ಪಕ್ಷದ ನಾಯಕರ ವ್ಯತ್ಯಾಸ, ನಿರ್ಣಯಗಳಿಂದ ಬಿಜೆಪಿಗೆ ಸೋಲು: ಎಲ್.ಆರ್.ಶಿವರಾಮೇಗೌಡ
ಬಿಜೆಪಿ ಕೈಹಿಡಿಯಲು ರಾಜ್ಯದ ಜನ ಸಿದ್ಧರಿದ್ದರು. ಆದರೆ, ಪಕ್ಷದ ನಾಯಕರು ಮಾಡಿದ ವ್ಯತ್ಯಾಸ ಮತ್ತು ತೆಗೆದುಕೊಂಡ ಕೆಲ ನಿರ್ಣಯಗಳೇ ಪಕ್ಷ ಸೋಲಿಗೆ ಕಾರಣವಾಯಿತು ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಬೇಸರ ಹೊರಹಾಕಿದರು.
ನಾಗಮಂಗಲ (ಜೂ.17): ಬಿಜೆಪಿ ಕೈಹಿಡಿಯಲು ರಾಜ್ಯದ ಜನ ಸಿದ್ಧರಿದ್ದರು. ಆದರೆ, ಪಕ್ಷದ ನಾಯಕರು ಮಾಡಿದ ವ್ಯತ್ಯಾಸ ಮತ್ತು ತೆಗೆದುಕೊಂಡ ಕೆಲ ನಿರ್ಣಯಗಳೇ ಪಕ್ಷ ಸೋಲಿಗೆ ಕಾರಣವಾಯಿತು ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಬೇಸರ ಹೊರಹಾಕಿದರು. ಪಟ್ಟಣದ ಟಿ.ಬಿ.ಬಡಾವಣೆಯ ತಮ್ಮ ಗೃಹ ಕಚೇರಿಯಲ್ಲಿ ಸಂಜೆ ಆಯೋಜಿಸಿದ್ದ ಕೇಂದ್ರದ ಬಿಜೆಪಿ ಸರ್ಕಾರ 9 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಮಹಾ ಸಂಘರ್ಷ ಅಭಿಯಾನ ಕರಪತ್ರ ಹಂಚಿಕೆ ಮತ್ತು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಬಿಜೆಪಿಯಲ್ಲಿ ಹಿರಿಯರಿದ್ದಾರೆ. ಅವರು ಯಾವ ಕಾರಣಕ್ಕೆ ಈ ರೀತಿ ಪ್ರಯೋಗ ಮಾಡಿದರೆಂಬುದು ನನಗೆ ಗೊತ್ತಿಲ್ಲ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ರಾಜಕಾರಣ ಮಾಡುವವರಿಗೆ ಪೂರ್ಣ ಪ್ರಮಾಣದಲ್ಲಿ ನಾವು ಹೇಳಲು ಸಾಧ್ಯವಿಲ್ಲ. ಆದರೆ, ನಮ್ಮ ಅನಿಸಿಕೆ ತಿಳಿಸುವ ಕೆಲಸ ಮಾಡುತ್ತೇನೆ. ಈ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು. ರಾಜ್ಯ ಮತ್ತು ಕೇಂದ್ರದಲ್ಲಿ ಸರ್ಕಾರವಿದ್ದರೂ ಸಹ ಮಂಡ್ಯ ಜಿಲ್ಲೆಯಲ್ಲಿ ಒಂದು ಸ್ಥಾನವನ್ನೂ ಗೆಲ್ಲಲು ಆಗಿಲ್ಲವೆಂದರೆ ಕಾರಣವೇನಿರಬಹುದು. ಜಿಲ್ಲೆಯಲ್ಲಿ ಪಕ್ಷ ಕಟ್ಟಲು ಈ ಮೆಡಿಶನ್ ಸಾಲದು. ನಾಗಮಂಗಲದಲ್ಲಿ ಬಿಜೆಪಿ ಬಾವುಟ ಹಾರಿಸಬೇಕೆಂದರೆ ಇದಕ್ಕೆ ಬೇರೆ ಮಾತ್ರೆಯನ್ನೇ ಕೊಡಬೇಕು ಎಂದರು.
