ಲೋಕಸಭಾ ಚುನಾವಣೆ 2024: ತುಮಕೂರಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಸೋಮಣ್ಣ ಮಿಂಚಿನ ಸಂಚಾರ

ಹೈಕಮಾಂಡ್ ಮಟ್ಟದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡು ಮುಂಬರುವ ಲೋಕಸಭಾ ಚುನಾವಣೆ ಎದುರಿಸಲು ಸನ್ನದ್ಧರಾಗಿವೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕೂಡ ಮಾಜಿ ಸಚಿವ ವಿ.ಸೋಮಣ್ಣ ಭೇಟಿ ಮಾಡಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

BJP Ticket Aspirant V Somanna Active in Tumakuru grg

ವರದಿ: ಮಹಂತೇಶ್ ಕುಮಾರ್, ಏಷ್ಯನೆಟ್ ಸುವರ್ಣ ನ್ಯೂಸ್, ತುಮಕೂರು

ತುಮಕೂರು(ಫೆ.02):  ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್  ಆಕಾಂಕ್ಷಿಯಾಗಿರುವ ಮಾಜಿ ಸಚಿವ ವಿ ಸೋಮಣ್ಣ ಸದ್ದಿಲ್ಲದೆ ಕ್ಷೇತ್ರದಾದ್ಯಂತ ಓಡಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಎರಡು ತಿಂಗಳದಿಂದ ತುಮಕೂರು ಜಿಲ್ಲೆಯಲ್ಲಿ ಹಾಗೂ ಸಿದ್ದಗಂಗಾ ಮಠದಲ್ಲಿ ನಡೆಯುತ್ತಿರುವ ಒಂದಿಲ್ಲೊಂದು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಚುನಾವಣಾ ಅಖಾಡವನ್ನು ಸಜ್ಜುಗೊಳಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಹೈಕಮಾಂಡ್ ಮಟ್ಟದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡು ಮುಂಬರುವ ಲೋಕಸಭಾ ಚುನಾವಣೆ ಎದುರಿಸಲು ಸನ್ನದ್ಧರಾಗಿವೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕೂಡ ಮಾಜಿ ಸಚಿವ ವಿ.ಸೋಮಣ್ಣ ಭೇಟಿ ಮಾಡಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಇನ್ನೊಂದಡೆ ತುಮಕೂರು ಜಿಲ್ಲೆಯಲ್ಲಿ ವಿ.ಸೋಮಣ್ಣ ಮಿಂಚಿನ‌ ಸಂಚಾರ ನಡೆಸಿದ್ದು, ತೆರೆ ಮರೆಯಲ್ಲಿ ಜಿಲ್ಲೆಯ ಬಹುತೇಕ ಎಲ್ಲಾ ಸಮುದಾಯದ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಲಿಂಗಾಯತ, ಗೊಲ್ಲ, ಒಕ್ಕಲಿಗ ಸಮುದಾಯದ ನಾಯಕರ ಭೇಟಿ ಮಾಡಿ ಒಂದು ಸುತ್ತಿನ ಮಾತುಕತೆಯನ್ನು ಕೂಡ ಪೂರ್ಣಗೊಳಿಸಿದ್ದಾರೆ. ರಾಜಕೀಯ ಮುಖಂಡರ ಮದುವೆ ಸೇರಿದಂತೆ ಖಾಸಗಿ ಕಾರ್ಯಕ್ರಮಗಳಲ್ಲೂ‌ ಕಾಣಿಸಿಕೊಳ್ಳುತ್ತಿರುವ ಸೋಮಣ್ಣ. ಗುಬ್ಬಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿದ್ದು  ಇವರಿಗೆ ಹಾಲಿ ತುಮಕೂರು ಸಂಸದ ಜಿ.ಎಸ್ ಬಸವರಾಜು ಸಾಥ ನೀಡಿರುವುದು ಕೂಡ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಿ ಸೋಮಣ್ಣ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ  ಎಂಬುದಕ್ಕೆ ಪುಷ್ಠಿಕರಿಸುತ್ತಿದೆ.

