Asianet Suvarna News Asianet Suvarna News

ಮೋದಿ, ಬಿಎಸ್‌ವೈ ಅಭಿವೃದ್ಧಿಯೇ ಶ್ರೀರಕ್ಷೆ, ಮೂರು ಕಡೆ ನಮಗೇ ಗೆಲುವು: ಕಟೀಲ್‌

ಜೆಡಿಎಸ್‌-ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದೆ ಎಂಬುದು ಸುಳ್ಳು| ಯತ್ನಾಳ್‌ ವಿರುದ್ಧ ಇನ್ನೂ 2 ನೋಟಿಸ್‌ ನೀಡಿದ ಬಳಿಕ ಕ್ರಮ| ವೈಯಕ್ತಿಕ ದ್ವೇಷ ಯಾವುದೇ ರಾಜಕಾರಣಿ ಮೇಲಿಲ್ಲ. ವೈಚಾರಿಕ ವಿರೋಧ ಇದೆ. ಸಿದ್ದರಾಮಣ್ಣ ನಮ್ಮ ಪಕ್ಷದ ಬಗ್ಗೆ ಏನಾದರೂ ಮಾತನಾಡಿದರೆ ರಾಜ್ಯಾಧ್ಯಕ್ಷನಾಗಿ ಉತ್ತರ ಕೊಡುವುದು ನನ್ನ ಜವಾಬ್ದಾರಿ| ‘ಕನ್ನಡಪ್ರಭ’ಕ್ಕೆ ಕಟೀಲ್‌ ಸಂದರ್ಶನ| 

BJP State President Nalin Kumar Kateel Talks Over Byelection in Karnataka grg
Author
Bengaluru, First Published Apr 15, 2021, 9:43 AM IST

ವಿಜಯ್‌ ಮಲಗಿಹಾಳ

ಬೆಂಗಳೂರು(ಏ.15): ಪ್ರಸಕ್ತ ನಡೆಯುತ್ತಿರುವ ಒಂದು ಲೋಕಸಭಾ ಕ್ಷೇತ್ರ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಸಹಜವಾಗಿಯೇ ಆಡಳಿತಾರೂಢ ಬಿಜೆಪಿ ಪಾಲಿಗೆ ಮುಖ್ಯವಾದದ್ದು. ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಬಿಜೆಪಿಯೇ ಆಡಳಿತದ ಚುಕ್ಕಾಣಿ ಹಿಡಿದಿರುವುದರಿಂದ ಉಪಚುನಾವಣೆಯ ಆ ಸರ್ಕಾರಗಳ ವರ್ಚಸ್ಸಿಗೆ ಕನ್ನಡಿ ಹಿಡಿಯುತ್ತವೆ. ಹೀಗಾಗಿಯೇ ಬಿಜೆಪಿ ನಾಯಕರೆಲ್ಲರೂ ಈ ಮೂರು ಕ್ಷೇತ್ರಗಳಲ್ಲಿ ಕಾಲಿಗೆ ಚಕ್ರ ಸುತ್ತಿಕೊಂಡವರಂತೆ ಸುತ್ತಿ ಪ್ರಚಾರ ಕೈಗೊಂಡಿದ್ದಾರೆ. ಅವರೆಲ್ಲರ ಮುಂದಾಳತ್ವ ವಹಿಸಿರುವ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರು ಹಿಂದೆ ನಡೆದ 16 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಂತೆ ಈ ಮೂರೂ ಕ್ಷೇತ್ರಗಳ ಉಪಚುನಾವಣೆಯಲ್ಲೂ ಪ್ರವಾಸ ಕೈಗೊಂಡು ಪ್ರಚಾರ ನಡೆಸಿದ್ದಾರೆ. 

ಪ್ರಚಾರದ ಭರಾಟೆ ನಡುವೆ ಅವರು ‘ಕನ್ನಡಪ್ರಭ’ಕ್ಕೆ ವಿಶೇಷ ಸಂದರ್ಶನ ನೀಡಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

* ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ನಿಮ್ಮ ಪಕ್ಷಕ್ಕೆ ಈ ಉಪಚುನಾವಣೆ ಮಹತ್ವದ್ದಲ್ಲವೇ?

