ಬೆಂಗಳೂರು, (ಡಿ.05): ಅತ್ತ ಬೆಳಗಾವಿಯಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯುತ್ತಿದ್ದರೆ, ಇತ್ತ ಬೆಂಗಳೂರಿನಲ್ಲಿ ಬಿಜೆಪಿ ನಾಯಕರುಗಳು ಸಭೆ ನಡೆಸಿರುವುದು ಭಾರೀ ಕುತೂಹಲ ಮೂಡಿಸಿದೆ.

ಹೌದು...ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಸಲು ಹೈಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಬಿಜೆಪಿಯ ಸಚಿವರು, ಬೆಂಗಳೂರಿನ ಶಾಸಕರ ಸಭೆ ನಡೆಯಿತು.

ಕುಮಾರಕೃಪಾ ಅತಿಥಿಗೃಹದಲ್ಲಿ ನಡೆದ ಸಭೆಯಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ, ಸಚಿವರಾದ ಎಸ್.ಟಿ. ಸೋಮಶೇಖರ, ಕೆ. ಗೋಪಾಲಯ್ಯ, ಶಾಸಕರಾದ ಸತೀಶ್ ರೆಡ್ಡಿ, ಮುನಿರತ್ನ, ರವಿ ಸುಬ್ರಮಣ್ಯ ಭಾಗಿಯಾಗಿದ್ದರು. 

ಬಿಬಿಎಂಪಿ ಚುನಾವಣೆ ಭವಿಷ್ಯ: ಮಹತ್ವದ ತೀರ್ಪು ನೀಡಿದ ಹೈಕೋರ್ಟ್..!

ಚುನಾವಣೆ ಪೂರ್ಣ ತಯಾರಿ ಬಗ್ಗೆ ಸಭೆ ನಡೆಸಿರಬಹುದು. ಆದ್ರೆ, ಅತ್ತ ಪ್ರಮುಖ ನಾಯಕರುಗಳು ಕೋರ್ ಕಮಿಟಿ ಸಭೆಯಯಲ್ಲಿ ಇರುವಾಗಲೇ ಇತ್ತ ಕೆಲ ಸಚಿವರು, ಶಾಸಕರು ಸಭೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಇನ್ನು ಈ ಹಿಂದೆ ಬಿಬಿಎಂಪಿ ಉಸ್ತುವಾರಿಯಾಗಿದ್ದ ಸಚಿವ ಅಶೋಕ್ ಅವರನ್ನ ಸೈಡ್ ಮಾಡಿ ಅಶ್ವತ್ಥ್ ನಾರಾಯಣ ಅವರು ಮುನ್ನೆಲೆಗೆ ಬರಲು ಈ ಸಭೆ ನಡೆಸಿದ್ದಾರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಯಾಕಂದ್ರೆ ಅಶೋಕ್ ಅವರು ಕೋರ್ ಕಮಿಟಿ ಸಭೆಗೆಂದು ಬೆಳಗಾವಿಗೆ ಹೋಗಿದ್ದಾರೆ. ಇದೇ ಸಿಕ್ಕ ಅವಕಾಶವೆಂದು ಬೆಂಗಳೂರು ಶಾಸಕರನ್ನ ಬುಟ್ಟಿಗೆ ಹಾಕಿಕೊಳ್ಳಲು ಅಶ್ವತ್ಥ್ ನಾರಾಯಣ ಪ್ಲಾನ್ ಮಾಡಿದ್ದಾರಾ ಎನ್ನುವ ಮಾತುಗಳು ಸಹ ಕೇಳಿಬರುತ್ತಿವೆ.

ಈ ಬಗ್ಗೆ ಮಾತನಾಡಿದ ಸಚಿವ ಎಸ್.‌ಟಿ.‌ ಸೋಮಶೇಖರ್, ಬಿಬಿಎಂಪಿ ಚುನಾವಣೆ ವಿಚಾರದಲ್ಲಿ ಸಭೆ ಸೇರಿದ್ದೆವು. ಆದರೆ ಇಂದಿನ‌ ಸಭೆ ಅಪೂರ್ಣ ಆಗಿದೆ. ಸಚಿವ ಅಶೋಕ್, ಎಸ್.ಆರ್. ವಿಶ್ವನಾಥ್, ಅರವಿಂದ ಲಿಂಬಾವಳಿ ಅವರೆಲ್ಲಾ‌ ಭಾಗವಹಿಸಿದ ಕಾರಣ ಸಭೆ ಪೂರ್ಣವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಸೋಮವಾರ ಅಧಿವೇಶನ ನಡೆಯುವ ವೇಳೆ ಎಲ್ಲರೂ ಸೇರಿ ಮತ್ತೆ ಚರ್ಚೆ ಮಾಡುತ್ತೇವೆ. ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಯಾರೂ ಹೇಳಿಕೆ ನೀಡಬಾರದು, ಕ್ರಮ ತೆಗೆದುಕೊಳ್ಳುತ್ತೇವೆ ಎಂದು ವರಿಷ್ಠರು ಹೇಳಿದ್ದಾರೆ. ಹಾಗಾಗಿ ಆ ಬಗ್ಗೆ ಏನೂ ಪ್ರತಿಕ್ರಿಯಿಸುವುದಿಲ್ಲ ಎಂದರು.