ಕೇಸರಿ ಧ್ವಜ ಕಂಡರೆ ಕಾಂಗ್ರೆಸ್ ನಾಯಕರಿಗೆ ಕಣ್ಣುರಿ : ಸಂಸದ ಬಸವರಾಜು

ನಾಯಕನ ಮನೆಗೆ ಭೇಟಿ ನೀಡಿ ಲೋಕಸಭೆ ಚುನಾವಣೆ ಗ್ರೌಂಡ್ ವರ್ಕ್ ಶುರು ಮಾಡಿದ ವಿ.ಸೋಮಣ್ಣ, ಈಗಾಗ್ಲೇ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಕುಮಾರಸ್ವಾಮಿಯನನ್ನು ಕೂಡ ಭೇಟಿ ಮಾಡಿ ಚುನಾವಣೆಗೆ ಸರ್ವಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಅಲ್ಲದೆ ನೋಣವಿನಕೆರೆ ಕಾಡ ಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿರುವ ವಿ.ಸೋಮಣ್ಣ ಬಳಿಕ ಗುಬ್ಬಿ ಕ್ಷೇತ್ರದ ಲಿಂಗಾಯತ ಸಮುದಾಯದ ನಾಯಕರ ಮನೆಗಳಿಗೆ ಭೇಟಿ ನೀಡಿ ಕುತೂಹಲ ಮೂಡಿಸಿದ್ದಾರೆ. ತೆರೆಮರೆ ಕಸರತ್ತು ಮಾಡುತ್ತಿರುವ ಅವರು ಅಖಾಡ ರೆಡಿ ಮಾಡಿಕೊಳ್ಳುತ್ತಿದ್ದಾರೆಯೇ ಎಂಬ ಚರ್ಚೆ ಬಹುದೊಡ್ಡ ಮಠದಲ್ಲಿ ನಡೆಯುತ್ತಿದ್ದು,  ಕ್ಷೇತ್ರದ ನಾಯಕರನ್ನ ಭೇಟಿ ಮಾಡಿ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಕಳೆದ ಎರಡು ತಿಂಗಳಷ್ಟೇ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಗುರು ಭವನ ನಿರ್ಮಿಸಿ  ಅದನ್ನು ಮಠಕ್ಕೆ ಹಸ್ತಾಂತರಿಸುವ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಅಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಬಿಜೆಪಿ ಪಕ್ಷದ ಮುಖಂಡರನ್ನು ಕೂಡ ಒಂದೆಡೆ ಸೇರಿಸಿ ಎಲ್ಲರ ವಿಶ್ವಾಸವನ್ನು ಪಡೆದುಕೊಳ್ಳುವ ಕಸರತ್ತು ನಡೆಸಿದ್ದರು. ಈ ಹಿಂದೆಯೂ ಕೂಡ ಹಾಲಿ ಸಂಸದ ಜಿಎಸ್ ಬಸವರಾಜು ಅವರು ಬಿಜೆಪಿ ಹೈಕಮಾಂಡ್ ಬಳಿ ಸೋಮಣ್ಣ ಅವರಿಗೆ ಬಿಜೆಪಿ ಟಿಕೆಟ್ ಕೊಡಬೇಕು ಇದಕ್ಕೆ ನಾವು ಸಂಪೂರ್ಣ ರೀತಿಯಲ್ಲಿ ಸಹಕಾರ ನೀಡುತ್ತೇವೆ ಎಂಬ ಇಂಗಿತ ವ್ಯಕ್ತಪಡಿಸಿದ್ದರು.

ಒಟ್ಟಾರೆ ಮಾಜಿ ಸಚಿವ ವಿ ಸೋಮಣ್ಣ ಅವರ ಕಾರ್ಯ ಚಟುವಟಿಕೆ ತುಮಕೂರು ಜಿಲ್ಲೆಯಲ್ಲಿ ನಡೆಯುತ್ತಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕುತ್ತಿದೆ ಎಂದು ಹೇಳಬಹುದು.

Latest Videos
Follow Us:
Download App:
  • android
  • ios