ರಾಜ್ಯಸಭಾ ಚುನಾವಣೆ: ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಅಚ್ಚರಿ ಹೆಸರುಗಳು
ಬಿಜೆಪಿ ಪಾಳಯದಲ್ಲಿ ರಾಜ್ಯಸಭಾ ರಾಜಕೀಯ ಜೋರಾಗಿದ್ದು, ರಾಜ್ಯದಿಂದ ಎರಡು ರಾಜ್ಯಸಭಾ ಸ್ಥಾನಗಳಿಗೆ ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ಮಾತ್ರ ದೊಡ್ಡದಾಗಿದೆ.
ಬೆಂಗಳೂರು, (ಜೂನ್.05): ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಚುನಾವಣೆ ಎದುರಾಗಿದ್ದು, ನಾಲ್ಕು ಸ್ಥಾನಗಳಿಗೆ ಈ ತಿಂಗಳ ಜೂನ್ 19 ರಂದು ಎಲೆಕ್ಷನ್ ನಡೆಯಲಿದೆ.
ಈ ಹಿನ್ನೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳು ಭರ್ಜರಿ ಲಾಬಿ ನಡೆಸಿದ್ದಾರೆ. ಇನ್ನು ಕಾಂಗ್ರೆಸ್, ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದು, ಇದೇ ಮೊದಲ ಬಾರಿಗೆ ಅವರು ಮೇಲ್ಮನೆ ಪ್ರವೇಶಿಸುವುದು ಬಹತೇಕ ಖಚಿತವಾಗಿದೆ.
ಕರ್ನಾಟಕ ರಾಜ್ಯಸಭಾ ಎಲೆಕ್ಷನ್: ಅಚ್ಚರಿ ಹೆಸರು ಕೇಳಿ ಬಿಜೆಪಿ ನಾಯಕರೇ ತಬ್ಬಿಬ್ಬು..!
ಆದ್ರೆ, ಬಿಜೆಪಿ ಇನ್ನೂ ತನ್ನ ಅಭ್ಯರ್ಥಿ ಹೆಸರು ಘೋಷಣೆ ಮಾಡಿಲ್ಲ. ಕಾರಣ ನನಗೆ ಬೇಕು, ನಿನಗೆ ಬೇಕು ಅಂತ ನಾಯಕರ ಮಧ್ಯೆ ಟಿಕೆಟ್‌ಗಾಗಿ ಭರ್ಜರಿ ಪೈಪೋಟಿ ನಡೆದಿದ್ದು, ಆಕಾಂಕ್ಷಿ ಪಟ್ಟಿ ದೊಡ್ಡದಾಗಿ ಬೆಳೆದಿದೆ.
ಬಿಜೆಪಿಗೆ ಸಿಗುವ ಎರಡು ಸ್ಥಾನಗಳಿಗೆ ಸುಮಾರು ಐದಾರು ಜನರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇದರಿಂದ ಯಾರಿಗೆ ಕೊಡಬೇಕು, ಯಾರಿಗೆ ಬಿಡಬೇಕು ಎನ್ನುವ ಲೆಕ್ಕಾಚಾರದಲ್ಲಿ ಬಿಜೆಪಿ ತೊಡಗಿದೆ.
ಟಿಕೆಟ್ ಆಕಾಂಕ್ಷಿಗಳು
ಡಾ. ಪ್ರಭಾಕರರ್ ಕೋರೆ
ತೇಜಸ್ವಿನಿ ಅನಂತ್ ಕುಮಾರ್
ರಮೇಶ್ ಕತ್ತಿ
ಪಿ ಮುರಳೀಧರ್ ರಾವ್
ಡಾ. ಕೆ.ವಿ.ಕಾಮತ್
ಪ್ರಕಾಶ್ ಶೆಟ್ಟಿ
ಇಷ್ಟು ನಾಯಕರು ರಾಜ್ಯಸಭಾ ಟಿಕೆಟ್‌ಗಾಗಿ ಕಸರತ್ತು ನಡೆಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಕ್ಕಿಲ್ಲವೆಂದು ರಮೇಶ್ ಕತ್ತಿ ಮತ್ತು ತೇಜಸ್ವಿ ಅನಂತ್ ಕುಮಾರ್ ಪೈಪೋಟಿ ನಡೆಸಿದ್ರೆ, ಪ್ರಭಾಕರ್ ಕೋರೆ ಇದೊಂದು ಕೊನೆ ಅವಕಾಶ ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ.
ಇದರ ಮಧ್ಯೆ ಗೋಲ್ಡ್ ಫಿಂಚ್ ಸಮೂಹದ ಮಾಲೀಕ ಪ್ರಕಾಶ್ ಶೆಟ್ಟಿ ಹೆಸರು ಬಂದಿರುವುದು ಅಚ್ಚರಿಗೆ ಕಾರಣವಾಗಿದೆ. ಇನ್ನು ಕಾಮತ್ ಶೆಟ್ಟಿ ಹೈಕಮಾಂಡ್ ಕ್ಯಾಂಡಿಡೇಟ್ ಎನ್ನಲಾಗಿದೆ.
ಹೀಗೆ ಎರಡು ಸ್ಥಾನಗಳಿಗೆ ಐದಾರು ನಾಯಕರು ಟಿಕೆಟ್ ಬೇಕೆಂದು ಪಟ್ಟು ಹಿಡಿದಿದ್ದು, ಬಿಜೆಪಿ ನಾಯಕರಿಗೆ ದಿಕ್ಕುತೋಚದಂತಾಗಿದೆ.