Karanataka Politics: ರಾಜ್ಯದಲ್ಲಿ ಬಿಜೆಪಿ 150 ಸ್ಥಾನ ಗೆಲ್ಲುವ ವಿಶ್ವಾಸವಿದೆ: ನಳಿನ್‌ ಕುಮಾರ್‌ ಕಟೀಲ್‌

ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಸಂಘಟಿಸುತ್ತಿದ್ದು, 150 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ವಿಶ್ವಾಸ ವ್ಯಕ್ತಪಡಿಸಿದರು.

Bjp Will Win 150 Seats In Upcoming Assembly Election Says Nalin Kumar Kateel gvd

ಮೈಸೂರು (ಏ.13): ಮುಂಬರುವ ಚುನಾವಣೆ (Election) ಹಿನ್ನೆಲೆಯಲ್ಲಿ ರಾಜ್ಯದಲ್ಲಿ (Karnataka) ಬಿಜೆಪಿಯನ್ನು (BJP) ತಳಮಟ್ಟದಿಂದ ಸಂಘಟಿಸುತ್ತಿದ್ದು, 150 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ (Nalin Kumar Kateel) ವಿಶ್ವಾಸ ವ್ಯಕ್ತಪಡಿಸಿದರು. ಲಲಿತ ಮಹಲ್‌ ಹೊಟೇಲ್‌ನಲ್ಲಿ ಮಂಗಳವಾರ ಆರಂಭವಾದ ಬಿಜೆಪಿ ಮೈಸೂರು ವಿಭಾಗ ಮಟ್ಟದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷವನ್ನು ಬೂತ್‌ಮಟ್ಟದಿಂದಲೂ ಸಂಘಟಿಸಲಾಗುತ್ತಿದೆ. ಶಕ್ತಿಕೇಂದ್ರಗಳ ಪ್ರಮುಖರ ಸಭೆ ನಡೆಸಲಾಗಿದೆ. 

ಇಲ್ಲಿ ಸರ್ಕಾರ ಮತ್ತು ಪಕ್ಷದ ಬಗ್ಗೆ ಜನರ ನಿರೀಕ್ಷೆಗಳೇನು ಮತ್ತು ಅಭಿಪ್ರಾಯವೇನು ಎಂಬುದನ್ನು ಕ್ರೂಢೀಕರಿಸಿ ಅದರಲ್ಲಿನ ಮಾಡಿಕೊಳ್ಳಬೇಕಾದ ಬದಲಾವಣೆಯ ಬಗ್ಗೆಯೂ ಚರ್ಚಿಸಲಾಗಿದೆ ಎಂದರು. ಪೇಜ್‌ ಪ್ರಮುಖ್‌, ಬೂತ್‌ ಪ್ರಮುಖ್‌, ಪೇಜ್‌ ಕಮಿಟಿಯ ಸಭೆಯನ್ನೂ ನಡೆಸಲಾಗಿದ್ದು, ಪೇಜ್‌ ಕಮಿಟಿಯ ಕಾರ್ಯವೈಖರಿಯ ಮೇಲೆ ನಿಗಾವಹಿಸಲು ವಿಸ್ತಾರಕ ಕಮಿಟಿಯನ್ನೂ ರಚಿಸಲಾಗಿದೆ. ಈಗಾಗಲೇ ರಾಜ್ಯದಲ್ಲಿ 60 ಪೇಜ್‌ ಪ್ರಮುಖ್‌ ಸಭೆ ನಡೆದಿದೆ. ಸರ್ಕಾರ ಕೈಗೊಂಡ ಕಾರ್ಯಕ್ರಮಗಳು ಮತ್ತು ಪಕ್ಷದ ಕಾರ್ಯಕ್ರಮಗಳಿಂದಾಗಿ ಜನರಿಗೆ ಪಕ್ಷದ ಮೇಲೆ ನಂಬಿಕೆ ಹೆಚ್ಚಾಗಿದೆ. 

