ಇತ್ತೀಚೆಗೆ ಪಕ್ಷದ ವಿರುದ್ಧ ಬಹಿರಂಗವಾಗಿ ಬೇಸರ ಹೊರಹಾಕಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಡಿ.ವಿ.ಸದಾನಂದಗೌಡ ಅವರನ್ನು ಮನವೊಲಿಸುವ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಗೌಡರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. 

ಬೆಂಗಳೂರು (ಜ.19): ಇತ್ತೀಚೆಗೆ ಪಕ್ಷದ ವಿರುದ್ಧ ಬಹಿರಂಗವಾಗಿ ಬೇಸರ ಹೊರಹಾಕಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಡಿ.ವಿ.ಸದಾನಂದಗೌಡ ಅವರನ್ನು ಮನವೊಲಿಸುವ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಗೌಡರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಹೊಸ ವರ್ಷದ ಶುಭಾಶಯ ಕೋರುವ ನೆಪದಲ್ಲಿ ಸದಾನಂದಗೌಡರ ನಿವಾಸಕ್ಕೆ ತೆರಳಿದ ವಿಜಯೇಂದ್ರ ಅವರು ಕೆಲಕಾಲ ಸಮಾಲೋಚನೆ ನಡೆಸಿ ಅವರ ಅಸಮಾಧಾನಕ್ಕೆ ಕಾರಣವಾಗಿದ್ದ ವಿಷಯಗಳನ್ನು ಬಗೆಹರಿಸುವ ಪ್ರಯತ್ನ ಮಾಡಿದರು.

ಇದೇ ವೇಳೆ ಗೌಡರು ಮತ್ತೊಮ್ಮೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ವಿಜಯೇಂದ್ರ ಅವರು ಯಾವುದೇ ರೀತಿಯ ಪ್ರಸ್ತಾಪ ಮಾಡದೆ ಹೈಕಮಾಂಡ್‌ ನಿರ್ಧಾರಕ್ಕೆ ಬಿಡುವ ಮಾತುಗಳನ್ನಾಡಿದರು ಎನ್ನಲಾಗಿದೆ. ಬಳಿಕ ಮಾತನಾಡಿದ ಸದಾನಂದಗೌಡರು, ವಿಜಯೇಂದ್ರ ಅವರು ಶುಭಾಶಯ ಕೋರಲು ನಮ್ಮ ಮನೆಗೆ ಆಗಮಿಸಿದ್ದರು. ಬಹಳ ಸಂತೋಷವಾಯ್ತು. ಕೆಲವೊಂದು ವ್ಯತ್ಯಾಸಕ್ಕಾಗಿ ಸಂಬಂಧಗಳ ಮೇಲೆ ಪರಿಣಾಮ ಉಂಟಾಯಿತು. ಇನ್ನು ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುವೆ ಎಂಬ ಭರವಸೆಯನ್ನು ವಿಜಯೇಂದ್ರ ಅವರು ನೀಡಿದ್ದಾರೆ. ಇದು ಒಬ್ಬ ಯಶಸ್ವಿ ನಾಯಕನಿಗೆ ಇರಬೇಕಾದ ಲಕ್ಷಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅನಂತ್‌ ಹೇಳಿಕೆಗೂ ಬಿಜೆಪಿಗೂ ಸಂಬಂಧವಿಲ್ಲ:  ‘ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಅವರ ಹೇಳಿಕೆಗಳು ಪಕ್ಷದ ನಿಲುವಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅನಂತಕುಮಾರ ಹೆಗಡೆ ಅವರ ಹೇಳಿದ್ದನ್ನು ನಾನು ಕೂಡ ಗಮನಿಸಿದ್ದೇನೆ. ಅದು ಅವರ ವೈಯಕ್ತಿಕ ಹೇಳಿಕೆ ಹೊರತು ಪಕ್ಷದ ನಿಲುವಲ್ಲ. ಅವರ ಬಳಿ ನಾನು ವೈಯಕ್ತಿಕವಾಗಿ ಚರ್ಚೆ ಮಾಡುತ್ತೇನೆ’ ಎಂದು ತಿಳಿಸಿದರು.

ಕೆಲ ಸ್ವಾಮೀಜಿಗಳಿಂದ ರಾಜಕೀಯಕ್ಕಾಗಿ ಶ್ರೀ ರಾಮಮಂದಿರ ಬಗ್ಗೆ ಅಪಸ್ವರ: ಸಂಸದ ಪ್ರತಾಪ್ ಸಿಂಹ

ಇತ್ತೀಚೆಗೆ ಕುಮಟಾದಲ್ಲಿ ಮಾಡಿದ ಭಾಷಣದಲ್ಲಿ ಅನಂತಕುಮಾರ ಹೆಗಡೆ ಅವರು ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ಸಂಬೋಧಿಸಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲವು ಮಸೀದಿಗಳು ಮೂಲತಃ ದೇವಾಲಯಗಳಾಗಿದ್ದು, ಅವನ್ನು ತೆರವು ಮಾಡಿ ಅಯೋಧ್ಯೆ ಮಾದರಿಯಲ್ಲಿ ಮಂದಿರ ನಿರ್ಮಾಣ ಮಾಡುವುದಾಗಿ ಹೇಳಿದ್ದರು. ಅನಂತಕುಮಾರ ಹೆಗಡೆ ಅವರ ಮಾತುಗಳನ್ನು ಕಾಂಗ್ರೆಸ್‌ ಪಕ್ಷ ಹಾಗೂ ಕಾಂಗ್ರೆಸ್‌ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಬಿಜೆಪಿಯಲ್ಲೂ ಅವರ ಹೇಳಿಕೆಯ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆದಿವೆ.