ತುಮಕೂರು  (ನ.08): ತುಮಕೂರಿನಲ್ಲಿ 10 ಜಿಲ್ಲೆಗಳ ಮೂರು ವಿಭಾಗದ ತರಬೇತಿ ಶಿಬಿರ ನಡೆಯುತ್ತಿದೆ. ಶಿರಾ ಹಾಗೂ ಆರ್ ಆರ್ ನಗರದ ,ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳು ಬಿಜೆಪಿ ಪಾಲಾಗಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. 

ತುಮಕೂರಿನಲ್ಲಿ ಮಾತನಾಡಿದ  ನಳಿನ್ ಕುಮಾರ್ ಕಟೀಲ್  ಶಿರಾದಲ್ಲಿ 25 ಸಾವಿರ ,ಆರ್ ಆರ್ ನಗರದಲ್ಲಿ 40 ಸಾವಿರ ಅಂತರದಲ್ಲಿ ಬಿಜೆಪಿಗೆ ಗೆಲುವಾಗಲಿದೆ.  ನಮ್ಮ ಗೆಲುವು ನಿಶ್ಚಯ. ಶಿರಾದಲ್ಲಿ ವಿಜಯೇಂದ್ರ, ಸುರೇಶ್ ಗೌಡ, ರವಿಕುಮಾರ್, ಎಸ್ ಆರ್ ಗೌಡ, ಬಿಕೆ ಮಂಜುನಾಥ ಇವರ ಸಾಮೂಹಿಕ‌ ಹೋರಾಟದಲ್ಲಿ  ಗೆಲುವು ದೊರೆಯಲಿದೆ.  ಆರ್ ಆರ್ ನಗರದಲ್ಲಿ ಆರ್ ಅಶೋಕ್, ಅರವಿಂದ ಲಿಂಬಾವಳಿ ಸೇರಿದಂತೆ ಸಾಮೂಹಿಕ ಪ್ರಯತ್ನದಿಂದ ಗೆಲುವಾಗಲಿದೆ.  ಸಿಎಂ ಈ ಭಾಗದಲ್ಲಿ ಪ್ರಚಾರ ನಡೆಸಿರೋದು ಸಾಕಷ್ಟು ಪ್ರಭಾವ ಬೀರಿದೆ. ಕಾಂಗ್ರೆಸ್ ನ ಒಳಜಗಳ ಬಿಜೆಪಿ ಗೆಲುವಿಗೆ ಕಾರಣವಾಗಿದೆ ಎಂದರು.

'40 ಸಾವಿರ ಅಂತರದಲ್ಲಿ ಮುನಿರತ್ನ ವಿಜಯ : ಶಿರಾದಲ್ಲಿ ಬಿಜೆಪಿ ಭವಿಷ್ಯ ಹಿಂಗಿದೆ' ..

ಆರ್.ಆರ್ ನಗರವನ್ನ ಡಿ.ಕೆ ಶಿವಕುಮಾರ್ ಉಸ್ತುವಾರಿ ವಹಿಸಿಕೊಂಡಿದ್ದರು. ಶಿರಾವನ್ನ ಸಿದ್ದರಾಮಯ್ಯ ಉಸ್ತುವಾರಿ ವಹಿಸಿಕೊಂಡಿದ್ದರು. ಶಿರಾದಲ್ಲಿ ಕಾಂಗ್ರೆಸ್ ಸೋಲಿಸುವುದಕ್ಕೆ ಡಿ.ಕೆ ಶಿವಕುಮಾರ್ ತಲೆಬಿಸಿ ಮಾಡಿಕೊಂಡಿದ್ದರು. ಆರ್.ಆರ್ ನಗರದಲ್ಲಿ ಕಾಂಗ್ರೆಸ್ ಸೋಲಿಸುವುದಕ್ಕೆ ಸಿದ್ದರಾಮಯ್ಯ ತಲೆಬಿಸಿ ಮಾಡಿಕೊಂಡಿದ್ದರು.  ಸಿದ್ದರಾಮಯ್ಯ ಶಿರಾದಲ್ಲಿ ಕಾಂಗ್ರೆಸ್ ಗೆಲುವನ್ನ ಯೋಚನೆ ಮಾಡೋ ಬದಲು ಆರ್ ಆರ್ ನಗರವನ್ನ ಸೋಲಿಸೋದು ಹೇಗೆ ಅಂತಾ ತಲೆಕೆಡಿಸಿಕೊಂಡಿದ್ದರು ಎಂದರು. 

ಕಾಂಗ್ರೆಸ್ ನ ಆಂತರಿಕ ಜಗಳ ಈಗ ಬೀದಿಜಗಳವಾಗಿದೆ. ಸಿದ್ದರಾಮಯ್ಯಗೆ ಕಾಂಗ್ರೆಸ್ ನಲ್ಲಿ ಕಳೆದುಹೋಗುವ ಭಯವಿದೆ. ಕಾಂಗ್ರೆಸ್ ನಲ್ಲಿ ಅವರ ನಾಯಕತ್ವಕ್ಕೆ ಬೆಲೆಯಿಲ್ಲ ಅನ್ನಿಸಿದೆ. ಮೂಲೆಗುಂಪಾಗುವ ಭಯವಿದೆ.
ಅದಕ್ಕೋಸ್ಕರ ಸಿಎಂ ಮೇಲೆ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದರು.

ಈ ಚುನಾವಣೆ ಬಳಿಕ ಕಾಂಗ್ರೆಸ್ ಜಗಳ ಬೀದಿ ಕಾಳಗವಾಗಲಿದೆ.  ಕಾಂಗ್ರೆಸ್ ‌ನವರಿಗೆ ಯಾವಾಗ ಸೋಲಾಗುತ್ತೋ ಆಗ ಇವಿಎಂ ಮೇಲೆ ಅನುಮಾನ ಪಡ್ತಾರೆ. ಗೆದ್ದಾಗ ಇವಿಎಂ ಸರಿ ಇರಲ್ವಾ..? ಇದ್ರಿಂದ ಕಾಂಗ್ರೆಸ್ ನವರಿಗೆ ನಾವು ಸೋಲುತ್ತೇವೆ ಎಂದು ಅರ್ಥವಾಗಿದೆ.  ಇವಿಎಂ ದೋಷವಿದ್ದರೇ ಡಿಕೆಶಿ ಸಿದ್ದರಾಮಯ್ಯ ಗೆಲ್ಲುವುದಕ್ಕೆ ನಾವು ಬಿಡುತ್ತಿದ್ದೆವಾ ಎಂದು ಕಟೀಲ್ ಪ್ರಶ್ನಿಸಿದ್ದಾರೆ.