ಕೇಂದ್ರ ಸರ್ಕಾರವು ಕೋವಿಡ್‌ ಸಂದರ್ಭದಲ್ಲಿ ವ್ಯಾಕ್ಸಿನ್‌ ಪೂರೈಕೆ, ಉಕ್ರೇನ್‌ನಲ್ಲಿ ಸಿಲುಕಿದ ಭಾರತೀಯರ ರಕ್ಷಣೆ, ಆರ್ಥಿಕ ಸಂಪನ್ಮೂಲ ಕ್ರೂಢೀಕರಣ ಮುಂತಾದ ವಿಷಯಗಳಿಂದ ಅಭಿಮಾನ ಮತ್ತು ವಿಶ್ವಾಸ ಹೆಚ್ಚಾಗಿದೆ ಎಂದು ಅವರು ಹೇಳಿದರು. ಆದರೆ ಪ್ರತಿಪಕ್ಷಗಳಿಗೆ ಬಿಜೆಪಿಯ ಕಾರ್ಯಕ್ರಮಗಳಿಂದ ಭ್ರಮನಿರಸನವಾಗಿದೆ. ಅನೇಕರು ಬಿಜೆಪಿ ಸೇರಲು ಉತ್ಸುಕರಾಗಿದ್ದಾರೆ. ನಾವು ಏ. 24 ರೊಳಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಸಭೆ ನಡೆಸುತ್ತೇವೆ. ಕೇಂದ್ರ ಸಚಿವ ಅಮಿತ್‌ ಶಾ ಅವರು 130 ಸ್ಥಾನ ಗೆಲ್ಲಬೇಕು ಎಂದು ಹೇಳಿದ್ದಾರೆ. ಆದರೆ 150 ಸ್ಥಾನ ಗೆಲ್ಲುವ ವಿಶ್ವಾಸ ನಮ್ಮಲ್ಲಿದೆ. 

ಹಲಾಲ್‌, ಝಟ್ಕಾ ಕಟ್‌ ವಿವಾದ: ಈಗಿನ ಬೆಳವಣಿಗೆಗೂ ಬಿಜೆಪಿಗೂ ಸಂಬಂಧವಿಲ್ಲ: ಕಟೀಲ್‌

ನಾವು ಅಭಿವೃದ್ಧಿ ಮತ್ತು ಪಕ್ಷ ಸಂಘಟನೆಯ ಮಾನದಂಡದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ಯಾವುದೇ ವಿವಾದ ಬಂದಾಗಲೂ ಸರ್ಕಾರ ಮತ್ತು ಪಕ್ಷ ಅದನ್ನು ಸಮರ್ಥವಾಗಿ ನಿಭಾಯಿಸಿದೆ ಎಂದು ಅವರು ಹೇಳಿದರು. ಉದಾಹರಣೆಗೆ ಹಿಜಾಬ್‌ ವಿವಾದವು ನಾವು ಮಾಡಿದ್ದಲ್ಲ. ಯಾರೋ ಮುನ್ನೆಲೆಗೆ ತಂದರು, ಯಾರೋ ನಾಯ್ಯಾಲಯದ ಮೊರೆ ಹೋದರು. ಈಗ ನ್ಯಾಯಾಲಯ ತೀರ್ಪು ನೀಡಿದ್ದು, ಅದನ್ನು ಪಾಲಿಸಬೇಕಿರುವುದು ಸರ್ಕಾರದ ಕರ್ತವ್ಯ. ಆ ಕೆಲಸವನ್ನಷ್ಟೇ ಸರ್ಕಾರ ಮಾಡುತ್ತಿದೆ. ಇಂತಹ ವಿಷಯಗಳನ್ನು ಮತಬ್ಯಾಂಕ್‌ ಆಗಿ ಮಾಡಿಕೊಳ್ಳುವುದು ಕಾಂಗ್ರೆಸ್‌ನ ಬುದ್ಧಿಯೇ ಹೊರತು ಬಿಜೆಪಿಗೆ ಅದರ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.