- ಖಂಡಿತ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಏಳೂವರೆ ವರ್ಷದ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳು, ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿರುವುದು ಹಾಗೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ಎರಡು ವರ್ಷದ ಸಾಧನೆಗಳು ಮುಂದಿಟ್ಟುಕೊಂಡು ಜನರ ಬಳಿ ಹೋಗಿದ್ದೇವೆ. ನೆರೆ, ಬರ ಮತ್ತು ಕೋವಿಡ್‌ ನಡುವೆಯೂ ಉತ್ತಮ ಬಜೆಟ್‌ ನೀಡಿದ್ದೇವೆ. ಅನೇಕ ಕಲ್ಯಾಣ ಯೋಜನೆಗಳು ಜನಸಾಮಾನ್ಯರಿಗೆ ತಲುಪುತ್ತಿವೆ. ಅಭಿವೃದ್ಧಿ ಕಾರ್ಯದಿಂದಲೇ ಮತಗಳನ್ನು ಪಡೆಯುತ್ತೇವೆ.

ಸಿದ್ದರಾಮಯ್ಯ ಸ್ಥಿಮಿತ ಕಳೆದುಕೊಂಡಿದ್ದಾರೆ: ಕಟೀಲ್‌

* ಈ ಫಲಿತಾಂಶ ಸರ್ಕಾರದ ಸಾಧನೆಯನ್ನು ಬಿಂಬಿಸುತ್ತದೆಯೇ?

- ಹೌದು. ಸರ್ಕಾರದ ಸಾಧನೆ ಮತ್ತು ಕಾರ್ಯವೈಖರಿ ಇಡೀ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತದೆ.

* ಮೂರು ಕ್ಷೇತ್ರಗಳಲ್ಲಿ ಪಕ್ಷದ ವರ್ಚಸ್ಸು ಹೇಗಿದೆ?

- ನೋಡಿ, ಮೂರು ಕ್ಷೇತ್ರಗಳಲ್ಲಿಯೂ ಬಿಜೆಪಿ ಕಾರ್ಯಕರ್ತರು ಭರ್ಜರಿಯಾಗಿ ಪ್ರಚಾರ ಕೈಗೊಂಡಿದ್ದಾರೆ. ಮನೆ ಮನೆಗೆ ಹೋಗಿ ಸರ್ಕಾರದ ಸಾಧನೆಗಳನ್ನು ತಿಳಿಸುವ ಕೆಲಸ ಮಾಡುತ್ತಿದ್ದಾರೆ. ನಾನೂ ಸಹ ಮೂರು ಕ್ಷೇತ್ರಗಳಿಗೂ ಭೇಟಿ ನೀಡಿ ಗಮನಿಸಿದ್ದೇನೆ. ಪ್ರಚಾರ ಕೈಗೊಂಡಿದ್ದೇನೆ. ಈ ಉಪಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸುವುದು ನಿಶ್ಚಿತ.

* ಬಸವಕಲ್ಯಾಣ ಕ್ಷೇತ್ರದಲ್ಲಿ ನಿಮ್ಮದೇ ಪಕ್ಷದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರನ್ನು ಮನವೊಲಿಸುವಲ್ಲಿ ವಿಫಲರಾದಿರಲ್ಲ?

- ಅವರೊಂದಿಗೆ ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ಮಾಡಿದೆವು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಅವರು ಪಕ್ಷವನ್ನು ಮೀರಿ ನಡೆದುಕೊಂಡಿದ್ದಾರೆ. ಹೀಗಾಗಿ ಅವರೊಂದಿಗೆ ಪಕ್ಷದ ಯಾವುದೇ ಸಂಬಂಧಗಳಿಲ್ಲ.