ಮರಳು ಮಾಫಿಯಾಗೆ ಪೇದೆ ಬಲಿ: ಕರ್ತವ್ಯ ನಿರ್ಲಕ್ಷ ಆರೋಪದಡಿ ಮೂವರು ಪೊಲೀಸರ ಅಮಾನತ್ತು
ಚುನಾವಣೆ ಬಂದಾಗ ಟಿಕೆಟ್ ಜೊತೆಗೆ ಕೆಲ ಸಂಪನ್ಮೂಲ ಕೊಟ್ಟು ಚುನಾವಣೆ ನಡೆಸಿ ಎಂದು ಹೇಳಿ ನಮ್ಮನ್ನು ಕಳುಹಿಸುತ್ತಾರೆ. ನಂತರ ಏನೇನು ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬುದು ಗೊತ್ತಾಗುವುದಿಲ್ಲ. ಅದು ಆಗಬಾರದು. ಜಿಲ್ಲೆಯಲ್ಲಿ ಬಿಜೆಪಿ ಕಟ್ಟಲು ಅವಕಾಶವಿದೆ. ಇದಕ್ಕೆ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಪೂರ್ಣ ಪ್ರಮಾಣದ ಸ್ಥೈರ್ಯ ತೆಗೆದುಕೊಳ್ಳಬೇಕು. ಈ ಕುರಿತಂತೆ ಪಕ್ಷದ ಹಿರಿಯ ನಾಯಕರಿಗೆ ನಾನು ಪತ್ರ ಬರೆದಿರುವುದಾಗಿ ತಿಳಿಸಿದರು.
ಕೇಂದ್ರದಲ್ಲಿ ಇನ್ನೂ ಹತ್ತು ವರ್ಷಗಳ ಕಾಲ ಪ್ರಧಾನಿ ಮೋದಿ ಅವರನ್ನು ಯಾವುದೇ ಕಾರಣಕ್ಕೂ ಅಲುಗಾಡಿಸಲು ಸಾಧ್ಯವಿಲ್ಲ. ಆದರೆ, ಅವರ ಹೆಸರನ್ನು ಬಳಸಿಕೊಂಡು ಸರ್ಕಾರ ಮತ್ತಷ್ಟುಒಳ್ಳೆಯ ಕೆಲಸ ಮಾಡಿದ್ದರೆ ತಾಲೂಕು ಮತ್ತು ಜಿಲ್ಲೆಯಲ್ಲಿ ಬಿಜೆಪಿಗೆ ಶಕ್ತಿ ಕೊಡಬಹುದಿತ್ತು ಎಂದರು. ಹೊಸದಾಗಿ ಗ್ಯಾರಂಟಿ ಕೊಟ್ಟು ಅಧಿಕಾರ ನಡೆಸುತ್ತಿರುವ ಜೋಡೆತ್ತಿನ ಸರ್ಕಾರ ಒಂದು ವರ್ಷದಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡಿ. ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಈ ಸರ್ಕಾರದ ಹಣೆಬರಹ ಗೊತ್ತಾಗುತ್ತದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಸರ್ಕಾರಕ್ಕೆ ಉತ್ತಮ ಭವಿಷ್ಯವಿಲ್ಲ ಎಂದರು.