ಯಾವುದೋ ಸಂಘಟನೆ ಮಾಡಿದ್ದನ್ನು ಸರ್ಕಾರ ಮಾಡಿದೆ ಅಥವಾ ಬಿಜೆಪಿ ಮಾಡಿದೆ ಎಂದು ಹೇಳುವುದು ತಪ್ಪು. ಶ್ರೀರಾಮ ಸೇನೆಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ. ಆದರೆ ಸಂಘಕ್ಕೂ ಬಿಜೆಪಿಗೆ ಸಂಬಧ ಇದೆ. ವಿವಾದಗಳನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸಿದಾಗ ಸರ್ಕಾರದ ಮೇಲೆ ಜನರಿಗೆ ವಿಶ್ವಾಸ ಮೂಡುವುದು ಸಹಜ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕಾಂಗ್ರೆಸ್‌ ಪಕ್ಷದ ಇಂದಿನ ಸ್ಥಿತಿಯ ಬಗ್ಗೆ ದುಃಖವಿದೆ. 

ಕಾಂಗ್ರೆಸ್‌ಗೆ ಒಳ್ಳೆಯ ನಾಯಕತ್ವ ಇಲ್ಲ. ಯೋಜನೆ, ಆಲೋಚನೆ ಮತ್ತು ಯುವಜನರ ಬಲ ಇಲ್ಲ. ಆದ್ದರಿಂದ ಬಿಜೆಪಿ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಲೇ ಬಂದಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಹೆಚ್ಚುದಿನ ಇರುವುದಿಲ್ಲ ಎಂದರು. ಆದರೆ 3 ವರ್ಷ ಅವರೇ ಮುಖ್ಯಮಂತ್ರಿಯಾಗಿದ್ದರು. ಈಗ ಬೊಮ್ಮಾಯಿ ಇರುವುದಿಲ್ಲ ಎನ್ನುತ್ತಿದ್ದಾರೆ. ನಂತರ ಕಟೀಲ್‌ ಇರುವುದಿಲ್ಲ ಎನ್ನುತ್ತಾರೆ. ಹೀಗೆ ಒಂದೊಂದು ಆರೋಪ ಮಾಡುತ್ತಾರೆ. ಅವರಿಗೆ ಪ್ರತಿಪಕ್ಷ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಲು ಬರುತ್ತಿಲ್ಲ ಎಂದು ಕಟುವಾಗಿ ಟೀಕಿಸಿದರು.

ತನಿಖೆಯಾಗಲಿ, ತಪ್ಪಿದ್ದರೆ ಕ್ರಮ: ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ ಎಂದು ಈಶ್ವರಪ್ಪ ಅವರೇ ಹೇಳಿದ್ದಾರೆ. ಅಲ್ಲದೆ ಈ ಸಂಬಂಧ ಸಮಗ್ರ ತನಿಖೆ ನಡೆಸುವಂತೆ ಅವರೇ ಆಗ್ರಹಿಸಿದ್ದಾರೆ. ತನಿಖೆಯ ವರದಿಯಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಸರ್ಕಾರ ಬದ್ಧವಿದೆ. ಈ ಸಂಬಂಧ ನಾನು ಮುಖ್ಯಮಂತ್ರಿಗಳ ಜೊತೆಯಲ್ಲಿಯೂ ಮಾತನಾಡುತ್ತೇನೆ ಎಂದು ಕಟೀಲ್‌ ತಿಳಿಸಿದರು. ಬಳಿಕ ಸಚಿವ ಕೆ.ಎಸ್‌. ಈಶ್ವರಪ್ಪ ಮಾತನಾಡಿ, ಸಂತೋಷ್‌ ಎಂಬ ವ್ಯಕ್ತಿ ಯಾರು ಎಂಬುದೇ ನನಗೆ ಗೊತ್ತಿಲ್ಲ. ನನ್ನ ವಿರುದ್ಧ ಪಕ್ಷದ ವರಿಷ್ಠರಿಗೆ ದೂರು ನೀಡಿದ ವಿಷಯ ತಿಳಿದು ನಾನೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದೆ. ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾವುದೋ ವಾಟ್ಸ್‌ಆ್ಯಪ್‌ ಸಂದೇಶ ಎಲ್ಲೆಡೆ ಹರಿದಾಡುತ್ತಿದೆ. ಅದನ್ನು ಬಿಟ್ಟರೆ ಆತನ ಜೇಬಿನಲ್ಲಿ ದೊರತೆ ಚೀಟಿ, ಅದರಲ್ಲಿ ಯಾವುದೇ ಸಹಿ ಕೂಡ ಇಲ್ಲ.

