ಬೆಂಗಳೂರು (ಅ. 09): 2017 ರಲ್ಲಿ ರಾಜ್ಯ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಆಗಲು ತೇಜಸ್ವಿ ಸೂರ್ಯ ಏನೆಲ್ಲ ಶ್ರಮ ಹಾಕಿದ್ದರು. ಪ್ರತಾಪ್‌ ಸಿಂಹ ಮತ್ತು ಸಂತೋಷರ ಅಪೇಕ್ಷೆಯೂ ಇತ್ತು. ಆದರೆ ಯಡಿಯೂರಪ್ಪ ಮತ್ತು ಶೋಭಾ ಒಪ್ಪಿರಲಿಲ್ಲವಂತೆ. ಕೊನೆಗೆ ಸಂಘದ ಒತ್ತಡದಿಂದ 4 ತಿಂಗಳು ಕಳೆದು ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಆದರು.

2018 ರಲ್ಲಿ ಮೈಸೂರಿನಲ್ಲಿ ರಾಮದಾಸ್‌ಗೆ ಟಿಕೆಟ್‌ ತಪ್ಪಿಸಿ ತೇಜಸ್ವಿ ಸೂರ್ಯಗೆ ಕೊಡಬೇಕೆಂದು ಆರ್‌ಎಸ್‌ಎಸ್‌ ಕೂಡ ಹೇಳಿತ್ತು. ಆದರೆ ಆಗ ಅನಂತಕುಮಾರ್‌ ಒಪ್ಪಿರಲಿಲ್ಲ. ಆದರೆ ಅದೃಷ್ಟನೋಡಿ, 2019 ರಲ್ಲಿ ಅದೇ ಅನಂತ ಕುಮಾರ್‌ ಸ್ಥಾನಕ್ಕೆ ಸಂಸದರಾದ ಸೂರ್ಯ, 2020ರಲ್ಲಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ತೇಜಸ್ವಿಗೆ ವಯಸ್ಸಿದೆ, ಭಾಷೆಯಿದೆ, ರೂಪವಿದೆ, ಬುದ್ಧಿವಂತಿಕೆಯೂ ಇದೆ. ಜೊತೆಗೆ ಪರಿಶ್ರಮ ಮತ್ತು ಜನರ ಪ್ರೀತಿ ಗಳಿಸಿದರೆ ಇನ್ನೂ ಮೇಲಕ್ಕೆ ಹೋಗಬಹುದು. ಆದರೆ ಎತ್ತರಕ್ಕೆ ಹೋಗಬೇಕೆನ್ನುವ ಪ್ರತಿಯೊಬ್ಬರ ಕಾಲು ನೆಲದಲ್ಲಿ ಇರಲೇಬೇಕು ನೋಡಿ. ಅಂದರೆ ಮಾತ್ರ ಬಾಳಿಕೆ ಜಾಸ್ತಿ.

ಬಿಹಾರ ವಿಧಾನಸಭಾ ಚುನಾವಣೆ: ಲಾಲುಗೆ ಇದು ಕಡೇ ಅವಕಾಶ, ನಿತೀಶ್ ಕುಮಾರ್‌ಗೆ ಅಪಾಯ!

ರವಿ ಸೀಟಿ ಇಲ್ಲೋ, ಅಲ್ಲೋ?

ಸಿ.ಟಿ.ರವಿ ಅವರಿಗೆ ರಾಜ್ಯ ಬಿಜೆಪಿಯ ಅಧ್ಯಕ್ಷರಾಗಬೇಕು ಎಂದು ಬಹಳವೇ ಮನಸ್ಸು ಇತ್ತು. ಆದರೆ ಸಂತೋಷ್‌ ಅವರು ನಳಿನ್‌ ಕಟೀಲುಗೆ ಅವಕಾಶ ನೀಡಿ ರವಿಯನ್ನು ದಿಲ್ಲಿ ರಾಜಕಾರಣಕ್ಕೆ ಒಯ್ದಿದ್ದಾರೆ. ರವಿ ಅವರಿಗಿರುವ ದೊಡ್ಡ ಸಾಮರ್ಥ್ಯ ಎಂದರೆ ಯಡಿಯೂರಪ್ಪರಂತೆ ಕಾರ್ಯಕರ್ತರ ಹೆಗಲ ಮೇಲೆ ಕೈಹಾಕಿ ಕೆಲಸ ಮಾಡುವ, ಮಾಡಿಸುವ ಗುಣ. ಆದರೆ ದೌರ್ಬಲ್ಯ ಎಂದರೆ ಆಂಗ್ಲ ಮತ್ತು ಹಿಂದಿ ಭಾಷೆಯ ಮೇಲೆ ಇಲ್ಲದ ಹಿಡಿತ. ರವಿ ಅವರ ರಾಜಕೀಯ ಸಾಮರ್ಥ್ಯ ತಮಿಳುನಾಡಿನ ಚುನಾವಣೆಯಲ್ಲಿ ಪಣಕ್ಕೆ ಹಚ್ಚಲಾಗುತ್ತದೆ. ಮೋದಿ ಮತ್ತು ಶಾಗೆ ಏನಕೆನ ಚುನಾವಣೆ ಗೆಲ್ಲಿಸುವ ಜನರು ಬೇಕು. ಬಾಕಿ ಎಲ್ಲವೂ ಗೌಣ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