ಬೆಂಗಳೂರು, (ನ.07):  ಶಿರಾ ಮತ್ತು ಆರ್​ ಆರ್​ ನಗರ ವಿಧಾನಸಭಾ ಉಪಚುನಾವಣೆ ಫಲಿತಾಂಶ ತೀವ್ರ ಕುತೂಹಲ ಮೂಡಿಸಿದೆ. ಇದೇ ನವೆಂಬರ್ 10ರಂದು ಫಲಿತಾಂಶ ಪ್ರಕಟವಾಗಿದ್ದು, ಯಾರು ಗೆಲ್ಲಲಿದ್ದಾರೆ ಎನ್ನುವ ಕುತೂಹಲ ಕೆರಳಿಸಿದೆ.

 ಮತದಾರರು ನ.3ರಂದು ಅಭ್ಯರ್ಥಿಗಳ ಹಣೆಬರಹ ಬರೆದಿದ್ದು, ಬಹುತೇಕ ಮತದಾರರ ಒಲವು ಯಾರ ಕಡೆ ಇತ್ತು? ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದು? ಎನ್ನುವುದನ್ನ ಸಿ ವೋಟರ್ ಸಂಸ್ಥೆ ಬಹಿರಂಗಪಡಿಸಿದೆ.

ಸಿ-ವೋಟರ್ ಸಮೀಕ್ಷೆ ಫಲಿತಾಂಶ ಪ್ರಕಟ, RR ನಗರ ಉಪಚುನಾವಣೆಯಲ್ಲಿ ಗೆಲುವು ಯಾರಿಗೆ?

ರಾಜಕೀಯ ಪ್ರತಿಷ್ಠೆಗೆ ಕಾರಣವಾಗಿದ್ದ ಆರ್​ ಆರ್​ ನಗರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಗೆಲುವು ಸಾಧಿಸಲಿದ್ದಾರೆ ಎಂದು ಸಿ-ವೋಟರ್ ಸಮೀಕ್ಷೆ ಹೇಳಿದೆ. ಇನ್ನು ತುಮಕೂರಿನ ಶಿರಾ ವಿಧಾನಸಭಾ ಉಪಚುನಾವಣೆಯಲ್ಲೂ ಬಿಜೆಪಿಯೇ ಗೆಲುವು ಸಾಧಿಸಲಿದೆ ಎಂದು ಸಿ-ವೋಟರ್ ಸಮೀಕ್ಷೆ ಭವಿಷ್ಯ ನುಡಿದಿದೆ.

ಶೇಕಡವಾರು ಮತದಾನ
ಸಿ-ವೋಟರ್ ಸಮೀಕ್ಷೆ ಪ್ರಕಾರ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್​ ಗೌಡ ಪರ ಶೇಕಡಾ 36.6ರಷ್ಟು ಮತಗಳಿಕೆಯಾಗಿರುವ ಸಾಧ್ಯತೆಯಿದ್ದು, ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ  ಶೇಕಡ  32.5ರಷ್ಟು ಮತ ಪಡೆದಿದ್ದಾರೆ. ಇನ್ನು ಜೆಡಿಎಸ್​ ಅಭ್ಯರ್ಥಿ  ಅಮ್ಮಾಜಮ್ಮ ಪರ 17.4ರಷ್ಟು ಮತಗಳಿಕೆ ಸಾಧ್ಯತೆಯಿದೆ ಎಂದು ಸಮೀಕ್ಷೆ ತಿಳಿಸಿದೆ.

ಬೆಂಗಳೂರಿನ ಆರ್‌ಆರ್‌ ನಗರದಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ಸಿ-ವೋಟರ್ ತಿಳಿಸಿದ್ದು, ಇದೇ ನವೆಂಬರ್ 10ರಂದು ಪ್ರಕಟವಾಗಲಿರುವ ಫಲಿತಾಂಶದಲ್ಲಿ ಯಾರಿಗೆ ಗೆಲುವು-ಯಾರು ಸೋಲುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.