ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆ ಹೋದ ಕಡೆ ಕಾಂಗ್ರೆಸ್‌ ಪಕ್ಷ ಸೋತಿದೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ 150 ಸ್ಥಾನಗಳ ಗೆಲುವು: ಕಟೀಲ್‌

ಬೆಂಗಳೂರು(ನ.04): ಮುಂಬರುವ ವಿಧಾನಸಭಾ ಚುನಾವಣೆಯ ಒಳಗೆ ಕಾಂಗ್ರೆಸ್‌ ಮನೆಯ ಬಾಗಿಲು ಮುಚ್ಚುತ್ತಾರೆ. ಏಕೆಂದರೆ, ಕಾಂಗ್ರೆಸ್‌ನ ಹತ್ತಾರು ಜನ ನಮ್ಮ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ಗುರುವಾರ ಪಕ್ಷದ ಕಚೇರಿಯಲ್ಲಿ ವಿವಿಧ ಪಕ್ಷಗಳ ಮುಖಂಡರನ್ನು ಬರಮಾಡಿಕೊಂಡ ಬಳಿಕ ಮಾತನಾಡಿದ ಅವರು, ಇದೊಂದು ವಿಶೇಷ ಸಂದರ್ಭ ಮಾತ್ರವಲ್ಲ, ರಾಜಕೀಯ ಬದಲಾವಣೆಯ ಸಂಕೇತವೂ ಆಗಿದೆ. ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆ ಮೂಲಕ ಹೋದ ಕಡೆ ಕಾಂಗ್ರೆಸ್‌ ಪಕ್ಷ ಸೋತಿದೆ. ಕೊಳ್ಳೇಗಾಲದಲ್ಲಿ ಏಳರಲ್ಲಿ ಆರು ಸ್ಥಾನಗಳನ್ನು ಬಿಜೆಪಿ ಗೆದ್ದಿರುವುದೇ ಇದಕ್ಕೆ ಸಾಕ್ಷಿ. ವಿಜಯಪುರದಲ್ಲೂ ಬಿಜೆಪಿ ಅತಿ ಹೆಚ್ಚು ಸ್ಥಾನ ಗೆದ್ದಿದೆ. ಕಾಂಗ್ರೆಸ್‌ ಮನೆ ಖಾಲಿ ಆಗುವುದರ ಸಂಕೇತ ಇದಾಗಿದೆ. ಬಿಜೆಪಿ ಕಮಲ ಮತ್ತೆ ಮುಂದಿನ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಅರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯಗೆ ಧಮ್ ಇದ್ದರೆ ಬಾದಾಮಿಯಿಂದ ಸ್ಪರ್ಧೆ ಮಾಡಲಿ; ಕಟೀಲ್ ಸವಾಲ್!

ರಾಷ್ಟ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಜನರು ಒಪ್ಪಿದ್ದಾರೆ. ದೇಶದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಬೊಮ್ಮಾಯಿ ಅವರು ಎಸ್ಸಿ, ಎಸ್ಟಿಸಮುದಾಯಕ್ಕೆ ಹಾಗೂ ಪೌರಕಾರ್ಮಿಕರಿಗೆ ನ್ಯಾಯ ನೀಡಿದ್ದಾರೆ. ಅದರ ನಂತರ ರಾಜ್ಯದ ಚಿತ್ರಣ ಬದಲಾಗಿದೆ. ಬಿಜೆಪಿ ಗೆಲುವು ಖಚಿತವಾಗಿದೆ. ಕಾಂಗ್ರೆಸ್‌ ಪಕ್ಷವು ತನ್ನ ತಲೆತಲಾಂತರದ ಮತಗಳೆಂದು ನಂಬಿದ್ದ ಮತಗಳು ಕೈಬಿಟ್ಟು ಹೋಗಿವೆ. ಕಾರ್ಯಕರ್ತರೇ ಆ ಪಕ್ಷವನ್ನು ಕೈಬಿಟ್ಟಿದ್ದಾರೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದರು.

ಡಿಕೆಶಿ-ಸಿದ್ರಾಮಣ್ಣ ನಾಟಕ ಕಂಪನಿ:

ಕಾಂಗ್ರೆಸ್‌ ಪಕ್ಷಕ್ಕೆ ಸೋಲುವ ಭಯ ಕಾಡುತ್ತಿದೆ. ಬಿಜೆಪಿಗೆ ಬಂದವರೆಲ್ಲರೂ ನಾಯಕರಾಗಿದ್ದಾರೆ. ಹಾಲಿನೊಳಗೆ ಸಕ್ಕರೆ ಬೆರೆತಂತೆ ಸಿಹಿ ಮಾತ್ರ ಇರಬೇಕು. ನಮ್ಮೊಳಗೆ ಒಂದಾಗಬೇಕು. ಮುದ್ದಹನುಮೇಗೌಡರಿಗೆ ಕಾಂಗ್ರೆಸ್‌ ಪಕ್ಷ ಅನ್ಯಾಯ ಮಾಡಿತ್ತು. ಅವರಿಗೆ ಕಾಂಗ್ರೆಸ್‌ ಪಕ್ಷದ ನೈಜ ಬಣ್ಣದ ಅರಿವಾಗಿದೆ. ರಾಜ್ಯದ ಕಾಂಗ್ರೆಸ್‌ ಪಕ್ಷವು ಸಿದ್ರಾಮಣ್ಣನ ನಾಟಕ ಕಂಪೆನಿ ಮತ್ತು ಡಿಕೆಶಿ ನಾಟಕ ಕಂಪೆನಿಯಾಗಿ ಎರಡು ಗುಂಪಾಗಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಮುಕ್ತ ಕರ್ನಾಟಕ ಆಗಲಿದೆ ಎಂದರು.