ಬೆಳಗಾವಿ: ಶಾಸಕಿ ಹೆಬ್ಬಾಳಕರ ಎದುರೇ ತೆಂಗಿನಕಾಯಿ ಒಡೆದು ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತರು
ಯಾರೂ ನಿಮ್ಮನ್ನು ಖರೀದಿಸಲು ಬರುತ್ತಾರೋ ಅವರ ತಲೆ ಮೇಲೆ ತೆಂಗಿನಕಾಯಿ ಒಡೆಯಿರಿ ಎಂದು ಮೈಕ್‌ನಲ್ಲಿ ಘೋಷಣೆ ಕೂಗುತ್ತ ತೆಂಗಿನಕಾಯಿ ಒಡೆದು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು.
ಬೆಳಗಾವಿ(ಜ.14): ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಎದುರೇ ತೆಂಗಿನಕಾಯಿ ಒಡೆದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆ ಬೆಳಗಾವಿ ತಾಲೂಕಿನ ಹೊನ್ನಿಹಾಳ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮೀ ಹೆಬ್ಬಾಳಕರ ಬೆಂಬಲಿಗರು ತೆಂಗಿನಕಾಯಿ ಮೇಲೆ ಆಣೆ ಮಾಡಿಸಿ ಗಿಫ್ಟ್ ನೀಡುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿ, ಪ್ರತಿಭಟಿಸಿದರು. ಈ ವೇಳೆ ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಹೊನ್ನಿಹಾಳ ಗ್ರಾಮದಲ್ಲಿ ರಂಗೋಲಿ ಸ್ಪರ್ಧೆ ಆಯೋಜಿಸಿ ಗಿಫ್ಟ್ ನೀಡಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ನಾಯಕ ಧನಂಜಯ ಜಾಧವ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದರು.
ಈ ವೇಳೆ ತೆಂಗಿನಕಾಯಿ ಒಡೆದು ಮೋದಿ ಪರ ಘೋಷಣೆ ಕೂಗಿದರು. ಎಲ್ಲಿಯವರೆಗೆ ನಮ್ಮ ಮನೆಯಲ್ಲಿ ಒಲೆ ಉರಿಯುವುದೋ ಅಲ್ಲಿಯವರೆಗೆ ನಿಮ್ಮ ಕುಕ್ಕರ್ ಅವಶ್ಯಕತೆ ನಮಗಿಲ್ಲ. ನಾವು ಬಡವರಿದ್ದೇವೆ ನಿಜ. ಆದರೆ, ಆಸೆ ಮಾಡುವುದಿಲ್ಲ. ನಾವು ಕಷ್ಟದಲ್ಲಿದ್ದೇವೆ ನಿಜ. ನಾವು ಸ್ವಾಭಿಮಾನ ಮಾರುವುದಿಲ್ಲ. ನಾವು ಶಿಕ್ಷಣ ಕಲಿತಿಲ್ಲ, ಆದರೂ ಬುದ್ದಿಹೀನರಲ್ಲ ಎಂದು ಘೋಷಣೆ ಕೂಗಿದರು.
ಬೆಳಗಾವಿ: ಮಾಧ್ಯಮದವರು ದಾದಾಗಿರಿ ಮಾಡುವ ಪುಂಡರೆಂದ ಸಂಜಯ್ ಪಾಟೀಲ್
ಯಾರೂ ನಿಮ್ಮನ್ನು ಖರೀದಿಸಲು ಬರುತ್ತಾರೋ ಅವರ ತಲೆ ಮೇಲೆ ತೆಂಗಿನಕಾಯಿ ಒಡೆಯಿರಿ ಎಂದು ಮೈಕ್‌ನಲ್ಲಿ ಘೋಷಣೆ ಕೂಗುತ್ತ ತೆಂಗಿನಕಾಯಿ ಒಡೆದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಕಾರ್ಯಕರ್ತರು ತೆಂಗಿನಕಾಯಿ ಒಡೆಯುತ್ತಿದ್ದರೂ ಹಿಂಜರಿಯದೇ ಲಕ್ಷ್ಮೀ ಹೆಬ್ಬಾಳಕರ ಮುಂದೆ ಸಾಗಿದರು. ಈ ವೇಳೆ ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರು ಮೋದಿ.. ಮೋದಿ.. ಎಂದು ಘೋಷಣೆ ಕೂಗಿದರು. ಎರಡು ದಿನಗಳ ಹಿಂದೆ ನಡೆದ ಈ ಘಟನೆ ದೃಶ್ಯ ಸಾಮಾಜಿಕ ತಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಧನಂಜಯ ಜಾಧವ್, ಹೊನ್ನಿಹಾಳ ಗ್ರಾಮದಲ್ಲಿ ರಂಗೋಲಿ ಸ್ಪರ್ಧೆ ನಿಮಿತ್ತ ಮಿಕ್ಸರ್, ಪಾತ್ರೆ ಹಂಚುವ ತಂತ್ರಗಾರಿಕೆಗೆ ಹೊರಟಿದ್ದರು. ಊರಲ್ಲಿ ಇದ್ದ ಸ್ವಾಭಿಮಾನಿ ಜನ ಇದನ್ನು ವಿರೋಧಿಸಿದ್ದಾರೆ. ಜನರಿಗೆ ಅಭಿವೃದ್ಧಿ, ನೌಕರಿ, ನೀರು, ಚರಂಡಿ ವ್ಯವಸ್ಥೆ ಮಾಡುವುದು ರಾಜಕೀಯ ಪ್ರತಿನಿಧಿಗಳ ಕರ್ತವ್ಯ. ಇದರಲ್ಲಿ ವಿಫಲ ಇದ್ದ ಕಾರಣ ಮಿಕ್ಸರ್, ಪಾತ್ರೆ ಕೊಡುತ್ತೇವೆ. ತೆಂಗಿನಕಾಯಿ ಮೇಲೆ ಆಣೆ ಮಾಡಬೇಕು ಎಂಬ ತಂತ್ರಗಾರಿಕೆ ಮಾಡಿದ್ದಾರೆ. ಈ ತಂತ್ರಗಾರಿಕೆಗೆ ಜನರು ವಿರೋಧಿಸಿದ್ದಾರೆ ಎಂದರು.
ಕುಕ್ಕರ್, ತೆಂಗಿನಕಾಯಿ ಆಣೆ ಪ್ರಮಾಣದಂತಹ ಇಂತಹ ಹೊಲಸು ರಾಜಕೀಯಕ್ಕೆ ಯಾರೂ ಅವಕಾಶ ನೀಡಬಾರದು. ಮಾಡುವುದಿದ್ದರೆ ಅಭಿವೃದ್ಧಿ ಮಾಡಿ ಜನತೆಗೆ ಉದ್ಯೋಗ ಕೊಡಬೇಕು. ಸುಮ್ಮನೇ ಮಾತಿನ ಸರದಾರಿಣಿ ಎಂದು ಆ ಊರಲ್ಲಿ ಇಷ್ಟು ಕೋಟಿ ಕೊಟ್ಟೆ. ಈ ಊರಿನಲ್ಲಿ ಇಷ್ಟು ಕೋಟಿ ಕೊಟ್ಟು ಎನ್ನುವುದು ಸುಳ್ಳಿನ ಮಾತು. ಅವರಿಗೆ ತಕ್ಕ ಪಾಠ ಕಲಿಸಿದ ಜನರಿಗೆ ಅಭಿನಂದನೆ ಹೇಳುತ್ತೇವೆ ಎಂದರು.