ಆದ್ದರಿಂದ ಯಾರೋ ವ್ಯಕ್ತಿ ನನ್ನ ಸಾವಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕಾರಣ ಎಂದು ಬರೆದಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡರೆ ಇವರು ರಾಜೀನಾಮೆ ಕೊಡುತ್ತಾರೆಯೇ ಎಂದು ಪ್ರಶ್ನಿಸಿದರು. ಘಟನೆಯ ನೈಜತೆ ತಿಳಿಯಬೇಕು. ಈ ನಿಟ್ಟಿನಲ್ಲಿ ತನಿಖೆ ನಡೆಸುವಂತೆ ನಾನೇ ಮುಖ್ಯಮಂತ್ರಿಗಳನ್ನು ಕೇಳಿಕೊಂಡಿದ್ದೇನೆ. ನಾನು ಮೈಸೂರಿಗೆ ಬಂದ ಮೇಲೆ ಆತ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಯಿತು ಎಂದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಸಚಿವರಾದ ಸಿ. ನಾರಾಯಣಗೌಡ, ಎಸ್‌.ಟಿ. ಸೋಮಶೇಖರ್‌, ವಿ. ಸೋಮಣ್ಣ, ಗೋಪಾಲಯ್ಯ, ಸಂಸದ ಪ್ರತಾಪ ಸಿಂಹ, ಶಾಸಕರಾದ ಎಸ್‌.ಎ. ರಾಮದಾಸ್‌, ಎಲ್‌. ನಾಗೇಂದ್ರ, ಬಿಜೆಪಿ ಉಪಾಧ್ಯಕ್ಷ ಎಂ. ರಾಜೇಂದ್ರ, ವಕ್ತಾರ ಮಹೇಶ್‌, ಕಾರ್ಯದರ್ಶಿ ಸಿದ್ದರಾಜು ಮೊದಲಾದವರು ಇದ್ದರು.

ಕಾಂಗ್ರೆಸ್‌ ಹೀನಾಯ ಸೋಲಿನಿಂದ ಮಾನಸಿಕ ಸ್ಥಿಮಿತವನೇ ಕಳೆದುಕೊಂಡ ಸಿದ್ದು: ‌ಕಟೀಲ್

ಸಿದ್ದರಾಮಯ್ಯಗೆ ಕಾನೂನು ಬಗ್ಗೆ ಗೌರವ ಇದ್ದರೆ ನ್ಯಾಯಾಲಯದ ತೀರ್ಪಿನ ವಿರುದ್ಧವಾಗಿ ಬಂದ್‌ ಮಾಡಿದಾಗ ಶಾಂತಿಯುತವಾಗಿ ಬಂದ್‌ ಮಾಡಲಿ ಬಿಡಿ ಎನ್ನುತ್ತಿರಲಿಲ್ಲ. ನನ್ನ ವಿರುದ್ಧದ ಆರೋಪಕ್ಕೆ ತನಿಖೆ ಆಗಬೇಕು ಎಂದು ನಾನು ಹೇಳಿದ್ದೇನೆ. ಯಾರೇ ಎಷ್ಟುಬಾರಿ ರಾಜೀನಾಮೆ ಕೇಳಿದರೂ ರಾಜಕೀಯವಾಗಿ ಉತ್ತರ ನೀಡುತ್ತೇನೆ. ಈ ರೀತಿ ಆದರೆ ನೂರು ನೂರು ಬಾರಿ ರಾಜೀನಾಮೆ ನೀಡಬೇಕಾಗುತ್ತದೆ. ಇದನ್ನು ನಾನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ.
-ಕೆ.ಎಸ್‌. ಈಶ್ವರಪ್ಪ, ಸಚಿವ

Latest Videos
Follow Us:
Download App:
  • android
  • ios