ಷದ ವರಿಷ್ಠರು ಬಗೆಹರಿಸುತ್ತಾರೆ. ಹೀಗಾಗಿ, ನಾವೆಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಾಗಿ, ಒಂದಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕು. ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ಹೆಬ್ಬಾಗಿಲು ಎಂಬುದನ್ನು ಮತ್ತೊಮ್ಮೆ ಪ್ರತಿಷ್ಠಾಪನೆ ಮಾಡಬೇಕು. ಎಲ್ಲರೊಂದಿಗೆ ಸೇರಿ ಹೋರಾಟ ಮಾಡುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಮನವಿ ಮಾಡಿದರು.
'ರೆಬೆಲ್' ಎಂದು ಕರೆಯಬೇಡಿ: ವಿಜಯೇಂದ್ರ
ತಮ್ಮ ವಿರುದ್ದ ಚಟುವಟಿಕೆ ನಡೆಸುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತಿತರ ಮುಖಂಡರನ್ನು (ಬಂಡಾಯಗಾರರು) ಎಂಬುದಾಗಿ ಕರೆಯಬೇಡಿ ಎಂದು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟಾಂಗ್ ನೀಡಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಪಕ್ಷದ ರೆಬೆಲ್ ಗುರುವಾರ ಸಭೆ ನಡೆಸಲು ಮುಂದಾಗಿದ್ದಾರಲ್ಲ ಎಂಬ ಪ್ರಶ್ನೆಗೆ ವಿಜಯೇಂದ್ರ ಪ್ರತಿಕ್ರಿಯಿಸಿದರು. ದಯವಿಟ್ಟು ರೆಬೆಲ್ಸ್ ಎಂದು ಕರೆಯಬೇಡಿ. ಅಲ್ಲಿ ಪಕ್ಷ ಸಂಘಟನೆ ಬಗ್ಗೆಯೂ ಚರ್ಚೆಯಾಗುತ್ತದೆ. ಹೀಗಾಗಿ, ಅವರನ್ನು ರೆಬೆಲ್ಸ್ ಎನ್ನುವ ಮೂಲಕ ಸೀಮಿತಗೊಳಿಸಬೇಡಿ ಎಂದರು.