ಹೊಂದಾಣಿಕೆಗೆ ಬಗ್ಗೆ ಎಚ್ಚರವಿರಲಿ: ಚುನಾವಣೆಯಲ್ಲಿ ಒಂದು ಪಕ್ಷ ಸೋತಿದೆ. ಮುಂದಿನ ಚುನಾವಣೆ ನೆಪ ಮಾಡಿಕೊಂಡು ಬಿಜೆಪಿಯೊಂದಿಗೆ ಪಕ್ಷದವರು ಹೊಂದಾಣಿಕೆಗೆ ಬರಬಹುದು. ಅವರ ಬಗ್ಗೆ ಬಹಳ ಎಚ್ಚರಿಕೆಯಿಂದಿರಬೇಕು ಎಂಬುದನ್ನು ರಾಜ್ಯದ ಬಿಜೆಪಿ ನಾಯಕರಿಗೆ ಬಹಳ ಸೂಕ್ಷ್ಮವಾಗಿ ನಾನು ಮನದಟ್ಟು ಮಾಡುತ್ತೇನೆ. ಪರೋಕ್ಷವಾಗಿ ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಾರದೆಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲೆ ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಕಟ್ಟಬೇಕೆಂಬುದು ನಮ್ಮ ಪಕ್ಷದ ಹಿರಿಯ ನಾಯಕರು ಉದ್ದೇಶವಾಗಿದೆ. ಇದಕ್ಕೆ ಪೂರಕವಾಗಿ ಯಾವುದೇ ತೀರ್ಮಾನ ತೆಗೆದುಕೊಳ್ಳಲಿ. ಆದರೆ, ಬೇರೆ ಪಕ್ಷಗಳನ್ನು ಬದಿಗೊತ್ತಿ ನಮ್ಮ ಪಕ್ಷವನ್ನು ಬಲಪಡಿಸಲು ಕ್ರಮ ವಹಿಸುವಂತೆ ರಾಜ್ಯ ನಾಯಕರಲ್ಲಿ ಮನವಿ ಮಾಡುವುದಾಗಿ ತಿಳಿಸಿದರು.
ಬಿಜೆಪಿ ಪಕ್ಷ ಸದೃಢವಾಗಿದೆ: ಚುನಾವಣೆಯಲ್ಲಿ ನನ್ನ ಪತ್ನಿ ಸುಧಾ ಸೋತರೂ ಸಹ ಬಿಜೆಪಿ ಕಾರ್ಯಕರ್ತರು ಮತ್ತು ನನ್ನನ್ನು ನಂಬಿಕೊಂಡಿರುವ ಬೆಂಬಲಿಗರು ಎದೆಗುಂದಬೇಕಿಲ್ಲ. ನನ್ನ ಜೊತೆಗಿದ್ದು ಪೂರ್ಣ ಪ್ರಮಾಣದ ಸಹಕಾರ ಕೊಟ್ಟು ನೋಡಿ ನನಗಿರುವ ಅನುಭವ ಬಳಸಿಕೊಂಡು ಬಿಜೆಪಿ ಜಯಗಳಿಸುವಂತೆ ಮಾಡುತ್ತೇನೆ ಎಂದರು. ತಾಲೂಕು ಮತ್ತು ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಸದೃಢವಾಗಿದೆ. ಈ ಪಕ್ಷವನ್ನು ಮತ್ತಷ್ಟುಗಟ್ಟಿಗೊಳಿಸಲು ತಾಲೂಕಿನಿಂದ ರಾಜ್ಯದವರೆಗೂ ಹೋರಾಟ ಮಾಡಿ ಪಕ್ಷ ಸಂಘಟನೆ ಮಾಡೋಣ. ಆದ್ದರಿಂದ ಯಾರೂ ಸಹ ಗಾಬರಿಯಾಗಬೇಕಿಲ್ಲ ಎಂದರು.
ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ: ಶಾಸಕ ಎಚ್.ಎಂ.ಗಣೇಶ್ ಪ್ರಸಾದ್
ಅಧಿಕಾರಿಗಳು ಯಾರೊಬ್ಬರ ಸ್ವತ್ತಲ್ಲ: ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕೆಲ ಹಿರಿಯ ಅಧಿಕಾರಿಗಳು ಕಾಂಗ್ರೆಸ್ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳು ಕಾನೂನು ಮತ್ತು ಸಂವಿಧಾನಾತ್ಮಕವಾಗಿಯೇ ಕರ್ತವ್ಯ ನಿರ್ವಹಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. ಸಭೆಯಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ವಕೀಲ ಟಿ.ಕೆ.ರಾಮೇಗೌಡ, ತಾಲೂಕು ಬಿಜೆಪಿ ಅಧ್ಯಕ್ಷ ಸೋಮಶೇಖರ್, ಮುಖಂಡರಾದ ಲಾರಿ ಚನ್ನಪ್ಪ, ಚಿಣ್ಯ ಕರಿಯಣ್ಣ, ಪಾಳ್ಯ ರಘು, ಚೇತನ್, ತೊಳಲಿ ಕೃಷ್ಣಮೂರ್ತಿ ಸೇರಿದಂತೆ ಹಲವರಿದ್ದರು.