* ಈ ಉಪಚುನಾವಣೆ ಸಂದರ್ಭದಲ್ಲಿಯೂ ಪಕ್ಷದ ಹಿರಿಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಅವರು ಪ್ರತಿನಿತ್ಯ ಮುಖ್ಯಮಂತ್ರಿ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದು ನಿಮಗೆ ಮುಜುಗರ ಉಂಟು ಮಾಡುವುದಿಲ್ಲವೇ?

- ಈಗಾಗಲೇ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಅವರಿಗೆ ನೋಟಿಸ್‌ ನೀಡಲಾಗಿದೆ. ಪಕ್ಷದಿಂದ ಒಬ್ಬ ಶಾಸಕ ಬಿ ಫಾರಂ ತೆಗೆದುಕೊಂಡಿರುವ ಕಾರಣ ರಾಷ್ಟ್ರೀಯ ಶಿಸ್ತು ಸಮಿತಿ ನೊಟೀಸ್‌ ನೀಡಬೇಕು. ಒಟ್ಟು ಮೂರು ಬಾರಿ ನೊಟೀಸ್‌ ನೀಡಬೇಕಾಗಿದ್ದು, ಈಗಾಗಲೇ ಒಂದು ಬಾರಿ ನೀಡಲಾಗಿದೆ. ಅದಕ್ಕೆ ಉತ್ತರ ನೀಡಿದ್ದಾರೆ. ಎಚ್ಚರಿಕೆಯಿಂದ ಇರಬೇಕು. ಆದರೆ, ಅವರು ಎಚ್ಚರಿಕೆ ಮೀರಿ ನಡೆದುಕೊಳ್ಳುತ್ತಿದ್ದಾರೆ. ಪಕ್ಷ ಇದನ್ನು ಸಹಿಸುವುದಿಲ್ಲ.

'ಕಟೀಲ್‌ ವಿದೂಷಕ, ಬಾಯಿಗೆ ಬಂದಂತೆ ಮಾತನಾಡ್ತಾರೆ'

* ಅವರನ್ನು ಪಕ್ಷ ಸಹಿಸುವುದಿಲ್ಲ ಎಂದು ಹೇಳಿಯೇ ಹಲವು ತಿಂಗಳುಗಳು ಉರುಳಿವೆ? ಇನ್ನೂ ಎಷ್ಟುಕಾಲ ಸಹಿಸುತ್ತೀರಿ?

- ನಮ್ಮದು ರಾಷ್ಟ್ರೀಯ ಪಕ್ಷ. ಮೂರು ಬಾರಿ ನೋಟಿಸ್‌ ನೀಡಬೇಕು. ಶಿಸ್ತು ಸಮಿತಿ ಎಲ್ಲವನ್ನೂ ಗಮನಿಸುತ್ತಿದೆ. ಖಂಡಿತವಾಗಿ ಶಿಸ್ತು ಸಮಿತಿ ಏನು ಮಾಡಬೇಕೋ, ಅದನ್ನು ಮಾಡಲಿದೆ.

* ಯತ್ನಾಳ ವಿರುುದ್ಧ ಶಿಸ್ತು ಕ್ರಮ ಕೈಗೊಳ್ಳಲು ಪಕ್ಷದಲ್ಲಿ ಹಿಂಜರಿಕೆ ಇದೆಯೇ ಅಥವಾ ಅಜೆಂಡಾ ಇದೆಯೇ?

- ಯಾವುದೇ ಹಿಂಜರಿಕೆ ಅಥವಾ ಅಜೆಂಡಾ ಇಲ್ಲ. ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ. ಶಾಸಕರು ತಮ್ಮ ಮಿತಿ, ಜವಾಬ್ದಾರಿ ಮೀರಿದರೆ ಪಕ್ಷವು ತನ್ನ ಕ್ರಮ ತೆಗೆದುಕೊಳ್ಳಲಿದೆ. ಸಂವಿಧಾನಿಕ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಅವರು ಪ್ರಚಾರಕ್ಕಾಗಿ ಇದೆಲ್ಲ ಮಾಡುತ್ತಿದ್ದಾರೆ.

* ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮಾಜಿ ಶಾಸಕ ರಮೇಶ್‌ ಜಾರಕಿಹೊಳಿ ವಿಚಾರದಲ್ಲಿ ಇರಿಸು ಮುರಿಸಾಗುತ್ತಿದೆಯೇ?

- ಜನರು ಪಕ್ಷದ ಪರವಾಗಿದ್ದಾರೆ. ಬೇರೆ ವಿಚಾರಗಳು ಇಲ್ಲಿ ನಗಣ್ಯ. ದಿವಂಗತ ಸುರೇಶ್‌ ಅಂಗಡಿ ಅವರು ಸಂಸದರಾಗಿ ಮಾಡಿರುವ ಕೆಲಸ ಮತ್ತು ಅಭಿವೃದ್ಧಿ ಕಾರ್ಯಗಳು ಪಕ್ಷಕ್ಕೆ ಬೆಂಬಲವಾಗಿ ನಿಲ್ಲುತ್ತವೆ. ಬೆಳಗಾವಿ ಜನ ಅವರ ಮೇಲೆ ಇಟ್ಟಿರುವ ನಂಬಿಕೆ ಬಹಳಷ್ಟುಗೌರವವನ್ನು ತಂದು ಕೊಡುತ್ತದೆ.

* ಬಿಜೆಪಿ ಮತ್ತು ಜೆಡಿಎಸ್‌ ನಡುವೆ ಒಳ ಒಪ್ಪಂದ ಆಗಿದೆ ಎಂಬ ಆರೋಪ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ ಮಾಡುತ್ತಿದೆ?

- ಬಿಜೆಪಿಗೆ ಅದರ ಅನಿವಾರ್ಯತೆ ಇಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ಗೆಲುವಿನ ಹಂತದಲ್ಲಿರುವ ಪಕ್ಷ. ಎಲ್ಲಾ ಚುನಾವಣೆಯಲ್ಲಿಯೂ ಗೆಲುವು ಸಾಧಿಸಿಕೊಂಡು ಬರುತ್ತಿದೆ. ಈ ಉಪಚುನಾವಣೆಯಲ್ಲಿಯೂ ಎಲ್ಲ ಸವಾಲುಗಳನ್ನು ಸ್ವೀಕರಿಸಿದ್ದೇವೆ. ಬೇರೆ ಪಕ್ಷದೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳುವ ಅನಿವಾರ್ಯತೆ ಏನಿದೆ.

* ಪ್ರತಿಪಕ್ಷ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಮತ್ತು ನಿಮ್ಮ ನಡುವೆ ವಾದ-ಪ್ರತಿವಾದದ ಜುಗಲ್‌ಬಂದಿ ಜೋರಾಗಿಯೇ ನಡೆಯುತ್ತಿದೆ?

- ವೈಯಕ್ತಿಕ ದ್ವೇಷ ಯಾವುದೇ ರಾಜಕಾರಣಿ ಮೇಲಿಲ್ಲ. ವೈಚಾರಿಕ ವಿರೋಧ ಇದೆ. ಸಿದ್ದರಾಮಣ್ಣ ನಮ್ಮ ಪಕ್ಷದ ಬಗ್ಗೆ ಏನಾದರೂ ಮಾತನಾಡಿದರೆ ರಾಜ್ಯಾಧ್ಯಕ್ಷನಾಗಿ ಉತ್ತರ ಕೊಡುವುದು ನನ್ನ ಜವಾಬ್ದಾರಿ. ಪಕ್ಷವನ್ನು ಪ್ರಶ್ನಿಸಿದರೆ ಯಾವುದೇ ಮುಲಾಜಿಲ್ಲದೆ ಉತ್ತರ ಕೊಡುತ್ತೇನೆ.
 

Follow Us:
Download App:
  • android
  • ios